ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೂ ಮುನ್ನ 29 ಪಿಡಿಒಗಳ ವರ್ಗಾವಣೆ
ಬೆಂಗಳೂರು, ಏಪ್ರಿಲ್ 15: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ವಿಪಕ್ಷಗಳ ತೀವ್ರ ಆಗ್ರಹ, ಬಿಜೆಪಿ ಹೈಕಮಾಂಡ್ ಬೇಸರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ಮೇರೆಗೆ ಕೊನೆಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಬೆಳಗಾವಿಯ ಗುತ್ತಿಗೆದಾರ ಸಂತೊಷ ಪಾಟೀಲ್ ಆತ್ಮಹತ್ಯೆಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಕಾರಣ ಎಂಬ ವಾಟ್ಸಪ್ ಡೆತ್‌ನೋಟ್ ಸಂದೇಶದಲ್ಲಿ ಆರೋಪ ಮಾಡಲಾಗಿತ್ತು. ಆರೋಪ ಕೇಳಿ ಬಂದ ದಿನವೇ 29 ಗ್ರಾಮ ಪಂಚಾಯತಿ ಪಿಡಿಒಗಳ (PDO) ವರ್ಗಾವಣೆಯಾದ ಘಟನೆ ಸಾಕಷ್ಟು ಅನುಮಾನಗಳಿಗೆ ಪುಷ್ಠಿ ನೀಡಿದೆ.
ಏಪ್ರಿಲ್ 12ರಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬಯಲಿಗೆ ಬಂದಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಧ್ಯಮದವರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ವಾಟ್ಸಪ್ ಮಾಡಿದ್ದರು. ಆ ವೇಳೆ ಸಚಿವ ಈಶ್ವರಪ್ಪ ಮೈಸೂರಿನಲ್ಲಿ ಇದ್ದರು.

ಇದೀಗ ಅದೇ ದಿನದಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 29 ಪಿಡಿಒಗಳ ವರ್ಗಾವಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅದರಲ್ಲೂ ಮೈಸೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಪಿಡಿಒಗಳ ವರ್ಗಾವಣೆ ಮಾಡಿದೆ. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ವರ್ಗಾವಣೆ ಮಾಡಿದೆ.
ಇನ್ನು ಸಂತೋಷ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಬುಧವಾರದ ಸುದ್ದಿಗೋಷ್ಠಿಯಲ್ಲಿ ಖಡಕ್ ಆಗಿ ಹೇಳಿದ್ದ ಕೆ.ಎಸ್. ಈಶ್ವರಪ್ಪ ಗುರುವಾರ ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಇಂದು (ಶುಕ್ರವಾರ) ಸಂಜೆ ರಾಜೀನಾಮೆ ಸಲ್ಲಿಸಲಿದ್ದಾರೆ.












Click it and Unblock the Notifications