ನಾಪತ್ತೆಯಾಗಿದ್ದ ನವ ವಧು ಹರಿಯಾಣದಲ್ಲಿ ಸಲಿಂಗಿ ಸಂಗಾತಿಯೊಂದಿಗೆ ಪತ್ತೆ
ಜೈಪುರ್ (ರಾಜಸ್ತಾನ), ಜೂನ್ 25: ಮದುವೆಯ ನಂತರ ರಾಜಸ್ತಾನದಿಂದ 23 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯನ್ನು ಆಕೆಯ ಸಲಿಂಗಿ ಸಂಗಾತಿಯೊಂದಿಗೆ ಹರಿಯಾಣದಲ್ಲಿ ಪತ್ತೆ ಹಚ್ಚಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಉತ್ತರಪ್ರದೇಶದ ಷಹಜಹಾನ್ ಪುರ್ ನಲಿ ವಾಸವಿರುವ ಆಕೆಯ ಪತಿ ದೂರು ದಾಖಲಿಸಿದ್ದರು.
ಹರಿಯಾಣದ ಮಾನೆಸರ್ ನಲ್ಲಿ ಸೋಮವಾರ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿದ್ದಾರೆ. ರಾಷ್ಟ್ರೀಯ ಚಾಂಪಿಯನ್ ಕೂಡ ಆದ ತನ್ನ ಮಹಿಳಾ ಸಲಿಂಗಿ ಸಂಗಾತಿ ಜತೆಗೆ ವಾಸ ಮಾಡುವ ಉದ್ದೇಶದಿಂದ ಜೂನ್ ಒಂದನೇ ತಾರೀಕಿನಂದು ಆಕೆ ಪತಿಯ ಮನೆಯನ್ನು ಬಿಟ್ಟು ಹೋಗಿದ್ದಳು. ಕಳೆದ ನಾಲ್ಕು ವರ್ಷದಿಂದ ಈ ಇಬ್ಬರೂ ಮಹಿಳೆಯರ ಮಧ್ಯೆ ಸಂಬಂಧ ಇತ್ತು.
ಪೊಲೀಸರು ಇಬ್ಬರೂ ಮಹಿಳೆಯರನ್ನು ವಶಕ್ಕೆ ಪಡೆದು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದಾರೆ. ಆಗ ತಮ್ಮ ಪರ ವಾದ ಮಂಡಿಸಿದ್ದ ಅವರು, ನಾವಿಬ್ಬರು ವಯಸ್ಕರರು. ನಮ್ಮ್ ಆಯ್ಕೆಯ ಸಂಗಾತಿ ಜತೆಗೆ ಬದುಕುವ ಹಕ್ಕು ನಮಗಿದೆ ಎಂದಿದ್ದಾರೆ. ಇನ್ನು ನಾಪತ್ತೆಯಾಗಿದ್ದ ಮಹಿಳೆಯು, ನನಗೆ ಬಲವಂತದಿಂದ ಮದುವೆ ಮಾಡಲಾಗಿದೆ ಎಂದು ಹೇಳಿದ್ದಾಳೆ.

ಈ ಜೋಡಿಯನ್ನು ಸ್ವತಂತ್ರವಾಗಿ ಬಿಡಲಾಗಿದ್ದು, ಅವರಿಗೆ ಹೇಗೆ ಹಾಗೂ ಎಲ್ಲಿ ಬೇಕೋ ಬದುಕಲು ಅವಕಾಶ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications