ಸಚಿನ್ ಪೈಲಟ್ ಎಚ್ಚರಿಕೆಗೆ ಜಗ್ಗಿದ ಹೈಕಮಾಂಡ್: ಸಿಎಂ ಸ್ಥಾನದಿಂದ ಗೆಹ್ಲೋಟ್ ಔಟ್?
ಜೈಪುರ/ನವದೆಹಲಿ, ಏಪ್ರಿಲ್ 29: ಕಾಂಗ್ರೆಸ್ ಸರಕಾರವಿರುವ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯದ ಪ್ರಭಾವೀ ಮುಖಂಡ ಸಚಿನ್ ಪೈಲಟ್ ನಡುವಿನ ಭಿನ್ನಮತ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಇದನ್ನು ಪರಿಹರಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ.
ಕಳೆದ ಹದಿನೈದು ದಿನಗಳಲ್ಲಿ ಮೂರು ಬಾರಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ವಾಧ್ರಾ ಅವರನ್ನು ಭೇಟಿಯಾಗಿರುವ ಸಚಿನ್ ಪೈಲಟ್, ಮುಖ್ಯಮಂತ್ರಿ ಸ್ಥಾನ ತನಗೇ ನೀಡಲೇಬೇಕು ಇಲ್ಲದಿದ್ದರೆ ಮುಂದಾಗುವ ಹಿನ್ನಡೆಗೆ ನನ್ನನ್ನು ದೂಷಿಸಬೇಡಿ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆಂದು ಹೇಳಲಾಗುತ್ತಿದೆ.
ರಾಜಸ್ಥಾನದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದ ಸಚಿನ್ ಪೈಲಟ್, ಈ ಹಿಂದೆ ಹೈಕಮಾಂಡ್ ನೀಡಿದ್ದ ಭರವಸೆಗಾಗಿ ಸುಮ್ಮನಿದ್ದರು. ಆದರೆ, ತಮ್ಮ ಬೇಡಿಕೆಗಳಿಗೆ ಹೈಕಮಾಂಡ್ ಸರಿಯಾಗಿ ಸ್ಪಂದಿಸದೇ ಇದ್ದಿದ್ದರಿಂದ, ಈಗ ತಮ್ಮ ಹಠವನ್ನು ತೀವ್ರಗೊಳಿಸಿದ್ದಾರೆ.
ಹೀಗಾಗಿ, ಕಾಂಗ್ರೆಸ್ ಹೈಕಮಾಂಡ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆಯಲ್ಲಿದೆ. ಮೇ ಎರಡನೇ ವಾರದಲ್ಲಿ ಉದಯಪುರದಲ್ಲಿ ನಡೆಯುವ ಪಕ್ಷದ ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ನಿರ್ಧರಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಮಧ್ಯಪ್ರದೇಶದ ವರ್ಚಸ್ವೀ ನಾಯಕ ಕಮಲ್ ನಾಥ್ ಹೊಂದಿದ್ದ ಎರಡು ಹುದ್ದೆ
ಕಳೆದ ಮೂರು ದಿನಗಳಲ್ಲಿ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಒಂದು, ಮಧ್ಯಪ್ರದೇಶದ ವರ್ಚಸ್ವೀ ನಾಯಕ ಕಮಲ್ ನಾಥ್ ಹೊಂದಿದ್ದ ಎರಡು ಹುದ್ದೆಗಳಲ್ಲಿ ಒಂದರಿಂದ ರಾಜೀನಾಮೆಯನ್ನು ಸೋನಿಯಾ ಗಾಂಧಿ ಪಡೆದುಕೊಂಡಿದ್ದಾರೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿ ಅವರು ಮುಂದುವರಿಯಲಿದ್ದಾರೆ. ಇದೇ ರೀತಿಯ ಕಠಿಣ ನಿರ್ಧಾರವನ್ನು ರಾಜಸ್ಥಾನದಲ್ಲೂ ತೆಗೆದುಕೊಳ್ಳಬೇಕಾದ ಅನಿರ್ವಾರ್ಯತೆಯಲ್ಲಿ ಸೋನಿಯಾ ಗಾಂಧಿ ಇದ್ದಾರೆ.

