ಜರ್ಮನಿಯ ಬೆಟ್ಟಗಳಲ್ಲಿ ಮೊಳಗಿದ ಸಂಸ್ಕೃತ: ಭಾಷೆಗೆ ಮರುಜೀವ ನೀಡಿದ ವಿದೇಶಿಗರು
ಸಂಸ್ಕೃತ ಎಂದರೆ ಅದು ಕೇವಲ ಪೂಜೆ, ಪುನಸ್ಕಾರಗಳು ಹಾಗೂ ಮಂತ್ರಗಳಿಗೆ ಮಾತ್ರ ಸೀಮಿತವಾದ ಭಾಷೆ, ಅಥವಾ ಕೇವಲ ತರಗತಿಯ ನಾಲ್ಕು ಗೋಡೆಗಳ ನಡುವೆ ವ್ಯಾಕರಣದ ನಿಯಮಗಳನ್ನ ಕಲಿಯುವ ವಿಷಯ ಎಂಬ ಭಾವನೆ ಬಹುತೇಕರಲ್ಲಿದೆ. ಆದರೆ, ಈ ಪ್ರಾಚೀನ ಭಾಷೆಯನ್ನ ತರಗತಿಯಿಂದ ಹೊರತಂದು ದೈನಂದಿನ ಬದುಕಿನ ಭಾಗವಾಗಿಸುವ ಅಪರೂಪದ ಹಾಗೂ ಸುಂದರವಾದ ಪ್ರಯತ್ನವೊಂದು ಜರ್ಮನಿಯಲ್ಲಿ ನಡೆದಿದೆ.
ಹೌದು, ಸಂಸ್ಕೃತ ದಿನಾಚರಣೆಯ ಈ ಸಂದರ್ಭದಲ್ಲಿ, ವಿದೇಶಿ ವಿದ್ಯಾರ್ಥಿಗಳು ಸಂಸ್ಕೃತವನ್ನ ಜೀವಂತವಾಗಿರಿಸಲು ಮಾಡಿದ ಈ ಅರ್ಥಪೂರ್ಣ ಪ್ರಯತ್ನದ ಕಥೆ ಎಲ್ಲರಿಗೂ ಸ್ಫೂರ್ತಿ.

ಯಾವುದೇ ಒಂದು ಭಾಷೆ ಉಳಿಯಬೇಕಾದರೆ ಅದು ಕೇವಲ ಪುಸ್ತಕಗಳಲ್ಲಿ ಭದ್ರವಾಗಿದ್ದರೆ ಸಾಲದು, ಬದಲಾಗಿ ಜನರ ನಾಲಿಗೆಯ ಮೇಲೆ ನಲಿಯಬೇಕು. ಇದೇ ಉದ್ದೇಶವನ್ನು ಹೊತ್ತ ಅಂತಾರಾಷ್ಟ್ರೀಯ ಸಂಸ್ಕೃತ ವಿದ್ಯಾರ್ಥಿಗಳ ಗುಂಪೊಂದು ಇತ್ತೀಚೆಗೆ ಜರ್ಮನಿಯ ಎಲ್ಬ್‌ಸ್ಯಾಂಡ್‌ಸ್ಟೈನ್‌ಗೆಬಿರ್ಜ್ (Elbsandsteingebirge) ಪರ್ವತ ಶ್ರೇಣಿಯಲ್ಲಿ ಟ್ರೆಕ್ಕಿಂಗ್‌ಗೆ ತೆರಳಿತ್ತು.
ಇದೊಂದು ಅಧಿಕೃತ ಬೇಸಿಗೆ ಶಿಬಿರದ ಚಟುವಟಿಕೆಯಾಗಿರಲಿಲ್ಲ ಅಥವಾ ಯಾವುದೇ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೂ ಆಗಿರಲಿಲ್ಲ. ಒಂದು ದಿನ ಪ್ರಕೃತಿಯ ಮಡಿಲಲ್ಲಿ ಕಳೆಯುವ ಉದ್ದೇಶದಿಂದ ಹೊರಟ ಈ ಟ್ರೆಕ್ಕಿಂಗ್, ನೋಡನೋಡುತ್ತಿದ್ದಂತೆಯೇ ಒಂದು ಭಾಷಾ ಸಂಭ್ರಮವಾಗಿ ಬದಲಾಯಿತು.
ಜರ್ಮನಿಯ ಬೆಟ್ಟಗಳಲ್ಲಿ ಸಂಸ್ಕೃತ ಸಂಭಾಷಣೆ
ಟ್ರೆಕ್ಕಿಂಗ್ ಆರಂಭವಾಗುತ್ತಿದ್ದಂತೆ, ವಿದ್ಯಾರ್ಥಿಗಳು ತಮಗೆ ಅರಿವಿಲ್ಲದಂತೆಯೇ ಸಂಸ್ಕೃತದಲ್ಲಿ ಮಾತನಾಡಲು ಶುರುಮಾಡಿದರು. ತಾವು ನೋಡುವ ಪ್ರಕೃತಿಯ ಸೌಂದರ್ಯ, ಬೆಟ್ಟ-ಗುಡ್ಡಗಳು, ಮರ-ಗಿಡಗಳನ್ನ ಅವರು ಸಂಸ್ಕೃತದಲ್ಲಿಯೇ ವರ್ಣಿಸತೊಡಗಿದರು.
