ಕರ್ನಾಟಕ: ಈ ವರ್ಷ 1 ಲಕ್ಷ ಎಲೆಕ್ಟ್ರಿಕ್ ವಾಹನ ನೋಂದಣಿ, ನಿತ್ಯ ರಸ್ತೆಗಿಳಿಯುವ ಸಂಖ್ಯೆ ಎಷ್ಟಿದೆ?
ಬೆಂಗಳೂರು, ಡಿಸೆಂಬರ್ 19: ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಚಾರ ಏರಿಕೆ ಆಗುತ್ತಿದೆ. ಇದಕ್ಕೆ ಪೂರಕವಾಗಿ ಕಳೆದ ಕೆಲವೇ ತಿಂಗಳಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಸೇರಿದಂತೆ ಒಟ್ಟು 01 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಬುಕ್ ಆಗಿವೆ. ಕಳೆದ ಸಾಲಿಗಿಂತ ಪ್ರಸಕ್ತ ವರ್ಷ ಮಾಸಿಕ ಸರಾಸರಿ ಬುಕ್ಕಿಂಗ್ ಪ್ರಮಾಣದಲ್ಲಿಯೂ ಏರಿಕೆ ಕಂಡು ಬಂದಿದೆ.
ಹೌದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕದಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳ ನೋಂದಣಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದೆ. ರಾಜ್ಯದಲ್ಲಿ ದೈನಂದಿನವಾಗಿ ಸರಾಸರಿ 422 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ ಎಂದು TOI ವರದಿ ಮಾಡಿದೆ.

ಪ್ರಸಕ್ತ ಸಾಲಿನಿಂದ (2023-2024) ಈವರೆಗೆ ಅಂದರೆ ಈ ವರ್ಷ ಏಪ್ರಿಲ್ ನಿಂದ ನವೆಂಬರ್ ವರೆಗೆ ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ನೋಂದಣಿ ಆಗಿವೆ. ಇವುಗಳಲ್ಲಿ 90,781 ದ್ವಿಚಕ್ರ ವಾಹನಗಳು, 3,463 ತ್ರಿಚಕ್ರ ವಾಹನಗಳು ಮತ್ತು 8,765 ನಾಲ್ಕು ಚಕ್ರ ವಾಹನಗಳು ಎಂಬುದು ವಿಶೇಷವಾಗಿದೆ.
ಹಿಂದಿನ ವರ್ಷದ ಆರ್ಥಿಕ ವರ್ಷ (2022-23) ಅಂಕಿ ಅಂಶ ನೋಡುವುದಾದರೆ ರಾಜ್ಯದಲ್ಲಿ 1.1 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ನೋಂದಣಿ ಆಗಿವೆ. ಅಂದರೆ ಪ್ರತಿ ದಿನ ಸರಾಸರಿ 302 ಇವಿ ಗಳು ನೋಂದಣಿ ಆಗಿವೆ. ಈ ವರ್ಷ ನವೆಂಬರ್ ವರೆಗೆ ರಾಜ್ಯದಲ್ಲಿ 2.8 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ನೋಂದಣಿ ಆಗಿವೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
4,800 ಹೊಸ ವಾಹನಗಳು ನೋಂದಣಿ
ಸದರಿ ಆರ್ಥಿಕ ವರ್ಷ ರಾಜ್ಯದಲ್ಲಿ ದೈನಂದಿನ ಸರಾಸರಿ 4,800 ಹೊಸ ವಾಹನಗಳು, ಇ-ವಾಹನಗಳು ನೋಂದಣಿ ಆಗುತ್ತಿವೆ ಎಂದು ಸಾರಿಗೆ ಆಯುಕ್ತ ಯೋಗೇಶ್ ಎಎಂ ಮಾಹಿತಿ ನೀಡಿದ್ದಾರೆ. ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳ ನೋಂದಣಿಗೆ ತೆರಿಗೆ ವಿನಾಯಿತಿ ನೀಡಿರುವುದು, ಪರಿಸರ ಕಾಳಹಿ, ಜನಸ್ನೇಹಿ ಇವಿ ಪರಿಚಯದಿಂದಾಗಿ ಸವಾರರು 'ಇವಿ' ವಾಹನಗಳತ್ತ ಹೆಚ್ಚು ಒಲವು ಹೊಂದಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ 2017-18ನೇ ವರ್ಷದಲ್ಲಿ ಕೇವಲ 97 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ನೋಂದಣಿ ಆಗಿವೆ. ಆ ವರ್ಷ ಆಗತಾನೆ ಇವಿ ವಾಹನಗಳು ಪರಿಚಯಗೊಳ್ಳುತ್ತಿದ್ದವು. 2020-21ರಲ್ಲಿ ಈ ಸಂಖ್ಯೆ 10,000ಕ್ಕೆ ಏರಿತು. ಸದ್ಯ ಇದು ಒಂದು ಲಕ್ಷ ದಾಟಲಿದೆ. ಈಗಾಗಲೇ ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಇಟ್ಟಿರುವ ಇವಿ ಬೈಕ್ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿವೆ ಎಂದು ಸಾರಿಗೆ ಅಧಿಕಾರಿಗಳು ವಿಶ್ವಾಸ ಇಟ್ಟುಕೊಂಡಿದ್ದಾರೆ.
ವರ್ಷದಿಂದ ವರ್ಷಕ್ಕೆ 'ಇವಿ' ಬಳಕೆ ಏರಿಕೆ
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ 'ವಾಹನ್' ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಮಾಹಿತಿ ಪ್ರಕಾರ ಇದೇ ವರ್ಷ ಮೇ ತಿಂಗಳಲ್ಲಿ ಅತಿ ಹೆಚ್ಚು ವಿದ್ಯುತ್ ವಾಹನಗಳು (18,884) ನೋಂದಣಿಯಾಗಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಪರಿಸರ ಸ್ನೇಹಿ ವಾತಾವರಣಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಇವಿ ನೋಂದಣಿಗಾಗಿ ಖರೀದಿದಾರರಿಗೆ ಜೀವಮಾನದ ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡಿದೆ. ಇದು ಸಹ 'ಇವಿ' ಗಳ ಬುಕ್ಕಿಂಗ್, ಬಳಕೆ ಹೆಚ್ಚಳಕ್ಕೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲಿ, ಮೊದಲ ಬಾರಿಗೆ, ರಾಜ್ಯ ಸರ್ಕಾರವು 20 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ಕಾರುಗಳ ಮೇಲೆ 10% ಜೀವಿತಾವಧಿ ತೆರಿಗೆ ಸಂಗ್ರಹಿಸಲು ಪ್ರಸ್ತಾಪಿಸಿತ್ತು. ಆದರೆ ಇದು ಹೊರೆಯಾಗುವುದರಿಂದ ವಿರೋಧ ವ್ಯಕ್ತವಾಯಿತು. ಹೀಗಾಗಿ ಸರ್ಕಾರ ಪ್ರಸ್ತಾವನೆ ಹಿಂಪಡೆಯಿತು.












Click it and Unblock the Notifications