ಮತ್ತೆ ಶೀತಗಾಳಿಯ ಹೊಡೆತಕ್ಕೆ ಸಿಲುಕಿದ ಅಮೆರಿಕ
ಅಸಹನೀಯ ಶೀತಗಾಳಿ, ಹಿಮವರ್ಷದಿಂದ ತತ್ತರಿಸಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದ ಅಮೆರಿಕಕ್ಕೆ ಮತ್ತೆ ವಿಪರೀತ ಚಳಿಯ ಹೊಡೆತಕ್ಕೆ ಸಿಲುಕುವ ಆತಂಕ ಎದುರಾಗಿದೆ. ಅಮೆರಿಕಾದ ದಕ್ಷಿಣ ಭಾಗದಲ್ಲಿ ಭೀಕರ ಚಳಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಜಾರ್ಜಿಯಾ, ಲೂಸಿಯಾನಾ, ಮಿಸಿಸಿಪ್ಪಿ, ಉತ್ತರ ಮತ್ತು ದಕ್ಷಿಣ ಕೆರೋಲಿನಾ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಹಲವಾರು ಶಾಲೆಗಳನ್ನು ಮುಚ್ಚಲಾಗಿದೆ. ವಿಪರೀತ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಬೇಕೆಂದು ಹವಾಮಾನ ತಜ್ಞರು ಸೂಚಿಸಿದ್ದಾರೆ. 3 ಸಾವಿರಕ್ಕೂ ಹೆಚ್ಚು ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ವರ್ಜೀನಿಯಾದ ಕೆಲ ಭಾಗಗಳಲ್ಲಿ 1 ಅಡಿಗಿಂತ ಹೆಚ್ಚಿನ ಹಿಮ ಸುರಿಯಲಿದೆ ಮತ್ತು ಉತ್ತರ ಕೆರೋಲಿನಾದಲ್ಲಿಯೂ ಭಾರೀ ಹಿಮವರ್ಷ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಟೆಕ್ಸಾಸ್ ನಿಂದ ವರ್ಜೀನಿಯಾ ನಡುವಿನ ರಸ್ತೆಯಲ್ಲಿ ಸಂಚಾರ ಮಾಡಬಾರದೆಂದು ವಾಹನ ಚಾಲಕರಿಗೆ ಎಚ್ಚರಿಗೆ ನೀಡಲಾಗಿದೆ. ಅಲ್ಲದೆ, ರಸ್ತೆಗಳಲ್ಲಿ, ಸೇತುವೆಗಳ ಮೇಲೆ ಹಿಮ ಬಿದ್ದಿರುವುದರಿಂದ ವೇಗವನ್ನು ತಗ್ಗಿಸಬೇಕೆಂದು ಸೂಚನೆಗಳನ್ನು ನೀಡಲಾಗುತ್ತಿದೆ. [ಅಂಟಾರ್ಟಿಕಾಗಿಂದ ಅಮೆರಿಕಾದಲ್ಲಿ ಹೆಚ್ಚು ಚಳಿ]

ಕೇವಲ ಸುಂಟರಗಾಳಿಗಳಿಗೆ ಮಾತ್ರ ಹೆಸರಾಗಿದ್ದ ಈ ಪ್ರಾಂತ್ಯಗಳಲ್ಲಿ ಹಿಮಪಾತ ಅಪರೂಪ. ಅಂಥದರಲ್ಲಿ ಭಾರೀ ಹಿಮಪಾತ ಆಗುತ್ತಿರುವ ಮುನ್ಸೂಚನೆ ನೀಡಲಾಗಿದ್ದು ಪರಿಸ್ಥಿತಿ ಭೀಕರವಾಗಿರಲಿದೆ ಎಂದು ಮಿಸಿಸಿಪ್ಪಿ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ 5 ಕೋಟಿಗೂ ಹೆಚ್ಚು ಜನರ ಜೀವನ ಅಸ್ತವ್ಯಸ್ತವಾಗಲಿದೆ ಎಂದು ಅಂದಾಜಿಸಲಾಗಿದೆ.
ಅಟ್ಲಾಂಟಾದಲ್ಲಿ ಈಗಾಗಲೆ ಭಾರೀ ಹಿಮ ಸುರಿಯಲು ಆರಂಭವಾಗಿದ್ದು, ವಾಹನ ಸಂಚಾರ ತೀರ ವಿರಳವಾಗಿದೆ. ಈ ಪ್ರದೇಶದಲ್ಲಿರುವ ಎಲ್ಲರಿಗೂ ತುರ್ತು ಪರಿಸ್ಥಿತಿ ಎದುರಿಸಲು ಯೋಜನೆ ರೂಪಿಸಿರಬೇಕು ಎಂದು ತಿಳಿಸಲಾಗಿದೆ. ಅಲಬಾಮಾದಲ್ಲಿ ಕೆಲ ಶಾಲೆಗಳು ತೆರೆದಿದ್ದರೂ, ಭಾರೀ ಪ್ರಮಾಣದಲ್ಲಿ ಹಿಮ ಬೀಳಲು ಆರಂಭವಾಗಿದ್ದರಿಂದ ಮಕ್ಕಳನ್ನು ಬೇಗನೆ ಮನೆಗೆ ಕಳುಹಿಸಲಾಯಿತು.
ಮಿನ್ನೆಸೋಟಾದಲ್ಲಿ ತಾಪಮಾನ ಮೈನಸ್ 35ರಿಂದ 50 ಡಿಗ್ರಿವರೆಗೆ ಇಳಿದಿದೆ. ಬೆಚ್ಚಗಿರಲು ಗ್ಯಾಸ್ ಹೀಟರ್ ಗಳನ್ನು ಬಳಸಲಾಗುತ್ತಿದ್ದರೂ ಕೆನಡಾದಲ್ಲಿ ಗ್ಯಾಸ್ ಪೈಪ್ ಲೈನ್ ಸ್ಫೋಟವಾಗಿದ್ದರಿಂದ ಅನಿಲದ ಕೊರತೆ ಕಂಡುಬಂದಿದೆ. ಓಹಿಯೋ, ಇಲಿನಾಯ್, ಪೆನ್ಸಿಲ್ವೇನಿಯಾಗಳಲ್ಲಿಯೂ ಶೀತಗಾಳಿಯಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ.












Click it and Unblock the Notifications