ಪರಸ್ಪರ ಪ್ರಶ್ನೆಗಳನ್ನು ಕೇಳುವುದು, ತಮಾಷೆ ಮಾಡುವುದು, ಕಾಲೆಳೆಯುವುದು ಎಲ್ಲವೂ ಆ ಪ್ರಾಚೀನ ಭಾಷೆಯಲ್ಲೇ ನಡೆಯಿತು. ಆಶ್ಚರ್ಯವೆಂದರೆ, ಯುರೋಪಿನಲ್ಲಿ ಭಾರತದ ಪ್ರಾಚೀನ ಭಾಷೆಯೊಂದು ಅತ್ಯಂತ ಸಹಜವಾಗಿ ಮತ್ತು ಸುಲಲಿತವಾಗಿ ಎಲ್ಲರ ನಾಲಿಗೆಯಲ್ಲಿಯೂ ಹರಿದಾಡುತ್ತಿತ್ತು.
ಮಾತನಾಡುವ ಭರದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಪದಗಳು ಸಿಗದೆ ಪರದಾಡಿದ ಪ್ರಸಂಗಗಳೂ ನಡೆದಿತ್ತು. ಹಲವಾರು ವ್ಯಾಕರಣದ ತಪ್ಪುಗಳಾದವು. ಆದರೆ ಅದ್ಯಾವುದೂ ಅವರ ಉತ್ಸಾಹವನ್ನ ಕುಗ್ಗಿಸಲಿಲ್ಲ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಜೋರಾಗಿ ನಗುತ್ತಾ ತಮ್ಮ ಸಂಭಾಷಣೆಯನ್ನು ಮುಂದುವರಿಸಿದರು. ಭಾಷೆಯನ್ನ ಕಲಿಯುವಾಗ ತಪ್ಪುಗಳು ಆಗುವುದು ಸಹಜ, ಆ ತಪ್ಪುಗಳೇ ಕಲಿಕೆಯ ಮೆಟ್ಟಿಲುಗಳು ಎಂಬುದನ್ನು ಅವರು ಈ ಮೂಲಕ ತೋರಿಸಿಕೊಟ್ಟರು. ಯಾವುದೇ ಭಯ ಅಥವಾ ಮುಜುಗರವಿಲ್ಲದೆ ಅವರು ಸಂಸ್ಕೃತವನ್ನ ಆಸ್ವಾದಿಸಿದರು.
ಭಾಷೆಯನ್ನು ಜೀವಂತವಾಗಿಡುವ ನಿಜವಾದ ಪ್ರಯತ್ನ
ಯಾವುದೇ ಒಂದು ಭಾಷೆ ಜೀವಂತವಾಗಿರಬೇಕಾದರೆ, ಅದರ ಪದಗಳನ್ನ ಕೇವಲ ಸಂರಕ್ಷಿಸಿದರೆ ಸಾಲದು. ಬದಲಿಗೆ ಅದನ್ನ ನಿರಂತರವಾಗಿ ಬಳಸಬೇಕು, ಮಾತನಾಡಬೇಕು, ಇತರರೊಂದಿಗೆ ಹಂಚಿಕೊಳ್ಳಬೇಕು ಮತ್ತು ಅದನ್ನು ಬಳಸಲು ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳಬೇಕು. ಈ ವಿದೇಶಿ ವಿದ್ಯಾರ್ಥಿಗಳು ಮಾಡಿದ್ದು ಇದನ್ನೇ. ಸಂಸ್ಕೃತವನ್ನು ಕೇವಲ ಒಂದು ಪಠ್ಯವಾಗಿ ನೋಡದೆ, ಅದನ್ನು ತಮ್ಮ ದೈನಂದಿನ ಬದುಕಿನ ಭಾಗವಾಗಿ ಸ್ವೀಕರಿಸಿದರು.
ವಿಶ್ವ ಸಂಸ್ಕೃತ ದಿನದ ಈ ಶುಭ ಸಂದರ್ಭದಲ್ಲಿ, ಶತಮಾನಗಳನ್ನು ಮೀರಿ ಬೆಳೆದು ಬಂದಿರುವ ಈ ಭಾಷೆಗೆ ಗೌರವ ಸಲ್ಲಿಸೋಣ. ಭಿನ್ನ-ವಿಭಿನ್ನ ದೇಶ, ಸಂಸ್ಕೃತಿಯ ಜನರನ್ನು ಒಂದೇ ವೇದಿಕೆಯಲ್ಲಿ ಕಲೆಹಾಕುವ, ಹೊಸ ಸಂಭಾಷಣೆಗಳಿಗೆ ಮುನ್ನುಡಿ ಬರೆಯುವ ಈ ಸುಂದರ ಭಾಷೆಯ ಪಯಣ ಹೀಗೆಯೇ ಮುಂದುವರಿಯಲಿ.


Click it and Unblock the Notifications
