Abdul Jabbar: ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಜಬ್ಬಾರ್ ಅಮಾನತು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕ್ರಮ
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ (MLC) ಅಬ್ದುಲ್ ಜಬ್ಬಾರ್ ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಅಬ್ದುಲ್ ಜಬ್ಬಾರ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧವಾಗಿ ಮತ್ತು ಪಕ್ಷದ ಹಿತಾಸಕ್ತಿಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ತಿಳಿಸಿದೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವುದಕ್ಕಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪಕ್ಷದ ಹಿರಿಯ ನಾಯಕರಾಗಿದ್ದರೂ, ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಕೆಲಸ ಮಾಡಿದ್ದಕ್ಕಾಗಿ ಈ ಅಮಾನತು ಆದೇಶ ಹೊರಡಿಸಲಾಗಿದೆ. ಕಾಂಗ್ರೆಸ್ ಪಕ್ಷವು ತನ್ನ ಆಂತರಿಕ ಶಿಸ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

ಬಂಡಾಯ ನಾಯಕರಿಗೆ ಖಡಕ್ ಎಚ್ಚರಿಕೆ
ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಅಡ್ಡಿಪಡಿಸಿದ ಮತ್ತು ಚುನಾವಣಾ ಸಮಯದಲ್ಲಿ ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ ಈ ಕಠಿಣ ಕ್ರಮ ಜರುಗಿಸಲಾಗಿದೆ. ಉಪಚುನಾವಣೆ ಮುಗಿದ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆಯು ಪಕ್ಷದಲ್ಲಿನ ಅತೃಪ್ತ ಮತ್ತು ಬಂಡಾಯ ನಾಯಕರಿಗೆ ಡಿ.ಕೆ.ಶಿವಕುಮಾರ್ ಅವರು ನೀಡಿರುವ ನೇರ ಎಚ್ಚರಿಕೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಬ್ದುಲ್ ಜಬ್ಬಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು.
ಈ ಅಮಾನತು ಕೇವಲ ಶಿಸ್ತು ಕ್ರಮವಾಗಿ ಮಾತ್ರವಲ್ಲದೆ, ಪಕ್ಷದ ಒಳಗಿನ ಬಣ ರಾಜಕೀಯದ ಮೇಲಾಟವಾಗಿಯೂ ಕಾಣುತ್ತಿದೆ. ಅಬ್ದುಲ್ ಜಬ್ಬಾರ್ ಅವರ ಮೇಲಿನ ಈ ಕ್ರಮವು ಸಿಎಂ ಸಿದ್ದರಾಮಯ್ಯ ಬಣಕ್ಕೆ ರಾಜಕೀಯವಾಗಿ ಪೆಟ್ಟು ನೀಡಿದಂತಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಮೇಲೆ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಒಟ್ಟಾರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷ ಸ್ಫೋಟಗೊಂಡಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಗಂಭೀರ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಅಮಾನತು ಆದೇಶಕ್ಕೆ ಅಬ್ದುಲ್ ಜಬ್ಬಾರ್ ಕಿಡಿ
ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಅಮಾನತುಗೊಂಡಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಈಗ ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೇ ಸಮರ ಸಾರಿದ್ದಾರೆ. ತಮ್ಮ ಮೇಲಿನ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು ನನ್ನ ವಿರುದ್ಧ ಸಾಕ್ಷ್ಯಗಳಿದ್ದರೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಎಂದು ನಾಯಕರಿಗೆ ನೇರ ಸವಾಲು ಹಾಕಿದ್ದಾರೆ. ನನ್ನನ್ನು ಪಕ್ಷದಿಂದ ಅಮಾನತು ಮಾಡಿರುವ ಬಗ್ಗೆ ನನಗೆ ಇನ್ನೂ ಯಾವುದೇ ಅಧಿಕೃತ ನೋಟಿಸ್ ಅಥವಾ ಪತ್ರ ಬಂದಿಲ್ಲ. ಕೇವಲ ಮಾಧ್ಯಮಗಳ ಮೂಲಕವಷ್ಟೇ ಈ ಸುದ್ದಿ ತಿಳಿಯುತ್ತಿದೆ. ಅಧಿಕೃತವಾಗಿ ಮಾಹಿತಿ ಬಂದ ನಂತರವಷ್ಟೇ ನಾನು ಕಾನೂನಾತ್ಮಕವಾಗಿ ಅಥವಾ ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತೇನೆ ಎಂದಿದ್ದಾರೆ.
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಎಸಗಿದ್ದೇನೆ ಎಂಬ ಆರೋಪವನ್ನು ತಿರಸ್ಕರಿಸಿರುವ ಜಬ್ಬಾರ್, ನಾನು ಪಕ್ಷದ ವಿರುದ್ಧ ಕೆಲಸ ಮಾಡಿದ್ದೇನೆ ಎನ್ನುವುದಕ್ಕೆ ನಿಮ್ಮ ಬಳಿ ಯಾವುದಾದರೂ ಆಡಿಯೋ ಅಥವಾ ವಿಡಿಯೋ ಸಾಕ್ಷ್ಯಗಳಿವೆಯೇ? ಸುಖಾಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬೇಡಿ. ದಾಖಲೆಗಳಿದ್ದರೆ ತೋರಿಸಲಿ" ಎಂದು ಗುಡುಗಿದ್ದಾರೆ.
ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಅಸಮಾಧಾನ ಹೊರಹಾಕಿ, "ಕಾಂಗ್ರೆಸ್‌ನಲ್ಲಿ ಒಬ್ಬರಿಗೊಂದು, ಮತ್ತೊಬ್ಬರಿಗೊಂದು ನ್ಯಾಯ ಎಂಬಂತಾಗಿದೆ. ಕ್ಷೇತ್ರದಲ್ಲಿ ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಯಾಗಲಿ ಅಥವಾ ಸ್ಥಳೀಯ ಮುಖಂಡರಾಗಲಿ ಬಂದು ನನ್ನನ್ನು ಮಾತನಾಡಿಸಲಿಲ್ಲ. ಹೀಗಿದ್ದಾಗ ನಾನು ಸುಮ್ಮನೆ ಕೂರಬೇಕಾಯಿತು. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನೇ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೆ. ಹಳೆಯ ಘಟನೆಗಳನ್ನು ನೆಪವಾಗಿಟ್ಟುಕೊಂಡು ಈಗ ಸೇಡಿನ ರಾಜಕಾರಣ ಮಾಡಲಾಗುತ್ತಿದೆ" ಎಂದು ದೂರಿದ್ದಾರೆ.












Click it and Unblock the Notifications