ಆರೋಪಿ, ದೂರದಾರರು ರಾಜಿಯಾದರೆ ಅತ್ಯಾಚಾರ ಪ್ರಕರಣ ಖಲ್ಲಾಸ್… !
ಬೆಂಗಳೂರು ಜೂ.2. ದೂರುದಾರ ಮತ್ತು ಆರೋಪಿಗಳ ರಾಜಿ ಮೂಲಕ ಒಂದಾಗಿ ವ್ಯಾಜ್ಯ ಬಗೆಹರಿಸಿಕೊಂಡರೆ, ಅಂತಹ ವೇಳೆ ಅತ್ಯಾಚಾರ ಪ್ರಕರಣವನ್ನೂ ಸಹ ಮುಕ್ತಾಯಗೊಳಿಸಬಹುದು ಎಂದು ಹೈಕೋರ್ಟ್ ಹೇಳಿದೆ. ಆ ಮೂಲಕ ಯಾವುದೋ ಕೆಟ್ಟ ಘಳಿಗೆಯಲ್ಲಿ ಅನಗತ್ಯವಾಗಿ ಅತ್ಯಾಚಾರ ಆರೋಪದ ಮೇಲೆ ಸುಮ್ಮನೆ ದಾಖಲಿಸಿದ್ದ ಹಲವು ಪ್ರಕರಣಗಳ ವಿಲೇವಾರಿ ನಿಟ್ಟಿನಲ್ಲಿ ಮಹತ್ವದ ಆದೇಶ ನೀಡಿದೆ.
ಅಲ್ಲದೆ, ಮಹಿಳೆಯೊಬ್ಬರು ತಮ್ಮ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ರದ್ದುಪಡಿಸಿದೆ.
ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿಗಳಾದ ಕೆ.ಸತೀಸ್, ಶ್ರೀನಿವಾಸ್, ಕೋಕಿಲ ಮತ್ತು ಮಮತಾ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಎಲ್ಲಾ ಆರೋಪಿಗಳು ಮತ್ತು ದೂರುದಾರ ಮಹಿಳೆಯು ಹೈಕೋರ್ಟ್‌ಗೆ ಹಾಜರಾಗಿ, ಪ್ರಕರಣವನ್ನು ರಾಜಿ ಮೂಲಕ ಮುಕ್ತಾಯಗೊಳಿಸಲು ಉದ್ದೇಶಿಸಲಾಗಿದೆ. ದೂರನ್ನು ಹಿಂಪಡೆಯಲು ದೂರುದಾರರು ಸಹ ಒಪ್ಪಿದ್ದಾರೆ ಎಂದು ತಿಳಿಸಿ ಜಂಟಿ ಮೊಮೊ ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲರು, ರಾಜಿ ಸಂಧಾನದ ಮೂಲಕ ಅತ್ಯಾಚಾರ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದು ಎಂಬುದಾಗಿ ಸ್ಪಷ್ಟಪಡಿಸಿ ಸುಪ್ರೀಂ ಕೋರ್ಟ್ ಮತ್ತು ದೇಶದ ಹಲವು ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು ಮತ್ತು ಈ ಪ್ರಕರಣದಲ್ಲೂ ಸಹ ರಾಜೀ ಒಪ್ಪಿ ಕೇಸ್ ಮುಕ್ತಾಯಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಅರ್ಜಿದಾರ ಹಾಗೂ ಆರೋಪಿಗಳ ಮೊಮೊ ಒಪ್ಪಿಕೊಂಡ ನ್ಯಾಯಪೀಠವು ದೂರುದಾರಳು ವಿವಾಹಿತರಾಗಿದ್ದು, ಗಂಡನ ಜೊತೆಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಆರೋಪಿಗಳು ದೂರುದಾರ ಕುಟುಂಬದ ಸದಸ್ಯರೇ ಆಗಿದ್ದಾರೆ. ಹಾಗಾಗಿ, ಆರೋಪಿಗಳು ಮತ್ತು ದೂರುದಾರರು ಸಲ್ಲಿಸಿರುವ ಮೊಮೊವನ್ನು ಪರಿಗಣಿಸಬಹುದಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಪಕ್ಷಗಾರರು ರಾಜಿಯಾದ ಸಂದರ್ಭದಲ್ಲಿ ಆ ಪ್ರಕರಣವನ್ನು ನ್ಯಾಯಾಲಯ ಮುಕ್ತಾಯಗೊಳಿಸಲ ಅವಕಾಶವಿದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲಾಗಿದೆ ಎಂದು ಆದೇಶಿಸಿತು.
ಮಹಿಳೆಯೊಬ್ಬರು 2022ರ ಫೆ.16ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ಸತೀಶ್ ವಿರುದ್ಧ ಅತ್ಯಾಚಾರ ಹಾಗೂ ಉಳಿದ ಮೂವರು ಆರೋಪಿಗಳ ವಿರುದ್ಧ ಜೀವ ಬೆದರಿಕೆ, ಅವಮಾನಪಡಿಸಿದ ಮತ್ತು ವಸೂಲಿ ಆರೋಪ ಮಾಡಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications