ನಾಳೆ ದೆಹಲಿಯಲ್ಲಿ ಕೈ ಪಡೆಯಿಂದ ಮಹತ್ವದ ಸಭೆ; ದೆಹಲಿಗೆ ಹೊರಟ ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 01: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ದಿನದಿಂದ ದಿನಕ್ಕೆ ಅಸಮಾಧಾನಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದ ವಿರುದ್ದ ಸ್ವಪಕ್ಷದ ನಾಯಕರ ಹೇಳಿಕೆಯೇ ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದು, ಎಲ್ಲಾ ಅಸಮಾಧಾನಕ್ಕೆ ಕಡಿವಾಣ ಹಾಕುಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಈ ಕುರಿತು ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಿದ್ದತೆ ಹಾಗೂ ಪಕ್ಷದ ಸಂಘಟನೆ ಹಾಗೂ ಇನ್ನಿತರ ವಿಚಾರವಾಗಿ ದೆಹಲಿಯಲ್ಲಿ ನಮ್ಮ ಹೈಕಮಾಂಡ್ ನಾಯಕರ ಜೊತೆಗೆ ಮೂರು ಹಂತದ ಸಭೆ ನಡೆಯಲಿದೆ ಎಂದು ಹೇಳಿದರು.

ನಾಳೆ ದೆಹಲಿಯಲ್ಲಿ ನಮ್ಮ ವರಿಷ್ಠರು ಸಭೆ ನಡೆಸಲಿದ್ದಾರೆ. ಹೀಗಾಗಿ ನಾನು ಇಂದು ದೆಹಲಿಗೆ ಹೋಗ್ತಿದ್ದೇನೆ. ದೆಹಲಿಯಲ್ಲಿ ಪಕ್ಷದ ಕೆಲಸ ಇದೆ, ಸರ್ಕಾರದ ಕೆಲಸ ಇದೆ. ಲೋಕಸಭಾ ಚುನಾವಣೆ ಹಾಗೂ ಪಕ್ಷದ ಹಿತದೃಷ್ಟಿಯಿಂದ ಹೋಗುತ್ತಿದ್ದೇನೆ. ದೆಹಲಿಯಲ್ಲಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದಲೇ ಸಭೆ ನಡೆಯುತ್ತಿದೆ. ನಮ್ಮ ಗ್ಯಾರಂಟಿ ಜನರಿಗೆ ತಲುಪುತ್ತಿದೆಯಾ? ಎಂಬ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ದೆಹಲಿಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನೂ ನಾಳೆ ನಡೆಯುವ ದೆಹಲಿ ಸಭೆಗೆ ಸೀನಿಯರ್ ಲೀಡರ್, ಎಂಎಲ್‌ಎ, ಎಂಪಿಗಳನ್ನೂ ಕರೆದಿದ್ದೇವೆ. ಮೂರು ಹಂತದಲ್ಲಿ ಈ ಸಭೆಯ ನಡೆಯಲಿದ್ದು, ಪಕ್ಷ ಸಂಘಟನೆ ಕುರಿತು ಚರ್ಚೆಯಾಗಲಿದೆ. ಸಭೆಯಲ್ಲಿ ಎಲ್ಲಾ ನಿರ್ಧಾರವಾಗಲಿದೆ ಎಂದು ಹೇಳಿದ ಅವರು, ಗೃಹಜ್ಯೋತಿ ಜಾರಿಗೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಇಂದಿನಿಂದ ನಿನಗೂ ಫ್ರೀ, ನನಗೂ ಫ್ರೀ. ಗೃಹಜ್ಯೋತಿ ಅಡಿಯಲ್ಲಿ 200 ಯೂನಿಟ್ ಫ್ರೀ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದರು.












Click it and Unblock the Notifications