ಪ್ರಧಾನಿ ವಿರುದ್ದ ಮತ್ತೆ ಖರ್ಗೆ ಏಕವಚನ ಪ್ರಯೋಗ: ಮೋದಿ ನೇಣು ಹಾಕೋತಾನಾ?
Recommended Video
ಕಲಬುರಗಿ, ಮೇ 13: ಲೋಕಸಭಾ ಚುನಾವಣೆಯನ್ನೂ ಮೀರಿಸುವಷ್ಟು ಈ ಎರಡು ಅಸೆಂಬ್ಲಿ (ಚಿಂಚೋಳಿ, ಕುಂದಗೋಳ) ಉಪಚುನಾವಣೆಯ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ವಾಕ್ಸಮರ ಮುಂದುವರಿದಿದ್ದು, ಪ್ರಧಾನಮಂತ್ರಿಯನ್ನು ಏಕವಚನದಲ್ಲಿ ಮತ್ತೆ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೋದಿ ಮುಖ ನೋಡಿ ಮತಹಾಕಿ ಎನ್ನುವ ಬಿಜೆಪಿ ನಾಯಕರಿಗೆ ಸ್ವಲ್ಪನಾದ್ರೂ ಕಾಮನ್ ಸೆನ್ಸ್ ಇದೆಯಾ, ಮೋದಿ ಇಲ್ಲಿಗೆ ಬಂದು ಅಭಿವೃದ್ದಿ ಕೆಲಸ ಮಾಡುತ್ತಾನಾ ಎಂದು ಒಂದು ದಿನದ ಹಿಂದೆ ಟೀಕಿಸಿದ್ದ ಖರ್ಗೆ, ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾನುವಾರ (ಮೇ 12) ಮತ್ತೆ ಮೋದಿ ವಿರುದ್ದ ಹರಿಹಾಯ್ದಿದ್ದಾರೆ.
ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವಿಚಾರದಲ್ಲಿ ಕಾಂಗ್ರೆಸ್ಸಿನ ಕೊಡುಗೆ ತುಂಬಾಯಿದೆ, ಆಗ ಅವನು (ಮೋದಿ) ಹುಟ್ಟೇ ಇರಲಿಲ್ಲ, ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವನಿಗೆ ನೈತಿಕತೆಯಿದೆಯಾ ಎಂದು ಪ್ರಶ್ನಿಸಿರುವ ಖರ್ಗೆ, ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಲವತ್ತು ಸ್ಥಾನಕ್ಕಿಂತ ಹೆಚ್ಚು ಬಂದರೆ, ಅವನು ನೇಣು ಹಾಕೋತಾನಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ದೇಶದೆಲ್ಲಡೆ ಕಾಂಗ್ರೆಸ್ಸಿಗೆ ನಲವತ್ತು ಸೀಟು ಮೇಲೆ ಬರುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾನೆ, ಅವನು ನನಗಿಂತ ವಯಸ್ಸಲ್ಲಿ ಸಣ್ಣವ. ನಲವತ್ತರ ಮೇಲೆ ಕಾಂಗ್ರೆಸ್ಸಿಗೆ ಸೀಟು ಬಂದರೆ, ದೆಹಲಿಯ ವಿಜಯ್ ಚೌಕದಲ್ಲಿ ಅವನು ನೇಣು ಹಾಕೋತಾನಾ ಎಂದು ಖರ್ಗೆ, ಮೋದಿ ವಿರುದ್ದ ಕಿಡಿಕಾರಿದ್ದಾರೆ.
ರಾಜೀವ್ ಗಾಂಧಿ ಸತ್ತು ಮೂರು ದಶಕದ ಮೇಲೆ ಆಯಿತು, ಈ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾನೆ, ಯಾಕೆಂದರೆ ಬೇರೆ ಮಾತನಾಡಲು ಬಿಜೆಪಿಗೆ ವಿಷಯವೇ ಇಲ್ಲ ಎಂದು ಖರ್ಗೆ ಲೇವಡಿ ಮಾಡಿದ್ದಾರೆ.
ಬಿಜೆಪಿ ಏನಾದರೂ ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ ರಕ್ತಕ್ರಾಂತಿ ಆಗುತ್ತದೆ. ಮೋದಿ ಹೆಸರಲ್ಲಿ ಬಿಜೆಪಿಯವರು ಮತ ಕೇಳುತ್ತಾರೆ, ಅವನೇನು ಇಲ್ಲಿಗೆ ಬಂದು ಕೆಲಸ ಮಾಡುತ್ತಾನಾ? ಬೇಕಿದ್ದರೆ ಸಮ್ಮಿಶ್ರ ಸರಕಾರದಲ್ಲಿ ಅವನಿಗೊಂದು ಸಚಿವಸ್ಥಾನ ಕೊಡುತ್ತೇವೆ ಎಂದು ಖರ್ಗೆ, ಎರಡು ದಿನಗಳ ಹಿಂದೆ ವಾಗ್ದಾಳಿ ನಡೆಸಿದ್ದರು.












Click it and Unblock the Notifications