ಸತತವಾಗಿ ಸಚಿನ್ ಪೈಲಟ್ ಅವರು ಸೋನಿಯಾ ಗಾಂಧಿಯವರನ್ನು ಭೇಟಿಯಾಗುತ್ತಿದ್ದಾರೆ
ಸತತವಾಗಿ ಸಚಿನ್ ಪೈಲಟ್ ಅವರು ಸೋನಿಯಾ ಗಾಂಧಿಯವರನ್ನು ಭೇಟಿಯಾಗುತ್ತಿರುವುದು, ಮುಂದಿನ ದಿನಗಳಲ್ಲಿ ರಾಜಸ್ಥಾನದ ಕಾಂಗ್ರೆಸ್ ಘಟಕದಲ್ಲಿ ಮಹತ್ವದ ಬದಲಾವಣೆಯ ಮುನ್ಸೂಚನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಇಲ್ಲದಿದ್ದರೆ ಪಂಜಾಬ್ ನಲ್ಲಾದ ಪರಿಸ್ಥಿತಿಯೇ ಎದುರಾಗಲಿದೆ ಎಂದು ಸಚಿನ್ ಪೈಲಟ್, ಸೋನಿಯಾ ಜೊತೆಗಿನ ಮಾತುಕತೆಯ ವೇಳೆ ಹೇಳಿದ್ದಾರೆಂದು ವರದಿಯಾಗಿದೆ.

ಚರಣಜಿತ್ ಸಿಂಗ್ ಚನ್ನಿಗೆ ಕೊನೆಯ ಕ್ಷಣದಲ್ಲಿ ಸಿಎಂ ಸ್ಥಾನ ನೀಡಲಾಯಿತು
ಚುನಾವಣೆಗೆ ಮುನ್ನ ಚರಣಜಿತ್ ಸಿಂಗ್ ಚನ್ನಿಗೆ ಕೊನೆಯ ಕ್ಷಣದಲ್ಲಿ ಸಿಎಂ ಸ್ಥಾನ ನೀಡಲಾಯಿತು. ಇದರಿಂದ ಚುನಾವಣಾ ತಂತ್ರಗಾರಿಕೆ ಹಣೆಯಲು ಸಾಧ್ಯವಾಗಿಲ್ಲ. ರಾಜಸ್ಥಾನದಲ್ಲಿ ಇದೇ ರೀತಿಯ ಗೊಂದಲವಾದರೆ ಚುನಾವಣೆ ಎದುರಿಸಲು ಕಷ್ಟವಾಗುತ್ತದೆ. ನನ್ನ ನೇತೃತ್ವದಲ್ಲೇ ಮುಂದಿನ ವರ್ಷಾಂತ್ಯದಲ್ಲಿ ಚುನಾವಣೆಗೆ ಸಜ್ಜಾಗಲು, ವಿಳಂಬ ಮಾಡದೇ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎನ್ನುವ ಒತ್ತಡವನ್ನು ಸಚಿನ್ ಪೈಲಟ್ ಹಾಕಿದ್ದಾರೆಂದು ಹೇಳಲಾಗುತ್ತಿದೆ.

ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ಸಿನ ಚಿಂತನಾ ಶಿಬಿರ
ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ಸಿನ ಚಿಂತನಾ ಶಿಬಿರ ಮೇ ಹದಿಮೂರರಿಂದ ಹದಿನೈದರ ವರೆಗೆ ಆಯೋಜಿಸಲಾಗಿದೆ. ಈ ವೇಳೆ, ಸೋನಿಯಾ ಗಾಂಧಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲ್ಲಿದ್ದಾರೆ. ಪಕ್ಷದ ಯುವ ಮುಖ ಸಚಿನ್ ಪೈಲಟಿಗೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನ ನೀಡಿ, ಅಶೋಕ್ ಗೆಹ್ಲೋಟ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯುವ ನಿರ್ಧಾರಕ್ಕೆ ಹೈಕಮಾಂಡ್ ಬರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.












Click it and Unblock the Notifications