ಕಲಬುರಗಿ: ಐ-20 ಕಾರು, 48 ನಿಮಿಷ, ಎಟಿಎಂನಿಂದ 18 ಲಕ್ಷ ರೂ. ದರೋಡೆ
ಕಲಬುರಗಿ, ಏಪ್ರಿಲ್ 09: ಬೀದರ್‌ನಲ್ಲಿ ಗುಂಡಿನ ದಾಳಿ ನಡೆಸಿ ಎಟಿಎಂ ವಾಹನದಲ್ಲಿದ್ದ ಹಣ ದೋಚಿದ ಪ್ರಕರಣದ ನೆನಪು ಇನ್ನು ಇರುವಾಗಲೇ ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ ಪ್ರಕರಣ ಕಲಬುರಗಿಯಲ್ಲಿ ನಡೆದಿದೆ. ಬೇರೆ ರಾಜ್ಯದ ದರೋಡೆಕೋರರ ತಂಡ ಈ ಕೃತ್ಯವನ್ನು ಮಾಡಿರಬಹುದು ಎಂದು ಅಂದಾಜಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಲಬುರಗಿಯ ರಾಮನಗರದ ಬಳಿ ಇರುವ ಎಸ್‌ಬಿಐ ಬ್ಯಾಂಕ್ ಎಟಿಎಂಗೆ ನುಗ್ಗಿದ ಗುಂಪು ಗ್ಯಾಸ್ ಕಟರ್ ಮೂಲಕ ಎಟಿಎಂ ಯಂತ್ರ ಕಟ್ ಮಾಡಿ 18 ಲಕ್ಷ ರೂ. ಹಣವನ್ನು ದೋಚಿದ್ದಾರೆ. ದರೋಡೆಕೋರರು ಐ-20 ಕಾರಿನಲ್ಲಿ ಬಂದು ಈ ಕೃತ್ಯವನ್ನು ಎಸಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಪೂಜಾರಿ ಚೌಕ್ ಹತ್ತಿರ ಇರುವ ಎಸ್‌ಬಿಐ ಬ್ಯಾಂಕ್ ಎಟಿಎಂನಲ್ಲಿ ಈ ದರೋಡೆ ನಡೆದಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಡಿ. ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳವಾರ ಸಂಜೆ 3 ಗಂಟೆ ಸುಮಾರಿಗೆ ಸಿಬ್ಬಂದಿ ಎಸ್‌ಬಿಐ ಬ್ಯಾಂಕ್ ಎಟಿಎಂಗೆ ಹಣವನ್ನು ತುಂಬಿದ್ದರು. ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ದರೋಡೆ ನಡೆದಿದೆ. ಈ ಎಟಿಎಂನಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ಇದನ್ನು ಗಮನಿಸಿದ್ದ ಗುಂಪು ಈ ಕೃತ್ಯವನ್ನು ಮಾಡಿದೆ.
ಕಾರಿನಲ್ಲಿ ಆಗಮಿಸಿದ ಗುಂಪು ಸಿಸಿಟಿವಿಗೆ ಸ್ಪ್ರೇ ಮಾಡಿ ಬಳಿಕ ಗ್ಯಾಸ್ ಕಟರ್ ಮೂಲಕ ಎಟಿಎಂ ಯಂತ್ರವನ್ನು ಕಟ್ ಮಾಡಿ 18 ಲಕ್ಷ ರೂ. ದರೋಡೆ ಮಾಡಿದ್ದಾರೆ. ಸುಮಾರು 48 ನಿಮಿಷಗಳಲ್ಲಿ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ದರೋಡೆ ಬಳಿಕ ಕಾರಿನಲ್ಲಿ ಅವರು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಎಸ್‌ಬಿಐ ಬ್ಯಾಂಕ್ ಎಟಿಎಂಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ. ಅಂತರರಾಜ್ಯದ ತಂಡ ಈ ಘಟನೆ ಹಿಂದಿದೆ ಎಂದು ಅಂದಾಜಿಸಲಾಗಿದೆ.
20225ರ ಫೆಬ್ರವರಿಯಲ್ಲಿ ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬುವ ವಾಹನದ ಮೇಲೆ ಗುಂಡಿನ ದಾಳಿ ನಡೆಸಿ ಸುಮಾರು 83 ಲಕ್ಷ ರೂ. ದರೋಡೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅಂತರರಾಜ್ಯ ದರೋಡೆಕೋರರು ಇದ್ದಾರೆ ಎಂದು ಶಂಕಿಸಲಾಗಿದ್ದು, ಆರೋಪಿಗಳನ್ನು ಇನ್ನೂ ಸಹ ಬಂಧಿಸಿಲ್ಲ.
ಈಗ ಇದೇ ಮಾದರಿಯಲ್ಲಿ ಎಸ್‌ಬಿಐ ಬ್ಯಾಂಕ್ ಎಟಿಎಂನಿಂದ ದರೋಡೆ ಮಾಡಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ನಾಲ್ವರು ಇರುವ ತಂಡ ಈ ಕೃತ್ಯ ಮಾಡಿದೆ ಎಂದು ಅಂದಾಜಿಸಲಾಗಿದೆ. ಪೊಲೀಸರು ಮೊದಲು ಕಾರಿನ ಕುರಿತು ಮಾಹಿತಿ ಸಂಗ್ರಹ ಮಾಡಲು ಮುಂದಾಗಿದ್ದಾರೆ.
ಎಟಿಎಂಗೆ ನುಗ್ಗಿ 18 ಲಕ್ಷ ರೂ. ದರೋಡೆ ಮಾಡಿದ ಗುಂಪನ್ನು ಪತ್ತೆ ಹಚ್ಚಲು ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡುವ ನಿರೀಕ್ಷೆ ಇದೆ. ಸದ್ಯ ಪ್ರಾಥಮಿಕ ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.












Click it and Unblock the Notifications