ನಾನೂ ಮೋದಿಯಂತೆ, ಆದರೆ ಹೆಂಡತಿ ಇದ್ದಾಳೆ: ಚಿಂಚನಸೂರು
ಕಲಬುರಗಿ, ಮಾರ್ಚ್ 16: ಜಿಲ್ಲೆಯ ಪ್ರಮುಖ ರಾಜಕೀಯ ಮುಖಂಡರೊಬ್ಬರು ತಮ್ಮನ್ನು ತಾವು ಮೋದಿಗೆ ಹೋಲಿಸಿಕೊಂಡಿದ್ದಾರೆ. ನನಗೂ ಮೋದಿಗೂ ಹೆಚ್ಚೇನು ವ್ಯತ್ಯಾಸವಿಲ್ಲ ಎಂದಿದ್ದಾರೆ.
ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ, ಈಗ ಬಿಜೆಪಿಯಲ್ಲಿರುವ ಬಾಬೂರಾವ್ ಚಿಂಚನಸೂರು ಅವರು ಹೀಗೊಂದು ಹೇಳಿಕೆ ನೀಡಿದ್ದು, ನನಗೂ ಮೋದಿ ಅವರಿಗೂ ಹೆಚ್ಚೇನು ವ್ಯತ್ಯಾಸವಿಲ್ಲ ಎಂದಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಕಲ್ ಮಠದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಯುವ ಸಂದರ್ಭ ಭಾಷಣ ಮಾಡುತ್ತಾ ಅವರು ಹೀಗೆ ಹೇಳಿದರು. ನನ್ನ ಜೀವನ ತೆರೆದ ಪುಸ್ತಕ, ನಾನು ಮೋದಿಯಿದ್ದಂತೆ, ಅವರಿಗೂ ನನಗೂ ವ್ಯತ್ಯಾಸವಿಲ್ಲ, ಆದರೆ ನನಗೆ ಹೆಂಡತಿ ಇದ್ದಾಳೆ, ಮೊದಿಗೆ ಹೆಂಡತಿ ಇಲ್ಲ ಎಂದು ಚಿಂಚನಸೂರು ಹೇಳಿದ್ದಾರೆ.

ಚಿಮಚನಸೂರು ಅವರ ಮಾತಿಗೆ ಕಾರ್ಯಕರ್ತರು ಬಿದ್ದು ಬಿದ್ದು ನಕ್ಕಿದ್ದಾರೆ. ಚಿಂಚನಸೂರು ಅವರು ಭಾಷಣ ಸದಾ ತಮಾಷೆ, ವ್ಯಂಗ್ಯವನ್ನು ಒಳಗೊಂಡಿರುತ್ತದೆ. ಒಂದೊಮ್ಮೆ ಪಕ್ಷದ ಮುಖಂಡರನ್ನು ಮೆಚ್ಚಿಸಲು ಸಹ ಅತಿಶಯೋಕ್ತಿಯ ಮಾತುಗಳನ್ನಾಡಿ ಬಿಡುತ್ತಾರೆ. ಹಿಂದೊಮ್ಮೆ ಖರ್ಗೆ ಅವರನ್ನು ಎರಡನೇಯ ಅಂಬೇಡ್ಕರ್ ಎಂದು ವಿವಾದಕ್ಕೆ ಈಡಾಗಿದ್ದರು.
ಇಂದಿನ ಸಭೆಯಲ್ಲಿ ಮುಂದುವರೆದು ಮಾತನಾಡಿದ ಅವರು, ಉಮೇಶ್ ಜಾಧವ್ ಅವರನ್ನು ಕಲಬುರಗಿಯಲ್ಲಿ ಬಿಜೆಪಿಯಿಂದ ಗೆಲ್ಲಿಸಬೇಕು, ಆಗ ಅವರು ಖರ್ಗೆಗಿಂತಲೂ ದೊಡ್ಡ ಸಚಿವರಾಗುತ್ತಾರೆ. ಅವರು ಸಚಿವರಾದರೆ ನಾವೆಲ್ಲರೂ ಸಚಚಿವರಾದಂತೆ ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಚಿಂಚನಸೂರು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನಪ್ಪಿದ್ದಾರೆ.












Click it and Unblock the Notifications