ಕೊರೊನ ಉಪತಳಿ BF 7: ವಿಶ್ವದಲ್ಲೇ ಮೊದಲ ಭಾರಿಗೆ ಚೀನಾದಲ್ಲಿ 1 ದಿನಕ್ಕೆ 37ಮಿಲಿಯನ್ ಪಾಸಿಟಿವ್ ಕೇಸ್!
ಬೆಂಗಳೂರು, ಡಿಸೆಂಬರ್ 23: ಚೀನಾ ದೇಶದಲ್ಲಿ ಒಂದೇ ದಿನದಲ್ಲಿ 37 ಮಿಲಿಯನ್ ಜನರಲ್ಲಿ ಕೊರೊನಾ ಸೋಂಕು ಕಂಡು ಬರುತ್ತಿದೆ. ವಿಶ್ವದಲ್ಲೇ ಒಂದು ದಿನದಲ್ಲಿ ಏಕಾಎಕಿ ಕೋವಿಡ್ ಏರಿಕೆ ಕಂಡ ದೇಶಗಳ ಸಾಲಿನಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ ಎಂದು ಉನ್ನತ ಆರೋಗ್ಯ ಪ್ರಾಧಿಕಾರ ಅಂದಾಜಿಸಿದೆ.
ಬುಧವಾರ ನಡೆದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆ ಬಳಿಕ ದೊರೆತ ಮಾಹಿತಿ ಪ್ರಕಾರ, ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ 248 ಮಿಲಿಯನ್ ಜನರು ಅಂದರೆ ಚೀನಾ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇ.18% ಜನರು ವೈರಸ್‌ಗೆ ತುತ್ತಾಗುತ್ತಿದ್ದಾರೆ ಎನ್ನಲಾಗಿದೆ. ಇಷ್ಟು ಪ್ರಮಾಣದಲ್ಲಿ ಜನರು ಸೋಂಕಿಗೆ ಒಳಗಾಗುತ್ತಿರುವುದು ವಿಶ್ವದಲ್ಲೇ ಇದೇ ಮೊದಲು. ಕಳೆದ ಜನವರಿ 2022 ರಲ್ಲಿ ಸುಮಾರು 4 ಮಿಲಿಯನ್ ಜನರು ನಿತ್ಯ ಸೋಂಕಿಗೆ ಒಳಗಾಗಿದ್ದು ದಾಖಲೆ ಆಗಿತ್ತು.
ಚೀನಾದಲ್ಲಿ ಕೋವಿಡ್ ಸೋಂಕನ್ನು ತ್ವರಿತವಾಗಿ ಪತ್ತೆಹಚ್ಚಲು ಈಗ ರ್‍ಯಾಪಿಡ್ ಆಂಟಿಜನ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಆದರೆ ಈ ಪರೀಕ್ಷೆಯಿಂದ ಪಾಸಿಟಿವಿಟಿ ಬಗ್ಗೆ ನಿಖರವಾಗಿ ತಿಳಿಯಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಅಲ್ಲದೇ ಚೀನಾ ಸರ್ಕಾರ ರೋಗಲಕ್ಷಣವಿಲ್ಲದ ಪ್ರಕರಣಗಳ ಕುರಿತು ದೈನಂದಿನ ಮಾಹಿತಿ ನೀಡುವುದನ್ನು ನಿಲ್ಲಿಸಿದೆ.

ಬೀಜಿಂಗ್‌ನ ಅರ್ಧದಷ್ಟು ಜನ ಸೋಂಕಿತರು
ಚೀನಾದ ಬೀಜಿಂಗ್ ನಗರದಲ್ಲಿ ಕೊರೊನಾ ಭೀತಿ ಕಡಿಮೆಯಾಗುತ್ತಿದ್ದಂತೆ ಎಲ್ಲ ನಿರ್ಬಂಧ ತೆಗೆದು ಹಾಕಿದ ಪರಿಣಾಮವಾಗಿ ಜನರಲ್ಲಿ ಹೆಚ್ಚು ಸಾಂಕ್ರಾಮಿಕ ಓಮಿಕ್ರಾನ್ ರೂಪಾಂತರಿ ಕಂಡು ಬರುತ್ತಿದೆ. ಚೀನಾದ ನೈಋತ್ಯ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿರುವ ಸಿಚುವಾನ್ ಪ್ರಾಂತ್ಯದ ಅರ್ಧಕ್ಕಿಂತ ಹೆಚ್ಚು ನಿವಾಸಿಗಳು ಸೋಂಕಿತರಾಗಿದ್ದಾರೆ. ಅಲ್ಲಿ ಕೊರೊನಾ ಪಿಸಿಆರ್ ಟೆಸ್ಟಿಂಗ್ ಬೂತ್‌ಗಳನ್ನು ಮುಚ್ಚಲಾಗಿತ್ತು. ಈ ಕಾರಣದಿಂದಲೇ ಸೋಂಕು ವ್ಯಾಪಿಸಿದೆಯೇ ಎಂದು ಬ್ಲೂಮ್‌ಬರ್ಗ್ ಮಾಧ್ಯಮ ಕೇಳಿದ ಪ್ರಶ್ನೆಗಳಿಗೆ ರಾಷ್ಟ್ರೀಯ ಆರೋಗ್ಯ ಪರಿಷತ್ತು (ಎನ್‌ಎಚ್‌ಸಿ) ಉತ್ತರಿಸಿಲ್ಲ ಎಂದು ತಿಳಿದು ಬಂದಿದೆ.

