ಚುನಾವಣೆ ಅಖಾಡಕ್ಕೆ ಇಳಿಯಲು ಇಂದು ಕೊನೆಯ ದಿನ
ಬೆಂಗಳೂರು, ಮಾ.26 : ನಾಮಪತ್ರ ಸಲ್ಲಿಕೆಗೆ ಆರನೇ ದಿನವಾದ ಮಂಗಳವಾರ ರಾಜ್ಯದ 122 ಅಭ್ಯರ್ಥಿಗಳು ಒಟ್ಟು 152 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿದ್ದು. ಗುರುವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಾರ್ಚ್ 29 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಚುನಾವಣಾ ವೆಚ್ಚದ ವಿಶೇಷ ಅಧಿಕಾರಿ ವಿ. ಪೊನ್ನುರಾಜ್ ಮತ್ತು ಅಪರ ಮುಖ್ಯ ಚುನಾವಣಾಧಿಕಾರಿ ಜಿಯಾವುಲ್ಲಾ ಚುನಾವಣೆ ಅಧಿಸೂಚನೆ ಪ್ರಕಟವಾದ ಆರು ದಿನಗಳಲ್ಲಿ ಒಟ್ಟಾರೆ 28 ಕ್ಷೇತ್ರಗಳಲ್ಲಿ 318 ಅಭ್ಯರ್ಥಿಗಳು 444 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ಇಂದು ಕಡೆಯ ದಿನ
ನಾಮಪತ್ರ ಸಲ್ಲಿಕೆಗೆ ಮಾರ್ಚ್ 26ರ ಬುಧವಾರ ಕೊನೆಯ ದಿನವಾಗಿದ್ದು, ಮಾರ್ಚ್ 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಾರ್ಚ್ 29 ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ನಾಮಪತ್ರ ಸಲ್ಲಿಸಿದ ಪಕ್ಷಗಳು
ಮಂಗಳವಾರ ಬಿಎಸ್ಪಿಯ 12, ಬಿಜೆಪಿಯ 5, ಸಿಪಿಐನ 3, ಸಿಪಿಐಎಂನ 3, ಕಾಂಗ್ರೆಸ್ 6, ಜೆಡಿಎಸ್ 7, ಇತರೆ 25 ಪಕ್ಷೇತರರು 45 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಪ್ರಮುಖರು
ಹಾಸನದಿಂದ ಹೆಚ್.ಡಿ. ದೇವೇಗೌಡ, ಬೀದರ್ ನಿಂದ ಜೆಡಿಎಸ್ ನ ಬಂಡೆಪ್ಪ ಕಾಶಂಪೂರ್, ದಾವಣಗೆರೆಯಿಂದ ಜೆಡಿಎಸ್ ನ ಮಹಿಮಾ ಪಟೇಲ್, ಬೆಂಗಳೂರು ಉತ್ತರದಿಂದ ಜೆಡಿಎಸ್ ನ ಅಬ್ದುಲ್ ಅಜೀಂ, ಬಾಗಲಕೋಟೆಯಿಂದ ಬಿಜೆಪಿಯ ಪಿ.ಸಿ. ಗದ್ದಿಗೌಡರ ಮುಂತಾದವರು ಮಂಗಳವಾರ ನಾಮಪತ್ರ ಸಲ್ಲಿಸಿದ ಪ್ರಮುಖರು.

ವಶಪಡಿಸಿಕೊಂಡ ಹಣ
ಮಂಗಳವಾರ ಉಡುಪಿ ಜಿಲ್ಲೆ ಪಡುಬಿದ್ರಿಯಲ್ಲಿ 20 ಲಕ್ಷ, ಹೊಸಕೋಟೆಯಲ್ಲಿ 9.50 ಲಕ್ಷ, ಮಂಗಳೂರಿನ ಕೇರಳ ಗಡಿ ಚೆಕ್‍ಪೋಸ್ಟ್ ನಲ್ಲಿ 2 ಲಕ್ಷ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ 1.5 ಲಕ್ಷ, ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ 1.94 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ವಶಪಡಿಸಿಕೊಂಡ ವಸ್ತುಗಳು
ಹೊನ್ನಾಳಿಯಲ್ಲಿ 100 ಬಾಟಲ್ ಮದ್ಯ, ಚಿಕ್ಕಬಳ್ಳಾಪುರ ಜಿಲ್ಲೆಯ ಕಡ್ಲಾಪುರದಲ್ಲಿ 2.90 ಲಕ್ಷ ಮೌಲ್ಯದ 60 ರೇಷ್ಮೆ ಸೀರೆ ಮತ್ತು 128 ಕಾಟನ್ ಸಿಲ್ಕ್ ಸೀರೆ ವಶಪಡಿಸಿಕೊಳ್ಳಲಾಗಿದೆ ಎಂದು ಜಿಯಾವುಲ್ಲಾ ತಿಳಿಸಿದರು.












Click it and Unblock the Notifications