ಸತ್ತರೂ ಬಿಜೆಪಿ ಸೇರಲ್ಲ ಅಂದಿದ್ರು ಯಡಿಯೂರಪ್ಪ : ಬಿ.ಆರ್.ಪಾಟೀಲ್
ಕಲಬುರಗಿ, ಡಿಸೆಂಬರ್ 05 : 'ಬಿ.ಆರ್.ಪಾಟೀಲ್ ಓರ್ವ ನಂಬಿಕೆ ದ್ರೋಹಿ, ಮೋಸಗಾರ, ಆತ ನನ್ನ ಹೆಸರು ಬಳಸಿ ಚುನಾವಣೆ ಗೆದ್ದಿದಾರೆ' ಎಂದು ಬಿ.ಎಸ್.ಯಡಿಯೂರಪ್ಪ ಅವರು ಕಲಬುರಗಿಯಲ್ಲಿ ನಡೆದ ಪರಿವರ್ತನಾ ಯಾತ್ರೆ ವೇಳೆ ಆಡಿದ್ದ ಮಾತಿಗೆ ಶಾಸಕ ಬಿ.ಆರ್.ಪಾಟೀಲ್ ಎದುರುತ್ತರ ನೀಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ನಡೆಸಿದ ಆಳಂದ ಶಾಸಕ ಬಿ.ಆರ್.ಪಾಟೀಲ್ 'ಸ್ವಂತ ವರ್ಚಸ್ಸಿನ ಮೇಲೆ ಗೆದ್ದಿರುವವನು ನಾನು, ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಶಿವಮೊಗ್ಗದಲ್ಲಿ ಎಷ್ಟು ಜನ ಗೆದ್ದಿದ್ದಾರೆ?' ಎಂದು ಯಡಿಯೂರಪ್ಪ ಅವರಿಗೆ ಬಿ.ಆರ್.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

ಯಡಿಯೂರಪ್ಪ ಅವರನ್ನು ಸುಳ್ಳುಗಾರ ಎಂದು ಕರೆದ ಅವರು 'ಉಸಿರಿರೋವರೆಗೂ ಬಿಜೆಪಿ ಹೋಗಲ್ಲ, ರಕ್ತದಲ್ಲಿ ಬರೆದು ಕೊಡುತ್ತೇನೆ ಅಂತಾ ಯಡಿಯೂರಪ್ಪ ಹೇಳಿದ್ದರು ಆದರೆ ರಾತೋರಾತ್ರಿ ಬಿಜೆಪಿಗೆ ಪಲಾಯನ ಮಾಡಿದ್ರು, ಇವಾಗ ಹೇಳಿ ನಿಮ್ಮಲ್ಲಿ ಯಾರ ರಕ್ತ ಹರಿಯುತ್ತಿದೆ?' ಎಂದು ವಾಗ್ಬಾಣ ಬಿಟ್ಟರು.
ಸಿದ್ದರಾಮಯ್ಯ ಅವರ ಬಾಲಂಗೋಚಿ ಎಂದು ಕರೆದಿದ್ದಕ್ಕೆ ಉತ್ತರಿಸಿದ ಪಾಟೀಲ್ 'ಸಿದ್ದರಾಮಯ್ಯ ನನ್ನ ಆತ್ಮೀಯ ಗೆಳೆಯರು, ನಾನು ಸಿಎಂ ಸೇರಿದಂತೆ ಯಾರ ಬಾಲಂಗೋಚಿಯೂ ಅಲ್ಲ' ಎಂದರು
ಯಡಿಯೂರಪ್ಪ ಅವರನ್ನು ಮೋಸಗಾರ ಎಂದು ಕರೆದ ಬಿ.ಆರ್.ಪಾಟೀಲ್ 'ಬಿಎಸ್‌ವೈ ಅವರನ್ನು ನಂಬಿ ಹಲವರು ಕೆಜೆಪಿ ಸೇರಿದ್ದರು ,ಆದರೆ ಅವರಿಗೆಲ್ಲ ಕೈಕೊಟ್ಟು ಯಡಿಯೂರಪ್ಪ ಮಾತ್ರ ಬಿಜೆಪಿ ಸೇರಿದ್ರು, ಇವಾಗ ಹೇಳಿ ಯಾರು ಮೋಸಗಾರ?' ಎಂದು ಅವರು ಪ್ರಶ್ನೆ ಮಾಡಿದರು.












Click it and Unblock the Notifications