7th Pay Commission; ಅಧೀನ, ಆಪ್ತ ಕಾರ್ಯದರ್ಶಿ ವೇತನ ಹೆಚ್ಚಳ ಬೇಡಿಕೆ

ಬೆಂಗಳೂರು, ಅಕ್ಟೋಬರ್ 13: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಸಲ್ಲಿಕೆ ಮಾಡಿರುವ ವರದಿಯಲ್ಲಿ ವಿವಿಧ ವೃಂದದ ವೇತನ ಹೆಚ್ಚಳ ಏಕೆ ಬೇಕು? ಎಂದು ವಿವರಣೆ ನೀಡಿದೆ. ಆಯೋಗ ಎಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯ 7ನೇ ವೇತನ ಆಯೋಗ ನವೆಂಬರ್ ತಿಂಗಳಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ. ಈ ವರದಿಯ ಆಧಾರದ ಮೇಲೆ ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ವೇತನವನ್ನು ಹೆಚ್ಚಳ ಮಾಡಲಿದೆ. ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಅಧೀನ ಕಾರ್ಯದರ್ಶಿ (Under Secretary)/ ಆಪ್ತ ಕಾರ್ಯದರ್ಶಿ (Private Secretary) (ಗ್ರೇಡ್-II) ಹುದ್ದೆಗಳ ವೇತನ ಹೆಚ್ಚಳದ ಬಗ್ಗೆ ಆಯೋಗಕ್ಕೆ ವರದಿ ಸಲ್ಲಿಸಿದೆ.

7th Pay Commission KSGEA Demand On Salary Hike Of Under Secretary And Private Secretary

ರಾಜ್ಯ ಸಚಿವಾಲಯದಲ್ಲಿ ಸರ್ಕಾರದ ಎಲ್ಲಾ ಮಹತ್ತರ ಆದೇಶಗಳನ್ನು ಮಾನ್ಯ ಘನತೆವೆತ್ತ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಹಿ ಮಾಡಿ ಹೊರಡಿಸುವ ಅಧಿಕಾರವನ್ನು ಕರ್ನಾಟಕ ಕಾರ್ಯಕಲಾಪಗಳ ನಿರ್ವಹಣೆ ನಿಯಮಗಳು 1977ರ ನಿಯಮ 19ರನ್ವಯ (Transaction of Buisness Rules) ಅಧೀನ ಕಾರ್ಯದರ್ಶಿಯವರಿಗೂ ಸಹ ಪ್ರತ್ಯಾಜಿಸಲಾಗಿರುತ್ತದೆ. ಆದಾಗ್ಯೂ ಸಹ ಸದರಿ ಹುದ್ದೆಯ ವೇತನ ಶ್ರೇಣಿಯನ್ನು ಕ್ಷೇತ್ರ ಇಲಾಖೆಯ ತತ್ಸಮಾನ ವೃಂದದ ಅಧಿಕಾರಿಗಿಂತ ಅಂದರೆ ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಿಂತಲೂ ಒಂದು ಹಂತ ಕಡಿಮೆ ಇರುವುದು ಸರ್ಕಾರದ ಗೌರವಕ್ಕೆ ಮುಜುಗರ ಉಂಟು ಮಾಡುತ್ತದೆ.

ವೇತನ ಎಷ್ಟಿದೆ, ವಿವರಗಳು; ಕರ್ನಾಟಕ ಸರ್ಕಾರ ಸಚಿವಾಲಯದಲ್ಲೇ ಒಂದು ಇಲಾಖೆಯಾದ ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಇಲಾಖೆಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ವೇತನ ಶ್ರೇಣಿಯು ರೂ. 56,800-99,600 ಆಗಿದೆ. ಅದೇ ಸಚಿವಾಲಯದಲ್ಲಿನ ಇನ್ನಿತರ ಇಲಾಖೆಗಳಲ್ಲಿನ ಅಧೀನ ಕಾರ್ಯದರ್ಶಿ ಹುದ್ದೆಯ ವೇತನ ಶ್ರೇಣಿ ರೂ. 52,650- 97,100ಕ್ಕೆ ನಿಗದಿಯಾಗಿರುತ್ತದೆ. ಸಚಿವಾಲಯದ ವ್ಯಾಪ್ತಿಯಲ್ಲಿನ ಇತರೆ ಇಲಾಖೆಗಳ ನಡುವಿನ ಒಂದೇ ಹುದ್ದೆಯಲ್ಲಿ ವೇತನ ಶ್ರೇಣಿಯ ತಾರತಮ್ಯವಾಗಿರುವುದು ಒಂದು ವಿಪರ್ಯಾಸದ ಸಂಗತಿಯಾಗಿದೆ.