ಶೆನ್‌ಜೆನ್, ಶಾಂಘೈ, ಚಾಂಗ್‌ಕಿಂಗ್ ಸೋಂಕು ಏರಿಕೆ
ದತ್ತಾಂಶ ಸಲಹಾ ಸಂಸ್ಥೆ ಮೆಟ್ರೋಡೇಟಾಟೆಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಚೆನ್ ಕ್ವಿನ್ ಅವರು, ತಾವು ನಡೆಸಿದ ಅಧ್ಯಯನದ ಆಧಾರದಲ್ಲಿ ಚೀನಾದಲ್ಲಿ ಡಿಸೆಂಬರ್ ಮಧ್ಯ ಅಥವಾ ಜನವರಿ ಅಂತ್ಯದ ವೇಳೆಗೆ ಕೊರೊನಾ ಸೋಂಕು ಉತ್ತುಂಗದಲ್ಲಿರಲಿದೆ ಎಂದು ಈ ಹಿಂದೆಯೆ ಹೇಳಿದ್ದರು. ಅವರ ಮಾತಿನಿಂತೆ ಸದ್ಯ ಚೀನಾದಲ್ಲಿ ನಿತ್ಯ ಹತ್ತಾರು ಮಿಲಿಯನ್ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ಪೈಕಿ ಶೆನ್‌ಜೆನ್, ಶಾಂಘೈ ಮತ್ತು ಚಾಂಗ್‌ಕಿಂಗ್ ನಗರಗಳಲ್ಲಿ ನಿತ್ಯ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದು ತಿಳಿದು ಬಂದಿದೆ.

ಸಾವುಗಳ ಸಂಖ್ಯೆ ಪ್ರಕಟಿಸದ ಚೀನಾ
ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬರುತ್ತಿರುವ ಚೀನಾದಲ್ಲಿ ಸಾವಿನ ಸಂಖ್ಯೆ ಮುಚ್ಚಿಡಲಾಗಿದೆ. ಈ ಬಗ್ಗೆ ಅಂಕಿ ಅಂಶಗಳು ಬಹಿರಂಗವಾಗದೇ ಗುಪ್ತವಾಗಿವೆ. ಸಭೆಯಲ್ಲಿ ಈ ಬಗ್ಗೆ ಒಪ್ಪಿಕೊಂಡ ರಾಷ್ಟ್ರೀಯ ಆರೋಗ್ಯ ಪರಿಷತ್ತಿನ (NHC) ಮಖ್ಯಸ್ಥ ಮಾ ಕ್ಸಿಯಾವೊಯ್ ಅವರು, ವೈರಸ್ ವೇಗವಾಗಿ ಹರಡುವುದರಿಂದ ಸಾವುಗಳು ಸಂಭವಿಸುವ ಪ್ರಮಾಣವು ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಕೋವಿಡ್ ನಿಂದ ಮೃತಪಟ್ಟವರ ಮಾಹಿತಿಗಳನ್ನು ಅಂಕಿ ಅಂಶಗಳಲ್ಲಿ ಸೇರಿಸಬೇಕು ಎಂದು ತಿಳಿಸಿದ್ದಾರೆ.

ಡಿ.20ರಂದು ವಿಶ್ವದಲ್ಲೇ ಅತ್ಯಧಿಕ ಪ್ರಕರಣ ಚೀನಾದಲ್ಲಿ ಪತ್ತೆ
ಡಿಸೆಂಬರ್ 20ರಂದು ಅಂದಾಜಿಸಿದ್ದ ಬ್ಲೂಮ್‌ಬರ್ಗ್ ಮಾಧ್ಯಮ ಮಾಹಿತಿಯಂತೆ ನಿತ್ಯ 37 ಮಿಲಿಯನ್ ಪ್ರಕರಣ ಪತ್ತೆಯಾಗುತ್ತಿವೆ. ಆದರೆ ಸರ್ಕಾರ 3,049 ಸೋಂಕುಗಳ ದೃಢ ಎಂದು ಅಧಿಕೃತ ಲೆಕ್ಕಾಚಾರ ತೋರಿಸುವ ಮೂಲಕ ವಂಚಿಸುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಆರಂಭಿಕ ಹಂತದಲ್ಲಿ ಕಂಡು ಬಂದಿದ್ದ ಓಮಿಕ್ರಾನ್ ಪ್ರಕರಣಗಳ ಬಳಿಕ ಚೀನಾದಲ್ಲಿ ಡಿ.20ಕ್ಕೆ ಕಂಡು ಬಂದ ಪ್ರಕರಣಗಳೇ ವಿಶ್ವದಲ್ಲೇ ಒಂದು ದಿನದಲ್ಲಿ ಕಂಡು ಬಂದ ಅತ್ಯಧಿಕ ಪ್ರಕರಣಗಳಾಗಿವೆ. ಈ ಬಗ್ಗೆ ಸತ್ಯ ಬಾಯಿ ಬಿಡದೇ ಚೀನಾ ಸರ್ಕಾರ ಕೊರೊನಾ ನಿಭಾಯಿಸುವಲ್ಲಿ ಒದ್ದಾಡುತ್ತಿದೆ.












Click it and Unblock the Notifications