Dharmasthala Case: 'ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಸರ್ಕಾರ ಕ್ರಮ'
ಬೆಂಗಳೂರು, ಆಗಸ್ಟ್15: ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಇದು ಧರ್ಮಸ್ಥಳದ ಪರ ಅಥವಾ ವಿರುದ್ಧದ ವಿಚಾರವಲ್ಲ. ಎಲ್ಲಾ ಪ್ರಕ್ರಿಯೆ ನ್ಯಾಯಬದ್ಧವಾಗಿ ನಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಾತನಾಡಿ, ಧರ್ಮಸ್ಥಳವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಭಕ್ತಿ, ಶ್ರದ್ಧೆ ಪ್ರಕ್ರಿಯೆಗಳ ಮೇಲೆ ನನಗೆ ನಂಬಿಕೆ, ಆತ್ಮವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಅಲ್ಲಿ ನಡೆದಿರುವ ಷಡ್ಯಂತ್ರ ಹೊರಬರಲಿದೆ ಎಂಬ ವಿಶ್ವಾಸ ನನ್ನದು. ಈ ಪ್ರಕರಣದ ವಿಚಾರವಾಗಿ ನಮ್ಮ ಗೃಹ ಸಚಿವರು ಅಧಿವೇಶನದಲ್ಲಿ ಉತ್ತರ ನೀಡುವ ಮೂಲಕ ರಾಜ್ಯದ ಮುಂದೆ ಸತ್ಯಾಂಶ ಇಡಲಿದ್ದಾರೆ ಎಂದು ತಿಳಿಸಿದರು.

ಇಲ್ಲಿ ಷಡ್ಯಂತ್ರ ನಡೆದಿದೆಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಈ ವಿಚಾರವನ್ನು ಗೃಹ ಸಚಿವರೇ ವಿವರಿಸಲಿದ್ದಾರೆ. ಮುಖ್ಯಮಂತ್ರಿಗಳಿಗೂ ಈ ವಿಚಾರದಲ್ಲಿ ಬದ್ಧತೆ ಇದೆ. ಯಾರೂ ಕೂಡ ಸುಳ್ಳು, ಷಡ್ಯಂತ್ರ ಮೂಲಕ ಅಪಮಾನ, ಅಪಪ್ರಚಾರ ನಡೆಸುವಂತಿಲ್ಲ ಎಂದು ಸಿಎಂ ನಮಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ. ಸುಳ್ಳು ಆರೋಪ ಮಾಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವು ನಡೆಯುತ್ತೇವೆ. ಕಾನೂನು ಎಲ್ಲರಿಗೂ ಒಂದೇ. ನಾವು ಅದನ್ನು ಕಾಪಾಡಬೇಕು. ಇಲ್ಲಿ ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಅನಗತ್ಯವಾಗಿ ಯಾರ ತೇಜೋವಧೆ ಮಾಡುವಂತಿಲ್ಲ ಎಂದು ತಿಳಿಸಿದರು.
ಕುತಂತ್ರಗಳ ಮೂಲಕ ಈ ಸ್ವಾತಂತ್ರ್ಯಕ್ಕೆ ಧಕ್ಕೆ ತರುವವರು ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಜೀವನದ ವಿರೋಧಿಗಳು. ಸಮಾಜಘಾತುಕರು ಎಂದು ಪರಿಗಣಿಸಬೇಕು. ಇವರನ್ನು ಸ್ವಾತಂತ್ರ್ಯದ ವೈರಿಗಳೆಂದು ಪರಿಗಣಿಸಬೇಕು. ದೇಶದ ಹಿತದೃಷ್ಟಿಯಿಂದ ಸಂವಿಧಾನಕ್ಕೆ ಆಗುವ ಮೋಸ ತಡೆಯಬೇಕು. ಸಂವಿಧಾನದ ಆಶಯಗಳನ್ನು ಉಳಿಸಬೇಕು. ಇಂದು ಮತ ಕಳ್ಳತನ ದೇಶದ ಗೌರವಕ್ಕೆ ಧಕ್ಕೆ ತರುವಂತಾಗಿದೆ. ಇದರ ವಿರುದ್ಧದ ಹೋರಾಟಕ್ಕೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಮುನ್ನುಡಿ ಬರೆದಿದ್ದಾರೆ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಎರಡೂ ವರೆ ವರ್ಷಗಳ ನಿಮ್ಮ ಪರಿಶ್ರಮದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಜನರ ಬದುಕಿನ ಬಗ್ಗೆ ಆಲೋಚಿಸಿ ರಾಜಕಾರಣ ಮಾಡುತ್ತಿದೆ. ಆದರೆ ವಿರೋಧ ಪಕ್ಷಗಳು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಮುಂದಿನ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾವು ಸಜ್ಜಾಗಬೇಕಿದೆ. ಮುಂದಿನ ಆರು ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ನೀವೆಲ್ಲರೂ ಇದಕ್ಕಾಗಿ ಶ್ರಮಿಸಬೇಕು. 2028ರಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಜನರ ಬದುಕಿಗೆ ಹೊಸರೂಪ ನೀಡಲು ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಪಕ್ಷದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದೇವೆ. ದೇಶದಲ್ಲಿ ಹೊಸ ತಿರುವು ಪ್ರಾರಂಭವಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಕಾನೂನು ಚೌಕಟ್ಟಿನಲ್ಲಿ ಸಂವಿಧಾನದ ಅಡಿಯಲ್ಲಿ ನಡೆಸಲು ಹೊಸ ರೂಪ ಬಂದಿದೆ. ದೇಶದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳು ಒಟ್ಟಾಗಿ ಹೋರಾಟ ಮಾಡುತ್ತಿರುವುದು ಸಂತೋಷದ ವಿಚಾರ. ಇದರಲ್ಲಿ ನಾವು ಮುಂದಾಳತ್ವ ವಹಿಸಿ ಹೆಜ್ಜೆ ಇಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂಬ ವಿಶ್ವಾಸ ನಮಗಿದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಪ್ರತಿಜ್ಞೆ ಮಾಡಿದ್ದೇವೆ ಎಂದು ತಿಳಿಸಿದರು.












Click it and Unblock the Notifications