ಕರ್ನಾಟಕ ಸರ್ಕಾರ ಸಚಿವಾಲಯದ ಅಧೀನ ಕಾರ್ಯದರ್ಶಿ ವೃಂದ ಹೊರತುಪಡಿಸಿ, ಗ್ರೂಪ್-ಎ ಮೇಲ್ಪಟ್ಟ ಅಧಿಕಾರಿಗಳ ವೃಂದದ ವೇತನ ಶ್ರೇಣಿಗಳು ಕರ್ನಾಟಕ ಆಡಳಿತ ಸೇವೆಯ ಗ್ರೂಪ್-ಎ ಮೇಲ್ಪಟ್ಟ ವಿವಿಧ ವೃಂದಗಳ (ಹಿರಿಯ ಶ್ರೇಣಿ, ಆಯ್ಕೆ ಶ್ರೇಣಿ ಮತ್ತು ಸೂಪರ್ ಟೈಂ ಸ್ಕೇಲ್, ಸಿನೀಯರ್ ಸೂಪರ್ ಟೈಂ ಸ್ಕೇಲ್) ವೇತನ ಶ್ರೇಣಿಗಳಿಗೆ ಹೊಲಿಸಿದಲ್ಲಿ ತತ್ಸಮಾನ ವೇತನ ಶ್ರೇಣಿಯಂತೆಯೇ ನಿಗದಿಪಡಿಸಲಾಗಿರುತ್ತದೆ. ಆದರೆ, ಆಧೀನ ಕಾರ್ಯದರ್ಶಿ ಗ್ರೂಪ್-ಎ (ಕಿರಿಯ ಶ್ರೇಣಿ) ಹುದ್ದೆಯ ವೇತನ ಶ್ರೇಣಿಯು ಸಹಾಯಕ ಆಯುಕ್ತರ ಗ್ರೂಪ್-ಎ (ಕಿರಿಯ ಶ್ರೇಣಿ) ಗಿಂತ ಒಂದು ಹಂತ ಕಡಿಮೆಯಿರುತ್ತದೆ. ಸದರಿ ತಾರತಮ್ಯವನ್ನು ಆಯೋಗವು ಸರಿಪಡಿಸಲೇಬೇಕಾದ ಅನಿವಾರ್ಯವಿರುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕ್ಷೇತ್ರಿಯ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಸಹಾಯಕ ನಿರ್ದೇಶಕರು, (ಸಮಾಜ ಕಲ್ಯಾಣ ಇಲಾಖೆ), C.D.PO (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ), ಕಾರ್ಯನಿರ್ವಾಹಕ ಅಧಿಕಾರಿ. (ತಾಲ್ಲೂಕು ಪಂಚಾಯತ್) ಸಹಾಯಕ ನಿರ್ದೇಶಕ. (ಕೃಷಿ ಇಲಾಖೆ) ಗಳಲ್ಲಿ ಕಾರ್ಯನಿರ್ವಹಿಸುವ ಓರ್ವ ತಾಲ್ಲೂಕು ಮಟ್ಟದ ಅಧಿಕಾರಿಗಳ ವೇತನ ಶ್ರೇಣಿಗೆ ಸರಿ ಸಮಾನವಾಗಿ ಸಚಿವಾಲಯದ ಅಧೀನ ಕಾರ್ಯದರ್ಶಿಯವರ ವೇತನ ಶ್ರೇಣಿಗೆ ಅಂದರೆ ರೂ. 52,650- 97100ಕ್ಕೆ ನಿಗದಿಪಡಿಸಿ ನೀಡುತ್ತಿರುವುದು ಸಮಂಜಸವಾಗಿರುವುದಿಲ್ಲ.

