ಕೈ ಪಾಳಯದಲ್ಲಿ ಭುಗಿಲೆದ್ದ ಕಿಚ್ಚು; ಶಾಸಕರಿಗೆ ಡಿ ಕೆ ಶಿವಕುಮಾರ್ ಕೊಟ್ಟ ಎಚ್ಚರಿಕೆ ಏನು?
ಬೆಂಗಳೂರು, ಅಕ್ಟೋಬರ್ 28: ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ನಲ್ಲಿ ದಿನೇ ದಿನೇ ಅಸಮಾಧಾನಿತರ ಸಂಖ್ಯೆ ಹೆಚ್ಚಾಗಿದ್ದು, ಪಕ್ಷದ ವಿಚಾರವನ್ನ ಬಹಿರಂಗವಾಗಿ ಮಾಧ್ಯಮಗಳ ಮುಂದೆ ವ್ಯಕ್ತಪಡಿಸುತ್ತಿರುವ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಹೌದು, ಈ ಕುರಿತು ಶನಿವಾದ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಕ್ಷದ ಶಾಸಕರು ಯಾರೇ ಆಗಲಿ ಪಕ್ಷದ ಆಂತರಿಕ ವಿಚಾರ, ಸರ್ಕಾರ ಹಾಗೂ ಅಧಿಕಾರದ ಬಗ್ಗೆ ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆ ನೀಡಬಾರದು ಎಂದು ಮನವಿ ಹಾಗೂ ಎಚ್ಚರಿಕೆ ನೀಡುತ್ತೇನೆ. ಇಷ್ಟರ ನಂತರವೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ವಿಧಿ ಇಲ್ಲದೆ ಅವರಿಗೆ ನೊಟೀಸ್ ನೀಡಬೇಕಾಗುತ್ತದೆ ಎಂದು ಡಿ ಕೆ ಶಿವಕುಮಾರ್ ಶಾಸಕರಿಗೆ ಎಚ್ಚರಿಕೆ ನೀಡಿದ್ಧಾರೆ.

ಇನ್ನೂ ಕಾಂಗ್ರೆಸ್ ಸರ್ಕಾರ ಬೀಳಿಸಲು ಮಂಡ್ಯದ ಶಾಸಕ ರವಿ ಗಣಿಗಾ ಅವರ ಬಿಜೆಪಿಯ ಆಮಿಷದ ಹೇಳಿಕೆವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಬೀಳಿಸಲು ಬಿಜೆಪಿ ರೂಪಿಸುತ್ತಿರುವ ಷಡ್ಯಂತ್ರ ಫಲಿಸುವುದಿಲ್ಲ. ಈ ಷಡ್ಯಂತ್ರದ ಬಗ್ಗೆ ನಮಗೆ ಗೊತ್ತಿದೆ. ಇದರ ಹಿಂದೆ ದೊಡ್ಡ, ದೊಡ್ಡ ನಾಯಕರು ಇದ್ದಾರೆ. ಆದರೆ ಇದರಿಂದ ಏನೂ ಆಗುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ರವಿ ಗಣಿಗಾ ಹೇಳಿದ್ದೇನು?
ಹೌದು, ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಮಾತುಗಳು ರಾಜ್ಯರಾಜಕೀಯದಲ್ಲಿ ಕೇಳಿ ಬಂದಿದ್ದು, ಹಿಂದೆ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದ ಬಿಜೆಪಿಯ ತಂಡಗಳು ಮತ್ತೊಮ್ಮೆ ಆಪರೇಶನ್ ಕಮಲಕ್ಕೆ ಮುಂದಾಗಿವೆ ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿದ್ದಾರೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತ ಎನ್ ಆರ್ ಸಂತೋಷ್ ಒಂದು ತಂಡದ ನೇತೃತ್ವ ವಹಿಸಿ ಕಾಂಗ್ರೆಸ್ ಪಕ್ಷದ ನಾಲ್ವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ. ಜೆಡಿಎಸ್ ಪಕ್ಷ ಸೇರಿ ವಿಧಾನ ಸಭಾ ಚುನಾವಣೆಯಲ್ಲಿ ಸೋತ್ರೂ ಇವನಿಗೆ ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಶಾಸಕರಿಗೆ ರೂ. 50 ಕೋಟಿ ಹಾಗೂ ಮಂತ್ರಿ ಸ್ಥಾನ ನೀಡುವ ಆಮಿಶವನ್ನು ಸಂತೋಷ್ ಒಡ್ಡಿದ್ದಾನೆ ಅಂತ ಹೇಳಿದರು.
ಇನ್ನೂ ಕಾಂಗ್ರೆಸ್ ಶಾಸಕರನ್ನು ವಿಮಾನಗಳಲ್ಲಿ ದೆಹಲಿಗೆ ಕಳಿಸುವ ಮತ್ತು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಂತೋಷ್ ಆಡಿರುವ ಮಾತುಗಳ ಆಡಿಯೋ ಮತ್ತು ವಿಡಿಯೋ ಕ್ಲಿಪ್ಪಿಂಗ್ ಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗ ಮಾಡಲಾಗುವುದು ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗಾ ಹೇಳಿದರು.












Click it and Unblock the Notifications