ಮದುವೆ ಸಮಾರಂಭದಲ್ಲಿ ಧುರಂಧರ್ ಚಿತ್ರದ ಹಾಡಿಗೆ ಕಾಂಗ್ರೆಸ್ ನಾಯಕ ಗನ್ ಹಿಡಿದು ನೃತ್ಯ: ಪೊಲೀಸ್ ಆಯುಕ್ತರು ಹೇಳಿದ್ದೇನು ತಿಳಿಯಿರಿ
Kalaburagi wedding controversy: ಕಲಬುರಗಿಯಲ್ಲಿ ನಡೆದ ಮದುವೆ ಸಮಾರಂಭವೊಂದು ಸಂತೋಷ, ಸಂಗೀತ ಮತ್ತು ಸಂಭ್ರಮದಿಂದ ತುಂಬಿರಬೇಕಾದ ಸಂದರ್ಭದಲ್ಲೇ ಅಚ್ಚರಿಯ ಘಟನೆಯಿಂದ ವಿವಾದಕ್ಕೆ ಕಾರಣವಾಗಿದೆ. ರಣವೀರ್ ಸಿಂಗ್ ಅಭಿನಯದ "ಧುರಂಧರ್" ಚಿತ್ರದ "FA9LA" ಹಾಡಿಗೆ ನಡೆದ ನೃತ್ಯ ಕಾರ್ಯಕ್ರಮವು ಅಫ್ಜಲಪುರ ಕಾಂಗ್ರೆಸ್ ನಾಯಕ ಮತೀನ್ ಪಟೇಲ್ ಅವರನ್ನು ಅನಿರೀಕ್ಷಿತವಾಗಿ ಚರ್ಚೆಯ ಕೇಂದ್ರಬಿಂದುವಾಗಿಸಿದೆ.
ಜಿಲ್ಲೆಯ ಆಫಜಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಅವರ ಆಪ್ತ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಅವರು, ಮದುವೆ ಸಮಾರಂಭದಲ್ಲಿ ಕೈಯಲ್ಲಿ ಗನ್ ಹಿಡಿದು ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಬಾಲಿವುಡ್‌ನ "ಧುರಂಧರ್" ಚಿತ್ರದ ಹಾಡಿಗೆ ಅವರು ವೇದಿಕೆಯ ಮೇಲೆ ಗನ್ ಪ್ರದರ್ಶಿಸುತ್ತಾ ಕುಣಿದಿರುವ ದೃಶ್ಯಗಳು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ಈ ವಿಡಿಯೋ ಹರಿದಾಡುತ್ತಿದ್ದಂತೆ, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳಿ ವ್ಯಕ್ತವಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಕಾನೂನುಬಾಹಿರ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಪ್ರಕರಣದ ಬಗ್ಗೆ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಲಬುರಗಿ ಪೊಲೀಸ್ ಆಯುಕ್ತರು ಹೇಳಿದ್ದೇನು?
ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರು ಈ ಕುರಿತು ಪ್ರತಿಕ್ರಿಯಿಸಿ, "ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿರುವ ವ್ಯಕ್ತಿಯ ಗುರುತು ನಮಗೆ ತಿಳಿದಿದೆ. ವಿಡಿಯೋ ಯಾವ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಅದು ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ," ಎಂದು ತಿಳಿಸಿದ್ದಾರೆ.
"ವಿಡಿಯೋದಲ್ಲಿರುವ ಗನ್ ಅಸಲಿಯೋ ಅಥವಾ ನಕಲಿಯೋ? ಅದಕ್ಕೆ ಪರವಾನಗಿ ಇದೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಪರವಾನಗಿ ಪಡೆದ ಶಸ್ತ್ರಾಸ್ತ್ರವಾಗಿದ್ದರೂ ಷರತ್ತುಗಳ ಉಲ್ಲಂಘನೆ ಆಗಿದೆಯೇ ಎಂಬುದನ್ನು ನೋಡಲಾಗುತ್ತದೆ. ಒಂದು ವೇಳೆ ಕಾನೂನು ಉಲ್ಲಂಘನೆ ಆಗಿರುವುದು ದೃಢಪಟ್ಟರೆ, ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ," ಎಂದು ಸ್ಪಷ್ಟಪಡಿಸಿದ್ದಾರೆ.
ವ್ಯಾಪಕ ಚರ್ಚೆಗೆ ಕಾರಣವಾದ ವಿಡಿಯೋ?
ವಿಡಿಯೋದಲ್ಲಿ, ಮತೀನ್ ಪಟೇಲ್ ಕಪ್ಪು ಬಣ್ಣದ ಎಸ್‌ಯುವಿ ವಾಹನದಲ್ಲಿ ಆಗಮಿಸಿ ಇಳಿಯುವಾಗ ಅವರೊಂದಿಗೆ ಬಂದ ಕೆಲವರು ಗನ್ ಹಿಡಿದು ಸ್ವಾಗತಿಸುವ ದೃಶ್ಯಗಳೂ ಕಂಡುಬರುತ್ತವೆ. ಮದುವೆ ಕಾರ್ಯಕ್ರಮದ ಸಂಗೀತದ ನಡುವೆ ವೇದಿಕೆಯ ಮೇಲೆ ಗನ್ ಹಿಡಿದು ಕುಣಿಯುವ ದೃಶ್ಯಗಳು ಹಾಗೂ ಅವರೊಂದಿಗೆ ಕೆಲವರು ಫೋಟೋ ಮತ್ತು ವೀಡಿಯೊ ತೆಗೆದುಕೊಳ್ಳುತ್ತಿರುವುದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಪಟೇಲ್ ಅವರು ರೆಸಾರ್ಟ್‌ನಲ್ಲಿ ನಡೆದ ಕಾರ್ಯಕ್ರಮದ ವೇದಿಕೆ ಮೇಲೆ ಹೆಜ್ಜೆ ಹಾಕಿರುವುದು ಕಾಣಿಸುತ್ತದೆ. "FA9LA" ಹಾಡಿಗೆ ಅವರು ನೃತ್ಯ ಮಾಡಿರುವ ದೃಶ್ಯಗಳು ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿನ ದಿನಗಳಲ್ಲಿ ಅದೇನೋ ಗೊತ್ತಿಲ್ಲ, ಜನಪ್ರತಿನಿಧಿಗಳೇ ಸಾರ್ವಜನಿಕ ಸ್ಥಳಗಳಲ್ಲಿ ಗನ್ ಹಿಡಿದುಕೊಂಡು ರಾಜರೋಷವಾಗಿ ಗೂಂಡಾಗಳಂತೆ ವರ್ತಿಸಿ ಶೋಕಿ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಲಿವೆ. ಹಾಗೆಯೇ ಇದೀಗ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಕಪ್ಪು ಬಣ್ಣದ ಎಸ್‌ಯುವಿ ಕಾರಿನಲ್ಲಿ ಮದುವೆ ಸಮಾರಂಭಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಇದೇ ವೇಳೆ ಅವರ ಪಕ್ಕದಲ್ಲಿ ಗನ್ ಮ್ಯಾನ್ ಇದ್ದರೂ, ಅವರು ತಮ್ಮ ಜೋಬಿನಿಂದ ಗನ್ ತೆಗೆದು ಅದನ್ನು ಶೋಕಿ ಮಾಡೋ ರೀತಿಯಲ್ಲಿ ತೋರಿಸಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಗಳು ಭುಗಿಲೆದ್ದಿವೆ. ಇವರೇ ಹೀಗೆ ಗೂಂಡಾಗಳಂತೆ ಆಡಿದರೆ ಹೇಗೆ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications