ಚಿತ್ತಾಪುರ ಚುನಾವಣೆ ಫಲಿತಾಂಶ 2023: ಪ್ರಿಯಾಂಕ್ ಖರ್ಗೆಗೆ ಗೆಲುವು
ಕಲಬುರಗಿ, ಮೇ, 13: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದಿದ್ದು, ಚಿತ್ತಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಇವರಿಗೆ ಪೈಪೋಟಿ ನೀಡಿದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಸೋಲುಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಪ್ರಮುಖ ತಾಲೂಕು ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ಮಣಿಕಂಠ ರಾಥೋಡ್ ವಿರುದ್ಧ ಕಣಕ್ಕಿಳಿದಿದ್ದಾರೆ. ಇನ್ನು ಜೆಡಿಎಸ್‌ನಿಂದ ಡಾ ಸುಭಾಶ್ ಚಂದ್ರ ರಾಥೋಡ್ ಅಖಾಡಕ್ಕಿಳಿದಿದ್ದರು. ಹಾಗೆಯೆ ಎಎಪಿಯಿಂದ ಜಗದೀಶ್ ಎಸ್ ಸಾಗರ್ ಅವರು ಅಖಾಡದಲ್ಲಿದ್ದರು. ಈ ಕ್ಷೇತ್ರದಲ್ಲಿ 2,35,723 ಮತದಾರರಿದ್ದು, ಈ ಪೈಕಿ 1,18,082 ಪುರುಷ, 1,17,630 ಜನ ಮಹಿಳಾ ಮತದಾರರು, 11 ಜನ ಇತರ ಮತದಾರರಿದ್ದಾರೆ. ಅಲ್ಲದೆ ಇಲ್ಲಿ ಈ ಬಾರಿ 64.32% ಮತದಾನ ಆಗಿದೆ ಅನ್ನುವ ಮಾಹಿತಿ ಲಭ್ಯವಾಗಿದೆ.
ಇದು ಪರಿಶಿಷ್ಟ ಜಾತಿ ಮೀಸಲಾತಿ ಹೊಂದಿರುವ ಕ್ಷೇತ್ರ ಆಗಿದ್ದು, ಅಲ್ಲದೆ ಹೈದರಾಬಾದ್ ಕರ್ನಾಟಕ ಪ್ರದೇಶ ಆಗಿದೆ. 1989 ರಿಂದಲೂ ಕಾಂಗ್ರೆಸ್ ಭದ್ರಕೋಟೆ ಆಗಿರುವ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆಯೇ ಪೈಪೋಟಿ ನಡೆಯುತ್ತಲೇ ಬಂದಿದೆ. 2009ರ ಉಪಚುನಾವಣೆಯಲ್ಲಿ ಮಾತ್ರ ಇಲ್ಲಿ ಬಿಜೆಪಿ ಜಯಭೇರಿ ಬಾರಸಿತ್ತು. ಇನ್ನು ಇಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದ್ದು, ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಕಾಳಗ ನಡೆದಿದೆ.

2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯ ನಂತರ ಚಿತ್ತಾಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಆಯಿತು. ನಂತರ ಕ್ಷೇತ್ರಕ್ಕೆ, ಸೋಲನ್ನೇ ಕಾಣದ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಿದ್ದರು. ಇದಕ್ಕಿಂತ ಮೊದಲು ಗುರುಮಿಠಕಲ್ ಕ್ಷೇತ್ರದಲ್ಲಿ 7 ಬಾರಿ ಗೆದ್ದು, ಚಿತ್ತಾಪುರ ಕ್ಷೇತ್ರಕ್ಕೆ ಅವರು ವಲಸೆ ಬಂದಿದ್ದರು ಎನ್ನಲಾಗಿದೆ. ಹಾಗೆಯೇ 2008ರಲ್ಲಿ ಖರ್ಗೆ ಅವರು 17,442 ಮತಗಳಿಂದ ಬಿಜೆಪಿಯ ವಾಲ್ಮೀಕಿ ಕಮಲು ನಾಯಕ್ ವಿರುದ್ಧ ವಿಜಯಪತಾಕೆಯನ್ನು ಹಾರಿಸಿದ್ದರು.
ಬಳಿಕ ಖರ್ಗೆ ಅವರು ಗುಲ್ಬರ್ಗಾ ಲೋಕಸಭಾ ಸ್ಥಾನಕ್ಕೆ ನಿಂತು 2009ರಲ್ಲಿ ಗೆಲುವು ಸಾಧಿಸಿದ್ದು, ಖಾಲಿಯಾದ ಕ್ಷೇತ್ರ ಚಿತ್ತಾಪುರಕ್ಕೆ ಉಪಚುನಾವಣೆ ನಡೆಯಿತು. ಆಗ ಖರ್ಗೆ ತಮ್ಮ ಮಗ ಪ್ರಿಯಾಂಕ್ ಖರ್ಗೆಯನ್ನು ಕಣಕ್ಕಿಳಿಸಿದರು. ಆದರೆ ಅವರು ಮೊದಲ ಚುನಾವಣೆಯಲ್ಲೇ ಸೋಲನುಭವಿಸಿದರು. ಆಗ ಅಧಿಕಾರದಲ್ಲಿದ್ದ ಬಿಜೆಪಿಯು ಕ್ಷೇತ್ರವನ್ನು ಪ್ರತಿಷ್ಠೆ ಕಣವಾಗಿ ತೆಗೆದುಕೊಂಡು ವಾಲ್ಮೀಕಿ ನಾಯಕ್ ಅವರನ್ನು ಗೆಲ್ಲಿಸಿತ್ತು. ಆಗ ಪ್ರಿಯಾಂಕ್ ಅವರು 2 ಸಾವಿರ ಮತಗಳ ಅಂತರದಿಂದ ಸೋತು ಸುಣ್ಣವಾಗಿದ್ದರು.
ನಂತರ 2013 ಪ್ರಿಯಾಂಕ್ ಖರ್ಗೆ ಅವರು ವಾಲ್ಮೀಕಿ ನಾಯಕ್ ವಿರುದ್ಧ 31,191 ಹೆಚ್ಚು ಮತಗಳನ್ನು ಪಡೆಯುವ ಮೂಲಕ ಬಹುಮತಗಳ ಅಂತರದಿಂದ ಬೃಹತ್ ಗೆಲುವು ಸಾಧಿಸಿದ್ದರು. ನಂತರ ಸಚಿವರಾದ ಪ್ರಿಯಾಂಕ್ ಖರ್ಗೆ 2018ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಜಯಭೇರಿ ಸಾಧಿಸಿದ್ದರು. ಈ ವೇಳೆ ಬಿಜೆಪಿಯ ವಾಲ್ಮೀಕಿ ನಾಯಕ್ 4,393 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಇನ್ನು 2021ರಲ್ಲಿ ಮಾಜಿ ಶಾಸಕ ವಾಲ್ಮೀಕಿ ನಾಯಕ್ ಹೃದಯಾಘಾತದಿಂದ ನಿಧನರಾಗಿದರು.












Click it and Unblock the Notifications