ನಾವು ಅಧಿಕಾರಕ್ಕೆ ಬಂದ ನಂತರ 7 ನೇ ವೇತನ ಆಯೋಗ ಜಾರಿ: ಡಿ ಕೆ ಶಿವಕುಮಾರ್
150 ಕ್ಷೇತ್ರಗಳಲ್ಲಿನ ಟಿಕೆಟ್ ಪಟ್ಟಿ ಸಿದ್ಧ ಮಾಡಿದ್ದು, ಸ್ಕ್ರೀನಿಂಗ್ ಕಮಿಟಿ ಸಭೆ ನಂತರ ಪಟ್ಟಿಯನ್ನ ಪ್ರಕಟಿಸಲಾಗುವುದು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಹಾಸನ,ಮಾರ್ಚ್1: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಬೇಡ. ನಾವು ಅಧಿಕಾರಕ್ಕೆ ಬಂದ ನಂತರ 7 ನೇ ವೇತನ ಆಯೋಗ ಜಾರಿಗೊಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬುಧವಾರ ಹಾಸನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವು ಸರ್ಕಾರಿ ನೌಕರರ ನೋವು, ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಅವರು ತಮ್ಮ ಹಕ್ಕನ್ನು ಕೇಳುತ್ತಿದ್ದು, ಅದನ್ನು ನೀಡಲು ಕಾಂಗ್ರೆಸ್ ಬದ್ಧವಾಗಿದೆ. ಅವರ ಹೋರಾಟ ಅವರ ಮೂಲಭೂತ ಹಕ್ಕು. ಈ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ಮುಳುಗಿಸಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಪ್ರಧಾನಿಗಳು ಯಡಿಯೂರಪ್ಪನವರಿಗೆ ತಲೆಬಾಗಿ ನಮಿಸಿದರೆ ಸಾಲದು. ಯಡಿಯೂರಪ್ಪ ಅವರ ಕಣ್ಣಲ್ಲಿ ನೀಕು ಹಾಕಿಸಿದ್ದು ಯಾಕೆ? ಎಂಬ ವಿಚಾರವಾಗಿ ಸ್ಪಷ್ಟತೆ ನೀಡಬೇಕು. ಅವರ ಕುಟುಂಬಕ್ಕೆ ತನಿಖೆ ಸಂಸ್ಥೆಗಳ ವಿಚಾರಣೆ ಹೆಸರಲ್ಲಿ ನೀಡಿದ ಕಿರುಕುಳದ ಬಗ್ಗೆ ಮಾತನಾಡಲಿ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಸುವುದೇ ಆದರೆ, ಅವರನ್ನು ಇವತ್ತೇ ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ರಬ್ಬರ್ ಸ್ಟಾಂಪ್ ಅಧ್ಯಕ್ಷರು ಎನ್ನುವ ರೀತಿಯಲ್ಲಿ ಬಿಂಬಿಸಿ, ಅವಹೇಳನ ಮಾಡಿದ್ದಾರೆ. ಪ್ರಧಾನಮಂತ್ರಿ ಸ್ಥಾನಕ್ಕೆ ನಾವು ಗೌರವ ನೀಡುತ್ತೇವೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಬಾಬು ಜಗಜೀವನ್ ರಾಮ್, ರಾಜೀವ್ ಗಾಂಧಿ ಅವರು ಕೂತ ಜಾಗದಲ್ಲಿ ಖರ್ಗೆ ಅವರು ಕೂತಿದ್ದಾರೆ. ಈ ರೀತಿ ಮಾತನಾಡುವುದು ಸರಿಯಲ್ಲ. ಬಿಜೆಪಿಯ ಅಧ್ಯಕ್ಷರ ಬಗ್ಗೆ ನಾವು ಮಾತನಾಡುವುದಿಲ್ಲ. ಅವರು ಹೇಗೆ ಅಧ್ಯಕ್ಷರಾದರೂ, ಅವರ ಕಾರ್ಯವೈಖರಿ ಹೇಗಿದೆ ಎಂದು ನಾನು ಚರ್ಚೆ ಮಾಡುವುದಿಲ್ಲ. ಆದರೆ ನಮ್ಮ ಪಕ್ಷದಲ್ಲಿ ಸ್ವತಂತ್ರ್ಯವಾಗಿ ಕೆಲಸ ಮಾಡುತ್ತಿರುವ ಖರ್ಗೆ ಅವರ ಬಗ್ಗೆ ಪ್ರಧಾನಮಂತ್ರಿಗಳ ಮಾತು ಖಂಡನೀಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತರುವ ನಡೆ ಎಂದು ಹೇಳಿದರು.
ಆರಂಭದಲ್ಲಿ ಬೊಮ್ಮಾಯಿ ನಾಯಕತ್ವದಲ್ಲಿ ಚುನಾವಣೆ ಎಂದರು. ನಂತರ ಪ್ರಧಾನಿ ಮುಖ ನೋಡಿ ಮತ ಹಾಕಿ ಎಂದರು. ಈಗ ಯಡಿಯೂರಪ್ಪ ಅವರ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿ ತನ್ನ ನಾಯಕರನ್ನು ಬಳಸಿ ಬಿಸಾಡುವ ಸಿದ್ಧಾಂತ ಹೊಂದಿದೆ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲದ ಪಕ್ಷವಾಗಿದೆ. ಬೊಮ್ಮಾಯಿ ಅವರನ್ನು ಬಿಜೆಪಿಯವರೇ ನಾಯಕ ಎಂದು ಒಪ್ಪಿಕೊಳ್ಳುತ್ತಿಲ್ಲ. ಕೇಂದ್ರ ನಾಯಕರು ಇಲ್ಲಿ ಬಂದು ಚುನಾವಣೆ ಮಾಡಲು ಸಾಧ್ಯವಿಲ್ಲ. ಈ ಸರ್ಕಾರದ ಅವಧಿ ಇನ್ನು 30 ದಿನ ಮಾತ್ರ. ನಂತರ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಕಳಂಕ ತೊಡೆದು ಹಾಕಿ ನಾವು ಕೊಟ್ಟ ಮಾತು ಉಳಿಸಿಕೊಂಡು ದಕ್ಷ ಆಡಳಿತ ನೀಡಲಿದೆ.

ಹಾಸನದಲ್ಲಿ ನೀವು ಸ್ವರೂಪ್ ಅವರ ಜತೆ ಸಂಪರ್ಕದಲ್ಲಿರುವ ವಿಚಾರವಾಗಿ ಮಾತನಾಡಿ, ರಾಜಕೀಯದಲ್ಲಿ ಎಲ್ಲ ಸಾಧ್ಯತೆಗಳ ಬಗ್ಗೆಯೂ ಚರ್ಚೆ ಆಗುತ್ತದೆ. ನಾನು ಎ. ಮಂಜು ಅವರ ಜತೆ ಮಾತನಾಡಿದ್ದು ನಿಜ. ಅವರು ಹೋರಾಟ ಮಾಡುತ್ತಿರುವುದು ನಿಜ. ರೇವಣ್ಣ ಅವರ ಜತೆ ಮಂಜು, ನಾವು ಮಂಜು ಅವರ ಜತೆ ಮಾತನಾಡುತ್ತಿರುವುದು ನಿಜ. ಸ್ವರೂಪ್ ಎಲ್ಲ ಪಕ್ಷದ ಜತೆ ಮಾತನಾಡುತ್ತಿದ್ದಾರೆ ಎಂದರು.
ಎ.ಟಿ ರಾಮಸ್ವಾಮಿ ಅವರು ನಿಮ್ಮ ಜತೆ ಮಾತನಾಡಿದ್ದಾರಾ ಎಂಬ ಪ್ರಶ್ನೆಗೆ, 'ನಿಜ, ಅವರು ನನ್ನನ್ನು ಭೇಟಿ ಮಾಡಿ ಮಾತನಾಡಿ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಇನ್ನು ತೀರ್ಮಾನ ಮಾಡಬೇಕಿದೆ ಎಂದರು.
ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಯಾವಾಗ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಪ್ರಶ್ನೆಗೆ, 'ಈ ವಿಚಾರವಾಗಿ ನೀವು ಅವರನ್ನೇ ಕೇಳಬೇಕು. ಅವರು ಈಗಾಗಲೇ ಹೇಳಿಕೊಂಡಿರುವಂತೆ ಮಾ.5 ರಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಸಿದ್ದರಾಮಯ್ಯ ಅವರು ಹೋಗುತ್ತಿದ್ದಾರೆ' ಎಂದರು.
ಎ.ಮಂಜು ಅವರನ್ನು ಕಾಂಗ್ರೆಸ್ ಗೆ ಮತ್ತೆ ಕರೆತರುತ್ತೀರಾ ಎಂಬ ಪ್ರಶ್ನೆಗೆ, 'ರಾಜಕೀಯ ಎಂದರೆ ಸಾಧ್ಯತೆಗಳ ಕಲೆ. ರೇವಣ್ಣ, ಮಂಜು ಹಾಗೂ ಪ್ರಜ್ವಲ್ ಅವರೇ ಈಗ ಮಾತನಾಡುತ್ತಿದ್ದಾರೆ. ಈ ನಿರ್ಧಾರವನ್ನು ಅವರ ಕಾರ್ಯಕರ್ತರು ಒಪ್ಪುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ನಾಯಕರು ಒಪ್ಪಿದ್ದಾರೆ. ಅವರ ನಡುವಣ ಕಾನೂನು ಸಮರ ಈಗ ತೀರ್ಪಿನ ಹಂತಕ್ಕೆ ಬಂದಿದ್ದು, ನನ್ನ ಪ್ರಕಾರ ಈಗ ಆ ಕೇಸ್ ಹಿಂಪಡೆಯಲು ಸಾಧ್ಯವಿಲ್ಲ' ಎಂದರು.
ಟಿಕೆಟ್ ಹಂಚಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಈ ತಿಂಗಳು 7-8 ರಂದು ನಮ್ಮ ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ನಂತರ ನಾವು ಅಂತಿಮ ಪಟ್ಟಿ ಪ್ರಕಟಿಸುತ್ತೇವೆ' ಎಂದರು.
ತನ್ವೀರ್ ಸೇಠ್ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿರುವ ವಿಚಾರವಾಗಿ ಕೇಳಿದಾಗ, 'ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ತೀರ್ಮಾನಿಸಿದ್ದಾರೆ. ಅವರ ಆರೋಗ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಪಕ್ಷದ ಆಧಾರಸ್ತಂಭ. ಅವರು ಈ ವಿಚಾರವಾಗಿ ನನ್ನ ಹಾಗೂ ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದಾರೆ. ಈಗ ಅವರು ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ' ಎಂದರು.
ಡಿಸೆಂಬರ್ ಅಂತ್ಯದಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಿರಿ, ಈಗ ಪಟ್ಟಿ ಬಿಡುಗಡೆಗೆ ಗಡವು ಇಟ್ಟುಕೊಂಡಿದ್ದೀರಾ ಎಂಬ ಪ್ರಶ್ನೆಗೆ, 'ಈಗ ನಾವು ಸುಮಾರು 150 ಕ್ಷೇತ್ರಗಳಲ್ಲಿನ ಟಿಕೆಟ್ ಪಟ್ಟಿ ಸಿದ್ಧ ಮಾಡಿದ್ದು, ಸ್ಕ್ರೀನಿಂಗ್ ಕಮಿಟಿ ಸಭೆ ನಂತರ ಪ್ರಕಟಿಸುತ್ತೇವೆ' ಎಂದರು.












Click it and Unblock the Notifications