ರಾಜ್ಯದ ಶಕ್ತಿ ಕೇಂದ್ರವಾದ ಸಚಿವಾಲಯವು ರಾಜ್ಯ ಮಟ್ಟದ ಸಂಸ್ಥೆಯಾಗಿದ್ದು, ಸರ್ಕಾರದ ನೀತಿ ನಿಯಮಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿ ಹೊತ್ತ ಸಂಸ್ಥೆಯಾಗಿದ್ದು, ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಹಿ ಮಾಡಿ ಹೊರಡಿಸುವ ಅಧಿಕಾರವನ್ನು ಹೊಂದಿರುವ ಅಧೀನ ಕಾರ್ಯದರ್ಶಿಗೆ ಕನಿಷ್ಟ ಒಂದು ಹಂತದ ವೇತನ ಶ್ರೇಣಿಯನ್ನು ಹೆಚ್ಚಿಸುವುದು ವೈಜ್ಞಾನಿಕ ಕ್ರಮವಾಗಿರುತ್ತದೆ. ಅಲ್ಲದೇ, ಕೇಂದ್ರ ಸಚಿವಾಲಯದಲ್ಲಿನ ಅಧೀನ ಕಾರ್ಯದರ್ಶಿ ಹುದ್ದೆಯು IAS ಶ್ರೇಣಿಯಯ ಪ್ರಾರಂಭಿಕ ಹುದ್ದೆಯಾಗಿದ್ದು, ವೇತನ ಶ್ರೇಣಿ ರೂ. 67,700-2,08,700 ಗಳನ್ನು ನೀಡಲಾಗುತ್ತಿರುವುದನ್ನು ಗಮನಿಸಬಹುದಾಗಿರುತ್ತದೆ ಎಂದು ವರದಿ ಹೇಳಿದೆ.

ಈ ಹಿಂದೆ ಸಚಿವಾಲಯದ ಅಧೀನ ಕಾರ್ಯದರ್ಶಿಗಳ ಗ್ರೂಪ್-ಎ (ಕಿರಿಯ ಶ್ರೇಣಿ) ಹುದ್ದೆಯು ಕೆಎಎಸ್, ಆಸಿಸ್ಟೆಂಟ್ ಕಮೀಷನರ್ ಗ್ರೂಪ್-ಎ (ಕಿರಿಯ ಶ್ರೇಣಿ) ಹುದ್ದೆಗೆ ಸರಿಸಮವಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಸಚಿವಾಲಯದ ಅಧೀನ ಕಾರ್ಯದರ್ಶಿ ವೇತನ ಶ್ರೇಣಿಗಿಂತ ಒಂದು ಹಂತ ಹೆಚ್ಚಿನ ವೇತನ ಶ್ರೇಣಿಯನ್ನು ನೀಡಲಾಗಿರುತ್ತದೆ. ಈ ತಾರತಮ್ಯವನ್ನು ಸರಿಪಡಿಸಬೇಕೆಂದು ಈ ಹಿಂದಿನಿಂದಲೂ ಸಚಿವಾಲಯ ನೌಕರರ ಸಂಘ ವೇತನ ಆಯೋಗದ ಮುಂದೆ ತನ್ನ ವಾದವನ್ನು ಮಂಡಿಸುತ್ತಲೇ ಬಂದಿದೆ.

