ನಮ್ಮ ಗ್ಯಾರಂಟಿ ಜನರ ಕೈಯಲ್ಲಿದೆ, ಆದ್ರೆ ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ-ಪ್ರಿಯಾಂಕ್ ಖರ್ಗೆ
ಬೆಂಗಳೂರು, ಏಪ್ರಿಲ್ 17: ಆರ್ಥಿಕ ಸದೃಢತೆ ಹಾಗೂ ಸಾಮಾಜಿಕ ಸಮಾನತೆ ರೂಪಿಸುವಂತಹ ಸರ್ಕಾರ ತರುವ ಶಕ್ತಿ ಮತದಾರರಿಗೆ ಇದೆ. ಹಾಗಾಗಿ ಮತದಾರರು ತಮ್ಮ ಅಮೂಲ್ಯ ಮತದ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಜನಪರ ಸರ್ಕಾರ ಬರುವಂತೆ ನೋಡಿಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಅಸೆಂಬ್ಲಿ ಚುನಾವಣೆಗೆ ಮುನ್ನ ಐದು ಗ್ಯಾರಂಟಿ ಭರವಸೆ ನೀಡಿದ್ದೆವು. ಅದರಂತೆ ಸರ್ಕಾರ ಬಂದಾಗ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿತಿಂಗಳು ಮನೆಯ ಯಜಮಾನಿಗೆ ರೂ 2000, ಗೃಹಜ್ಯೋತಿ ಯೋಜನೆಯಡಿಯಲಿ 200 ಯೂನಿಟ್ ವರೆಗೆ ವಿದ್ಯುತ್ ಉಚಿತ, ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿ, ಯುವನಿಧಿ ಯೋಜನೆಯಡಿಯಲ್ಲಿ ಪದವಿ ಹಾಗೂ ಡಿಪ್ಲೋಮಾ ಪದವಿಧರರಿಗೆ ರೂ 1500 ಹಾಗೂ ರೂ 3000 ಪ್ರತಿತಿಂಗಳ ನೀಡಲಾಗುತ್ತಿದೆ ಎಂದರು.

ಇನ್ನು ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಸರ್ಕಾರಿಬಸ್ ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗುತ್ತಿದೆ. ಈ ಎಲ್ಲ ಯೋಜನೆಗಳನ್ನು ಜಾರಿಗೆ ತರಲು ವಾರ್ಷಿಕ 52,000 ಕೋಟಿ ರೂಪಾಯಿ ಬೇಕಾಗುತ್ತದೆ.ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಮಹಿಳೆಯರಿಗೆ ಆರ್ಥಿಕ ಸಬಲತೆ ರೂಪಿಸುವ ಯೋಜನೆಗಳು ನಮ್ಮ ಸರ್ಕಾರದ ಸಾಧನೆಯಾಗಿದೆ ಎಂದರು.
ಬೆಲೆ ಏರಿಕೆ, ಸಿಲಿಂಡರ್ ಬೆಲೆ ಏರಿಕೆ, ಪೆಟ್ರೋಲ್ ಡಿಸೇಲ್ ಆರ್ಥಿಕ ಅಸಮಾನತೆ,ನಿರುದ್ಯೋಗ, ರೈತರ ಆತ್ಮಹತ್ಯೆ, ವಿಧ್ಯಾರ್ಥಿಗಳು ಶಾಲೆಯಿಂದ ಹೊರಗೆ ಇದ್ದಾರೆ, ರೈತರ ಆದಾಯ ದುಪ್ಪಟ್ಟಾಗಲಿಲ್ಲ, ಕನಿಷ್ಠ ಬೆಂಬಲ ಬೆಲೆ ಈ ಎಲ್ಲ ಸಮಸ್ಯೆಗಳು ಇನ್ನೂ ಜೀವಂತವಿದೆ. ಆದರೂ ಮೋದಿಯ ಅಚ್ಚೆ ದಿನ್ ಆಡಳಿತದಲ್ಲಿವೆ ಎಂದು ಹೇಳುತ್ತಾರೆ ಎಂದು ಬಿಜೆಪಿಯನ್ನು ಟೀಕಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಬೆಳವಣಿಗೆಗೆ ಅನುಕೂಲವಾಲು ಆರ್ಟಿಕಲ್ 372 J ಜಾರಿಗೆ ತರಲು ಅಂದಿನ ಬಿಜೆಪಿ ಸರ್ಕಾರ ತಿರಸ್ಕಾರ ಮಾಡಿತ್ತು. ಆದರೆ ಖರ್ಗೆ ಸಾಹೇಬರು ಎಂಪಿಯಾಗಿ ಆರಿಸಿ ಹೋದಾಗ ಇದನ್ನು ಜಾರಿಗೆ ತಂದರು. ಪರಿಣಾಮವಾಗಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತದೆ.
