2026 ಹೊಸ ವರ್ಷ ಸಂಭ್ರಮಾಚರಣೆ: ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿಷೇಧ
ಚಿಕ್ಕಮಗಳೂರು: ಹೊಸ ವರ್ಷವನ್ನು ನೀವು ಸಂಭ್ರಮದಿಂದ ಆಚರಣೆ ಮಾಡಬೇಕು, ಬೇರೆ ಬೇರೆ ಊರುಗಳಿಗೆ ಸುತ್ತಾಡುವ ಮೂಲಕ ಸಂಭ್ರಮಿಸಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ. ಸಾಮಾನ್ಯವಾಗಿ ಹೊಸ ವರ್ಷ ಹಾಗೂ 2025ನೇ ಸಾಲಿನ ವರ್ಷಾಂತ್ಯ ರಜೆಗಳು ಸಿಗುವುದರಿಂದ ಕೆಲವರು ಊರುಗಳನ್ನು ಸುತ್ತುವುದಕ್ಕೆ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳುವುದು ಇದೆ. ಆದರೆ ಚಿಕ್ಕಮಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಹೊಸ ವರ್ಷದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.

2026ರ ಹೊಸ ವರ್ಷದ ಸ್ವಾಗತದ ವೇಳೆ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರು ಪ್ರಮುಖ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ. ಈ ನಿರ್ಬಂಧಿತ ಆದೇಶವು 2025ರ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಪ್ರಾರಂಭವಾಗಿ 2026ರ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಡಳಿತವು ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ವಾರಾಂತ್ಯದಲ್ಲೂ ಸಾವಿರಾರು ಜನ ಪ್ರವಾಸಿಗರು ಸೇರುವುದರಿಂದ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದೀಗ ಹೊಸ ವರ್ಷದ ದಿನವೂ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತಿದೆ. ಇದೀಗ ಜಿಲ್ಲಾಡಳಿತದ ಈ ನಿರ್ಧಾರದಿಂದಾಗಿ ಕಾಫಿನಾಡಿನ ಪ್ರಮುಖ ಆಕರ್ಷಣೆಗಳಾದ ಮುಳ್ಳಯ್ಯನಗಿರಿ, ಸೀತಾಲಯ್ಯನಗಿರಿ, ಮಾಣಿಕ್ಯಧಾರಾ, ಹಾಗೂ ಝರಿ ಜಲಪಾತಗಳಿಗೆ ಪ್ರವಾಸಿಗರು ಭೇಟಿ ನೀಡುವಂತಿಲ್ಲ.
ಇದರೊಂದಿಗೆ ಹೊನ್ನಮ್ಮನಹಳ್ಳ, ಗಾಳಿಕೆರೆ, ಹಿರೇಕೊಳಲೆ ಕೆರೆ, ಎತ್ತಿನಭುಜ, ದೇವರಮನೆ, ರಾಣಿಝರಿ ಮತ್ತು ಬಳ್ಳಾಳರಾಯನ ದುರ್ಗದಂತಹ ಪ್ರಸಿದ್ಧ ತಾಣಗಳಿಗೂ ಪ್ರವಾಸಿಗರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಸ್ತಾವನೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಫಾಲ್ಸ್‌ಗಳ ಭೇಟಿಗೂ ನಿಷೇಧ
ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಕ್ಯಾತನಮಕ್ಕಿ, ರುದ್ರವಾದ, ಬಂಡಾಜೆ ಫಾಲ್ಸ್ ಸೇರಿದಂತೆ ಕಡೂರು ಮತ್ತು ತರೀಕೆರೆ ತಾಲ್ಲೂಕಿನ ಅಯ್ಯನಕೆರೆ, ಕೆಮ್ಮಣ್ಣುಗುಂಡಿ ಹಾಗೂ ಹೆಬ್ಬೆ ಫಾಲ್ಸ್‌ಗಳಿಗೂ ಈ ನಿಷೇಧ ಅನ್ವಯಿಸುತ್ತದೆ. ಆದರೆ, ಈಗಾಗಲೇ ಆನ್‌ಲೈನ್ ಮೂಲಕ ಅಧಿಕೃತವಾಗಿ ಹೋಂ ಸ್ಟೇ ಅಥವಾ ರೆಸಾರ್ಟ್‌ಗಳನ್ನು ಕಾಯ್ದಿರಿಸಿರುವ ಪ್ರವಾಸಿಗರಿಗೆ ಮಾತ್ರ ಆಯಾ ಸ್ಥಳಗಳಿಗೆ ತೆರಳಲು ವಿನಾಯಿತಿ ನೀಡಲಾಗಿದ್ದು, ಇತರೆ ಯಾವುದೇ ಪ್ರವಾಸಿಗರಿಗೆ ಜಾವರೈನ್ ಚೆಕ್ ಪೋಸ್ಟ್‌ನಿಂದ ಮೇಲ್ಬಾಗಕ್ಕೆ ತೆರಳಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಡಳಿತವು ನಿರ್ದಿಷ್ಟ ಸೂಚನೆ ನೀಡಿದೆ.
ಈ ಪ್ರದೇಶಗಳಲ್ಲೂ ನಿರ್ಬಂಧ
ಇನ್ನು ಚಿಕ್ಕಮಗಳೂರಿನೊಂದಿಗೆ ವಿವಿಧ ಪ್ರದೇಶಗಳಲ್ಲೂ ನಿರ್ಬಂಧ ಇರಲಿದೆ. ಬಂಡೀಪುರ, ನಾಗರಹೊಳೆ ಸಫಾರಿ ನಿಷೇಧದಂತಹ ನಿರಂತರ ನಿರ್ಬಂಧಗಳನ್ನು ಎದುರಿಸುತ್ತಿದೆ. ಇದು ಬುಕಿಂಗ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ನಂದಿಬೆಟ್ಟ ಸೇರಿದಂತೆ ನಿರ್ದಿಷ್ಟ ಸ್ಥಳಗಳಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ರಕ್ಷಣೆಯ ದೃಷ್ಟಿಯಿಂದ ತಾತ್ಕಾಲಿಕ ಹೊಸ ವರ್ಷದ ಮುನ್ನಾದಿನದ ಪ್ರವೇಶ ನಿಷೇಧ ಇರಲಿದೆ.












Click it and Unblock the Notifications