ವೇತನ ಆಯೋಗಕ್ಕೆ ಅದು ಮನದಟ್ಟಾಗಿ ಅಧೀನ ಕಾರ್ಯದರ್ಶಿ ಹುದ್ದೆಯ ವೇತನ ಶ್ರೇಣಿಯನ್ನು ಆಸಿಸ್ಟೆಂಟ್ ಕಮೀಷನರ್ ಹುದ್ದೆಯ ವೇತನ ಶ್ರೇಣಿಗೆ ಸರಿಸಮ ಮಾಡಲು ಶಿಫಾರಸ್ಸು ಮಾಡಿದ್ದಾಗ್ಯೂ ಸಹ. ಅದು ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಕರ್ನಾಟಕ ನಾಲ್ಕನೇ ವೇತನ ಆಯೋಗ ಈ ಕುರಿತು ನಿರ್ದಿಷ್ಟವಾಗಿ ಶಿಫಾರಸು ಮಾಡಿದ್ದರೂ ಸಹ ಪ್ರಸಕ್ತ ವೇತನ ಆಯೋಗದ ಅವಧಿಯವರೆಗೂ ಈ ತಾರತಮ್ಯ ಮುಂದುವರೆದಿರುವುದು ವಿಪರ್ಯಾಸವಾಗಿರುತ್ತದೆ. ಪ್ರಸ್ತುತ ಆಯೋಗವಾದರೂ ಈ ತಾರತಮ್ಯವನ್ನು ನಿವಾರಿಸುತ್ತದೆ ಎಂಬ ಆಶಾಭಾವನೆಯನ್ನು ಸಂಘವು ಹೊಂದಿದೆ ಎಂದು ತಿಳಿಸಿದೆ.

ಅಸಿಸ್ಟೆಂಟ್ ಕಮೀಷನರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಸಚಿವಾಲಯದಲ್ಲಿ ನಿಯೋಜನೆಯ ಮೇರೆಗೆ ಅಧೀನ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಒಂದೇ ಕಡೆ, ಒಂದೇ ಹುದ್ದೆಯಲ್ಲಿ ಒಂದೇ ಜವಾಬ್ದಾರಿ ಹೊತ್ತಿ ಕಾರ್ಯ ನಿರ್ವಹಿಸುವ ಸಮಾನ ವೃಂದದ ಅಧಿಕಾರಿಗಳಲ್ಲಿ ಒಂದು ಹಂತದ ವೇತನ ಶ್ರೇಣಿಯಲ್ಲಿ ಅಂತರವಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುತ್ತದೆ. ಇಂತಹ ತಾರತಮ್ಯವನ್ನು ವೇತನ ಆಯೋಗವು ಸರಿಪಡಿಸಬೇಕೆಂದು ಸಂಘವು ಒತ್ತಾಯಿಸುತ್ತದೆ.

ಸಂವಿಧಾನದಡಿಯಲ್ಲಿ ಪ್ರದತ್ತವಾದ ರಾಜ್ಯಪಾಲರ ಹೆಸರಿನಲ್ಲಿ ಸಹಿ ಮಾಡುವ ಅಧಿಕಾರವಿರುವುದು ಸಚಿವಾಲಯದಲ್ಲಿ ಮಾತ್ರ ಕ್ಷೇತ್ರೀಯ ಇಲಾಖೆಯಲ್ಲಿ ಎಷ್ಟೇ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗೂ ಕೂಡ ಈ ಒಂದು ಅಧಿಕಾರ ಪ್ರತ್ಯಾಯೋಜಿಸಲಾಗಿಲ್ಲವೆಂಬುದನ್ನು ಗಮನಿಸಬೇಕಾಗುತ್ತದೆ. ತತ್ಸಂಬಂಧ ಮೇಲಿನ ಅಂಶಗಳಲ್ಲಿ ವಿವರಿಸಿರುವ ಕಾರಣಗಳಿಂದ ಅಧೀನ ಕಾರ್ಯದರ್ಶಿ ಹುದ್ದೆಯ ವೇತನ ಶ್ರೇಣಿಯನ್ನು ರೂ.52,650-97,100 ರಿಂದ ರೂ.56,800-99,600ಕ್ಕೆ ನಿಗದಿಪಡಿಸುವುದು.

