ರೈತರ ಬೆಳೆಗೆ ಮೊದಲೇ ಬೆಲೆ ನಿಗದಿ ಕಾನೂನು ಜಾರಿ ಆಗಬೇಕು: ಬೊಮ್ಮಾಯಿ
ಚಿತ್ರದುರ್ಗ, ಸೆಪ್ಟಂಬರ್ 24: ರೈತರ ಬೆಳೆಗೆ ಬೆಲೆಯು ಮೊದಲೇ ನಿಗದಿಯಾಗುವ ಕಾನೂನು ಜಾರಿಯಾಗಬೇಕು. ರೈತನನ್ನು ಗಟ್ಟಿ ಮಾಡಿದರೆ ಕೃಷಿ ಗಟ್ಟಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಸಿರಿಗೆರೆಯಲ್ಲಿ ಭಾನುವಾರ ಜರುಗಿದ ಲಿಂಗಕೈ ಶಿವಕುಮಾರ ಸ್ವಾಮೀಜಿಯವರ 31ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳಿಗೆ ಮುಂದಿನ ಚುನಾವಣೆ ಮೇಲೆ ಕಣ್ಣಿದ್ದರೆ, ಪ್ರಸ್ತುತ ನಮ್ಮ ಪೂಜ್ಯರಿಗೆ ಮುಂದಿನ ಜನಾಂಗದ ಮೇಲೆ ಕಣ್ಣಿರುತ್ತದೆ ಎಂದು ಹೇಳಿದರು.

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ರೈತರ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಲಿಂ.ಶ್ರೀಗಳ ಪುಣ್ಯಸ್ಮರಣೆ ಸಾಧಕರ ಪುಣ್ಯಸ್ಮರಣೆಯಾಗಿದೆ ಎಂದರು.
ನಾವು ಪ್ರಸ್ತಾಪಿಸಿದ ಬಜೆಟ್‌ನಲ್ಲಿ ರೈತರಿಗೆ 5ಲಕ್ಷರೂಗಳ ಶೂನ್ಯ ಬಡ್ಡಿದರದಲ್ಲಿ ಹಣ ನೀಡುವ ಯೋಜನೆ ಜಾರಿ ತಂದಿದ್ದೇವು. ಆ ಯೋಜನೆಯನ್ನು ಪ್ರಸ್ತುತ ರಾಜ್ಯ ಸರ್ಕಾರವೂ ಮುಂದುವರೆಯಿಸಿಕೊಂಡು ಹೋಗುತ್ತಿದೆ. ಕಾವೇರಿ ನೀರಿನ ಅಂತಾರಾಜ್ಯ ನದಿ ವಿವಾದದ ಕಾನೂನುಗಳು ವಿವಾದಗಳನ್ನು ಹುಟ್ಟುಹಾಕುವ ಕಾನೂನಾಗಿದೆ. ಇಂತಹ ವ್ಯವಸ್ಥೆಗಳು ಸರ್ಕಾರದಲ್ಲಿವೆ. ಈ ನಿಯಮಗಳು ಬದಲಾಗಬೇಕು ಎಂದು ತಿಳಿಸಿದರು.
ತರಳಬಾಳು ಶ್ರೀಗಳ ಆಶೀರ್ವಚನ
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು, ರೈತರು ಮತ್ತು ಉದ್ದಿಮೆದಾರ ಮಧ್ಯೆ ಹೊಸ ಕಾನೂನು ಜಾರಿಗೆ ತರಬೇಕಾಗಿದೆ. ಉದ್ದೇಶಕ್ಕೆ ವಶಪಡಿಸಿಕೊಂಡ ಜಮೀನು ಬಳಕೆಯಾಗುತ್ತಿರುವುದರ ಬಗ್ಗೆ ಪರಿಶೀಲನೆ ಮಾಡಬೇಕು.
ಯುವಕರಿಗೆ ನೀಡುವ ಯುವನಿಧಿ ಯೋಜನೆ ಮುಂದುವರಿಸುವ ಜೊತೆಗೆ ಯುವಕರನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಹಿರಿಯ ಶ್ರೀಗಳವರದು ಮಾತೃ ಹೃದಯ ಹಾಗೂ ಅದ್ಭುತ ಚೇತನ. ಈ ಶ್ರದ್ಧಾಂಜಲಿ ಸಮಾರಂಭ ರೈತರ ಸಮ್ಮೇಳನವಾಗಬೇಕು.

ಜಲಭಾಗ್ಯ 6ನೇ ಗ್ಯಾರಂಟಿ ಯೋಜನೆ ನೀಡಿ
ಸರ್ಕಾರ ಐದು ಗ್ಯಾರಂಟಿಗಳ ಜೊತೆ 6ನೇಯ ಗ್ಯಾರಂಟಿಯಾಗಿ ಜಲಭಾಗ್ಯ ನೀಡಿದರೆ ರೈತರು ಕಾಯಕದ ಜೊತೆಗೆ ಆರ್ಥಿಕವಾಗಿ ಸಬಲರಾಗುತ್ತಾರೆ. ರೈತರ ಭೂಮಿಯ ಮಾಲಿಕರು ರೈತರೇ ಆಗಬೇಕು. ರೈತರು ಮತ್ತು ಉದ್ಯಮಿಗಳ ನಡುವೆ ಒಪ್ಪಂದ ಆಗಬೇಕು. ಒಮ್ಮೆ ಇಡಿಗಂಟು ನೀಡುವುದರ ಬದಲಿಗೆ ನಿರಂತರ ಪರಿಹಾರ ಕೊಡುವಂತಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಈಶ್ವರ್ ಖಂಡ್ರೆ, ಸುಧಾಕರ್, ಮಾಜಿ ಸಚಿವ ಹೆಚ್ ಆಂಜನೇಯ, ಶಾಸಕರಾದ ಡಿ.ಜಿ.ಶಾಂತನಗೌಡ, ಎಂ ಚಂದ್ರಪ್ಪ, ಬಿ.ವೈ ವಿಜಯೇಂದ್ರ ಹಾಗೂ ಚಿತ್ರದುರ್ಗದ ಕಾಂಗ್ರೆಸ್ ಅಧ್ಯಕ್ಷರಾದ ತಾಜ್‌ಪೀರ್, ಯುವ ಬಿಜೆಪಿ ಮುಖಂಡರಾದ ಅನಿತ್ ಕುಮಾರ್ ಸೇರಿದಂತೆ ಮತ್ತಿರರು ಪಾಲ್ಗೊಂಡಿದ್ದರು.












Click it and Unblock the Notifications