ಕಲಬುರಗಿ; ಜಯದೇವ ಆಸ್ಪತ್ರೆ ಡಿಸೆಂಬರ್‌ನಲ್ಲಿ ಲೋಕಾರ್ಪಣೆ
ಕಲಬುರಗಿ, ಆಗಸ್ಟ್ 23: ಕಲಬುರಗಿ ನಗರದ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖಾ ಆಸ್ಪತ್ರೆ ಡಿಸೆಂಬರ್ ಒಳಗೆ ಲೋಕಾರ್ಪಣೆಯಾಗುವ ನಿರೀಕ್ಷೆ ಇದೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಅರ್‌ಡಿಬಿ) ಅಧ್ಯಕ್ಷ ಡಾ. ಅಜಯ್ ಸಿಂಗ್ ಕಲಬುರಗಿಯ ಜಯದೇವ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕೆಕೆಆರ್‌ಡಿಬಿ ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ್ ಪಿ., ಉಪ ಕಾರ್ಯದರ್ಶಿ ಆನಂದ ಪ್ರಕಾಶ ಮೀನಾ ಮುಂತಾದವರು ಉಪಸ್ಥಿತರಿದ್ದರು.

ಮಾಧ್ಯಮಗಳ ಜೊತೆ ಮಾತನಾಡಿದ ಡಾ. ಅಜಯ್ ಸಿಂಗ್, "ಕೆಕೆಆರ್‌ಡಿಬಿ ನೆರವಿನ ಬಹುದೊಡ್ಡ ಯೋಜನೆ ಇದಾಗಿದೆ. 2019ರಲ್ಲಿ ಕಾಮಗಾರಿ ಆರಂಭವಾಗಿದ್ದು, ಪ್ರಸ್ತುತ ಕಾಮಗಾರಿ ವೇಗವಾಗಿ ಸಾಗಿದೆ. ಬರುವ ಡಿಸೆಂಬರ್‌ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ನಂತರ ಲೋಕರ್ಪಾಣೆ ಮಾಡಲಾಗುವುದು" ಎಂದರು.
"ಸಂವಿಧಾನಕ್ಕೆ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371ಜೆ ವಿಶೇಷ ಮೀಸಲಾತಿ ದೊರಕಿದೆ. ಇದರ ಸವಿನೆನಪಿನಲ್ಲಿ ಜಯದೇವ ಸಂಸ್ಥೆಯ ಕಲಬುರಗಿ ಘಟಕದ ನೂತನ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯೂ 371 ಇರಲಿದೆ. ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿಗಳ ನೇಮಕಾತಿಯೂ ನಡೆಯಲಿದೆ" ಎಂದು ಅಜಯ್ ಸಿಂಗ್ ಹೇಳಿದರು.
"ಕಲಬುರಗಿಯಲ್ಲಿ 2016ರಲ್ಲಿ ಜಯದೇವ ಆಸ್ಪತ್ರೆ ಆರಂಭವಾಗುವ ಮೊದಲು ಇಲ್ಲಿನ ಹೃದ್ರೋಗಿಗಳು ಚಿಕಿತ್ಸೆಗೆ ನೆರೆಯ ಸೋಲಾಪುರ, ಹೈದರಾಬಾದ್ ಅಥವಾ ದೂರದ ಬೆಂಗಳೂರಿಗೆ ಹೋಗಬೇಕಿತ್ತು. ಜಯದೇವ ಆಸ್ಪತ್ರೆ ಸ್ಥಾಪನೆ ಆದ ಮೇಲೆ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಆಸ್ಪತ್ರೆ ನಿರ್ಮಾಣದಿಂದ ಈ ಭಾಗದ ಬಡ ರೋಗಿಗಳಿಗೆ ಮತ್ತಷ್ಟು ಗುಣಮಟ್ಟದ ಸೇವೆ ಸಿಗಲಿದೆ" ಎಂದು ಆಶಯ ವ್ಯಕ್ತಪಡಿಸಿದರು.
183 ಕೋಟಿ ರೂ. ವೆಚ್ಚ; ಕಲಬುರಗಿ ನಗರದ ಹೃದಯ ಭಾಗದಲ್ಲಿ 6.8 ಎಕರೆ ಪ್ರದೇಶದಲ್ಲಿ 183 ಕೋಟಿ ರೂ. ವೆಚ್ಚದಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖಾ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ನೂತನ ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ನೀಡಲು ಸಿಬ್ಬಂದಿಗಳ ನೇಮಕಾತಿಗೆ ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಒಪ್ಪಿಗೆ ನೀಡಿದೆ.
ಆಸ್ಪತ್ರೆ ಲೋಕಾರ್ಪಣೆ ಮುನ್ನವೇ ನೇಮಕಾತಿ ಪ್ರಕ್ರಿಯೆ ಸಹ ಪೂರ್ಣಗೊಳಿಸಲಾಗುತ್ತದೆ. ಜಯದೇವ ಸಂಸ್ಥೆ ಕಲ್ಯಾಣ ಕರ್ನಾಟಕ ಭಾಗದ ಹೃದ್ರೋಗಿಗಳ ಪಾಲಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸಲಿದೆ ಎಂಬ ಆಶಯವನ್ನು ಸರ್ಕಾರ ಹೊಂದಿದೆ.
ಕಳೆದ ತಿಂಗಳು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ ಜೊತೆ ನೂತನ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾರ್ಯ ಪರಿಶೀಲನೆ ನಡೆಸಿದ್ದರು.
ಬಳಿಕ ಮಾತನಾಡಿದ್ದ ಸಚಿವರು ಬರೀ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾತ್ರವಲ್ಲ. ಸುಮಾರು 56 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಆಸ್ಪತ್ರೆ ತನ್ನ ಸೇವೆಯನ್ನು ಆರಂಭಿಸಲಿದೆ ಎಂದು ಹೇಳಿದ್ದರು.
ಈ ಆಸ್ಪತ್ರೆಯನ್ನು ಮೊದಲು 350 ಹಾಸಿಗೆಯ ಆಸ್ಪತ್ರೆ ಎಂದು ತೀರ್ಮಾನಿಸಲಾಗಿತ್ತು. ಸಂವಿಧಾನಕ್ಕೆ ತಿದ್ದುಪಡಿ ತಂದು ಕಲಬುರಗಿ ವಿಭಾಗಕ್ಕೆ 371ಜೆ ವಿಶೇಷ ಮೀಸಲಾತಿ ದೊರಕಿದೆ. ಈ ಹಿನ್ನಲೆಯಲ್ಲಿ ಜಯದೇವ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯೂ 371 ಇರಲಿ ಎಂದು ತೀರ್ಮಾನ ಮಾಡಲಾಯಿತು. ಜಿ+3 ಮಹಡಿಯ ಈ ಆಸ್ಪತ್ರೆ 100 ಐಸಿಯು ಬೆಡ್, 3 ಓಟಿ ಥಿಯೇಟರ್, 3 ಕ್ಯಾಥ್ ಲ್ಯಾಬ್ ಹೊಂದಿದೆ. ಬೆಂಗಳೂರು ಆಸ್ಪತ್ರೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಇಲ್ಲಿ ಇರಲಿವೆ.












Click it and Unblock the Notifications