ಅಥಣಿಯಲ್ಲಿ ಲಕ್ಷ್ಮಣ ಸವದಿ ಭರ್ಜರಿ ಗೆಲುವು... ಜಾರಕಿಹೊಳಿಗೆ ಮುಖಭಂಗ
ಅಥಣಿ: ರಾಜ್ಯ ಚುನಾವಣಾ ಅಖಾಡದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಅಥಣಿ ಕೂಡ ಒಂದು. ಮೂರು ಬಾರಿ ಬಿಜೆಪಿಯಿಂದ ಗೆದ್ದು, ಈ ಬಾರಿ ಬಂಡೆದ್ದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ, ಭರ್ಜರಿ ಅಂತರದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಗೆದ್ದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಬರೋಬ್ಬರಿ 30 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗೆ ಸೆಡ್ಡು ಹೊಡೆದಿದ್ದು, ಜಾರಕಿಹೊಳಿಗೆ ಮುಖಭಂಗವಾದಂತಾಗಿದೆ. ಈ ಹಿಂದೆ 2004, 2008, 2013 ರಲ್ಲಿ ಬಿಜೆಪಿಯಿಂದ ಮೂರು ಬಾರಿ ಗೆದ್ದಿದ್ದರು. ಬಳಿಕ ಕಳೆದ ಚುನಾವಣೆಯಲ್ಲಿ ಸೋತಿದ್ದ ಕಾರಣ ಈ ಬಾರಿ ಟಿಕೆಟ್ ನೀಡಿಲ್ಲ. ಹಾಗೆಯೇ ಜಾರಕಿಹೊಳಿ ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ಕೊಡಿಸಿದ್ದರು.

ಕಳೆದ ಬಾರಿ ಸೋತರೂ ಕೂಡ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ವಿಧಾನಪರಿಷತ್‌ಗೆ ಆಯ್ಕೆಯಾಗುವ ಮೂಲಕ ಡಿಸಿಎಂ ಆಗಿದ್ದರು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡದ ಕಾರಣ ಮುನಿಸಿಕೊಂಡು ಬಂಡೆದ್ದದ್ದರು. ಕಾಂಗ್ರೆಸ್ ಸೇರುವ ಮೂಲಕ ಬಿಜೆಪಿಗೆ ನೇರವಾಗಿ ಸವಾಲ್ ಹಾಕಿದ್ದರು.
ಲಕ್ಷ್ಮಣ ಸವದಿಯವರು ಬಿಜೆಪಿಯ ಕಟ್ಟಾಳು ಎಂದೇ ಹೇಳಲಾಗುತ್ತದೆ. ಆದರೆ, ಸವದಿ ಪಕ್ಷಬಿಟ್ಟು ಹೊರಟು ಈಗ ಜಯಭೇರಿ ಭಾರಿಸಿರುವುದು ಕಮಲ ನಾಯಕರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಹಲವು ರಾಜಕೀಯ ತಂತ್ರಗಾರಿಕೆಗಳ ಮಧ್ಯೆ ಲಕ್ಷ್ಮಣ ಸವದಿ ಕೊನೆಗೂ ಗೆಲುವು ಸಾಧಿಸಿದ್ದಾರೆ. ಬಿಜೆಪಿ ವಿರುದ್ಧ ಸೆಟೆದು ನಿಂತು, ಮುಖ್ಯವಾಗಿ ತನಗೆ ಟಿಕೆಟ್ ಬಾರದಿರಲು ಕಾರಣವಾಗಿದ್ದ ಜಾರಕಿಹೊಳಿ ವಿರುದ್ಧ ಗೆದ್ದು ಬೀಗಿದ್ದಾರೆ.












Click it and Unblock the Notifications