ಸಚಿವಾಲಯದಲ್ಲಿ ಒಟ್ಟು ಮಂಜೂರಾದ ಅಧೀನ ಕಾರ್ಯದರ್ಶಿ ಹುದ್ದೆಗಳು 210 ಗಳಿದ್ದು, ಅದರ ಮೇಲ್ಪಟ್ಟ ಹುದ್ದೆಗಳು ಅಂದರೆ ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಅಪರ ಕಾರ್ಯದರ್ಶಿ, ವಿಶೇಷ ಕಾರ್ಯದರ್ಶಿ ಹುದ್ದೆಗಳ ಸಂಖ್ಯೆ ಅತ್ಯಂತ ಕಡಿಮೆಯಿರುತ್ತದೆ. ಮುಂಬರುವ ವರ್ಷಗಳಲ್ಲಿ ಮುಂಬಡ್ತಿಯ ಸೌಲಭ್ಯವು ಕ್ಷೀಣಿಸುವುದರಿಂದ ಹಾಗೂ ಅಧೀನ ಕಾರ್ಯದರ್ಶಿ ಹುದ್ದೆಯಲ್ಲಿ ಓರ್ವ ಅಧಿಕಾರಿಯು ಸುಮಾರು 10 ರಿಂದ 15 ವರ್ಷಗಳ STAGNATION ಆಗಲಿದ್ದು, ಎಲ್ಲಾ ಅಧಿಕಾರಿಗಳು ಒಂದರಿಂದ ಎರಡು ಕಾಲಬದ್ಧ ವೇತನ ಬಡ್ತಿಯನ್ನು ಪಡೆಯಲಿದ್ದಾರೆ.

ಅದರಿಂದ ಅಧಿಕಾರಿಗಳಿಗೆ ಮುಂಬಡ್ತಿ ದೊರೆಯದೆ ಇರುವುದರಿಂದ ಮಾನಸಿಕವಾಗಿ ಕುಗ್ಗಲಿದ್ದು, ಅವರಲ್ಲಿ ಕಾರ್ಯಕ್ಷಮತೆ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ. ತತ್ಸಂಬಂಧ ಅಖಿಲ ಭಾರತ ಸೇವೆಯ ಅಧಿಕಾರಿಗಳಿಗೆ ಕಲ್ಪಿಸಿರುವ ಅವಕಾಶಗಳಂತೆ ಸಚಿವಾಲಯದ ಅಧೀನ ಕಾರ್ಯದರ್ಶಿ ಹುದ್ದೆಯಲ್ಲಿ ಸುಮಾರು 4 ರಿಂದ 5 ವರ್ಷಗಳ ಸೇವೆಯನ್ನು ಸಲ್ಲಿಸಿದ ಅಧಿಕಾರಿಗಳಿಗೆ ವೇತನ ಶ್ರೇಣಿ ರೂ.67,550-1,04,600ಕ್ಕೆ ಕಾಲಬದ್ಧ ವೇತನ ಶ್ರೇಣಿಗೆ ಏರಿಸುವುದು (Time Bond Scale Enhancement) ಎಂದು ವರದಿಯಲ್ಲಿ ಮನವಿ ಮಾಡಿದೆ.

ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಪ್ತ ಕಾರ್ಯದರ್ಶಿ-2 ವೃಂದವು ಅಧೀನ ಕಾರ್ಯದರ್ಶಿ ವೃಂದಕ್ಕೆ ತತ್ಸಮಾನ ಹುದ್ದೆಯಾಗಿದ್ದು, ಕೆಲವೊಮ್ಮೆ ಅಧೀನ ಕಾರ್ಯದರ್ಶಿಯ ವೃಂದದ ಅಧಿಕಾರಿಯು ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಆದುದರಿಂದ ಆಪ್ತ ಕಾರ್ಯದರ್ಶಿ-2 ಹುದ್ದೆಯ ವೇತನ ಶ್ರೇಣಿಯನ್ನು ಸಹ ರೂ. 52,650- 97,100 ರಿಂದ ರೂ.56,800-99,600ಕ್ಕೆ ಹೆಚ್ಚಿಸುವ ಅವಶ್ಯಕತೆ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+