ಹತ್ತು ವರ್ಷದಲ್ಲಿ ಮೋದಿ ಸರ್ಕಾರದ ಸಾಧನೆ ಏನಿದೆ ಎಂದು ಪ್ರಶ್ನಿಸಿದ ಖರ್ಗೆ, ರಾಜ್ಯದಲ್ಲಿ ಭೀಕರ ಬರಗಾಲ ಇದೆ ತಂಡ ಕಳಿಸಿ ಎಂದು ಮನವಿ ಮಾಡಿತ್ತು. ಅಧಿಕಾರಿಗಳ ತಂಡ ಬಂದು ಸಮೀಕ್ಷೆ ಮಾಡಿತು. ಅವರ ವರದಿಯಂತೆ 48 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದೆ ಹಾಗಾಗಿ 18,171 ಕೋಟಿ ಬರ ಪರಿಹಾರ ನೀಡಿ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ನಯಾಪೈಸೆ ಬಿಡುಗಡೆ ಮಾಡಿಲ್ಲ. ಬರ ಇರುವುದರಿಂದ ನರೇಗಾ ಯೋಜನೆಯಡಿಯಲ್ಲಿ ಮಾನವ ದಿನಗಳನ್ನು 150 ದಿನಗಳಿಗೆ ಹೆಚ್ಚಿಸುವ ಕುರಿತು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಸಂಸದರು ಈ ಬಗ್ಗೆ ಮಾತನಾಡಲಿ ಎಂದು ಅಗ್ರಹಿಸಿದರು.
ನಮ್ಮ ಗ್ಯಾರಂಟಿಗಳ ಕಾಪಿ ಮಾಡಿರುವ ಬಿಜೆಪಿ ಈಗ ಮೋದಿ ಹೆಸರಲ್ಲಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಅವಗಳಿಗೆ ವಾರಂಟಿ ಇಲ್ಲ ಅವು ಏನಿದ್ದರೂ ಪೇಪರ್ ಮೇಲಿರುವ ಗ್ಯಾರಂಟಿಗಳು. ಆದರೆ ನಮ್ಮ ಗ್ಯಾರಂಟಿಗಳು ಜನರ ಕೈಯಲ್ಲಿ ಇವೆ ಎಂದರು ಟೀಕಿಸಿದರು.
ಹೋದ ಸಲದ ಚುನಾವಣೆಯಲ್ಲಿ ನಮಗೆ ಹಿನ್ನೆಡೆಯಾಗಿದೆ. ಅದರ ಪರಿಣಾಮ ಅಭಿವೃದ್ದಿಗೆ ಭಾರೀ ಹಿನ್ನಡೆಯಾಯಿತು. ಈ ಸಲ ಹಾಗೆ ಮಾಡಬೇಡಿ, ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಆಶೀರ್ವಾದ ಮಾಡಿ. ರಾಧಾಕೃಷ್ಟ ಅವರು ಚಿತ್ತಾಪುರದ ಮಗ. ಚಿತ್ತಾಪುರ ಮಗನಿಗೆ ಮತ ಹಾಕ್ತೀರಾ ಅಥವಾ ಚಿಂಚೋಳಿ ಎಂಪಿ ಮತ ಹಾಕುತ್ತೀರಾ? ಎಂದು ಮತದಾರರಲ್ಲಿ ಪ್ರಶ್ನಿಸಿದರು.












Click it and Unblock the Notifications