Operation Sindoor: ಪಾಕ್ ಮೇಲಿನ ಕ್ಷಿಪಣಿ ದಾಳಿಗೆ 'ಆಪರೇಷನ್ ಸಿಂಧೂರ' ಹೆಸರಿಟ್ಟಿದ್ದೇಕೆ?
ಭಾರತವು ರಾತ್ರೋರಾತ್ರಿ ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಭಾರತೀಯ ಪಡೆಗಳು ಯಶಸ್ವಿಯಾಗಿ ಒಂಬತ್ತು ಕಡೆ ಕ್ಷಿಪಣಿ ದಾಳಿ ಮಾಡಿರುವುದಾಗಿ ತಿಳಿಸಿದೆ. ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಈ ದಾಳಿ ಮೂಲಕ ಸೇಡು ತೀರಿಸಿಕೊಂಡಿದೆ. ಈ ಕಾರ್ಯಾಚರಣೆಗೆ "ಆಪರೇಷನ್ ಸಿಂಧೂರ" ಎಂಬ ಹೆಸರಿಡಲಾಗಿದೆ. ಇದಕ್ಕೆ ಪ್ರಮುಖ ಕಾರಣವೂ ಇದೆ.
ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಭಾರತೀಯ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದಿದ್ದರು. ದಾಳಿ ವೇಳೆ ನೀನು ಹಿಂದೂನಾ? ಮುಸಲ್ಮಾನನಾ? ಎಂದು ಕೇಳಿ ಕೇಳಿ ಹಿಂದೂಗಳ ಮೇಲೆ ಮಾತ್ರವೇ ಗುಂಡು ಹಾರಿಸಿದ್ದರು ಎನ್ನಲಾಗಿತ್ತು. ಅಲ್ಲದೆ ಪ್ರವಾಸಿಗರ ಪೈಕಿ ಹಲವು ದಂಪತಿಗಳಿದ್ದರು. ಇದರಲ್ಲಿ ಪುರುಷರ ಮೇಲೆ ಹೆಚ್ಚಾಗಿ ಫೈರಿಂಗ್ ಮಾಡಿ ಅವರ ಪತ್ನಿಯರನ್ನು ಏನೂ ಮಾಡದೆ ಬಿಟ್ಟಿದ್ದರು.

ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿಯೊಂದು ಕೂಡ ಪೆಹಲ್ಗಾಮ್‌ಗೆ ತೆರಳಿತ್ತು. ಪತ್ನಿಯ ಮುಂದೆಯೇ ಪತಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪತಿಯ ಮೃತದೇಹದ ಮುಂದೆ ಕುಳಿತು ಪತ್ನಿ ಅಳುತ್ತಿದ್ದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮನಕಲಕುವಂತಿತ್ತು. ದಾಳಿಯಲ್ಲಿ ಪತಿಯರನ್ನು ಕೊಂದು ಪತ್ನಿಯರ ಸಿಂಧೂರ (ಕುಂಕುಮ) ಕಸಿದಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿಗೆ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಗಿದೆ.
ಭಾರತೀಯ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿದ ಒಂಬತ್ತು ಗುರಿಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ (ಪಿಒಕೆ). ಪಾಕಿಸ್ತಾನದ ಬಹಾವಲ್ಪುರ್, ಮುರಿಡ್ಕೆ ಮತ್ತು ಸಿಯಾಲ್ಕೋಟ್ ಪ್ರದೇಶಗಳಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಲು ವಿಶೇಷ ಯುದ್ಧಸಾಮಗ್ರಿಗಳನ್ನು ಬಳಸಲಾಗಿದೆ.
ಪಾಕಿಸ್ತಾನದ ನಿದ್ದೆಗೆಡಿಸಿದ ಭಾರತ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರಾಯೋಜಕತ್ವ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್ ನಾಯಕತ್ವವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಭಾರತೀಯ ಪಡೆಗಳು ಈ ಸ್ಥಳವನ್ನು ಆಯ್ಕೆ ಮಾಡಿದ್ದವು. ದಾಳಿಗಳಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮೂರು ಪಡೆಗಳ ನಿಖರವಾದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಬಳಸಲಾಯಿತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗಿನ ಭಯೋತ್ಪಾದಕ ಶಿಬಿರಗಳ ಮೇಲಿನ ದಾಳಿಗೆ ಗುಪ್ತಚರ ಸಂಸ್ಥೆಗಳು ನಿರ್ದೇಶನಗಳನ್ನು ಒದಗಿಸಿದವು. ಈ ಎಲ್ಲ ದಾಳಿಗಳನ್ನು ಭಾರತದ ನೆಲದಿಂದಲೇ ನಡೆಸಲಾಯಿತು.

ಭಾರತವು ಬುಧವಾರ ಮುಂಜಾನೆ ಅಮೆರಿಕ, ರಷ್ಯಾ, ಯುಕೆ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವಾರು ಪ್ರಮುಖ ದೇಶಗಳನ್ನು ಸಂಪರ್ಕಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ನಡೆಸಿದ ಮಿಲಿಟರಿ ದಾಳಿಯ ಬಗ್ಗೆ ವಿವರಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತಕ್ಕೆ ಪ್ರತ್ಯುತ್ತರ ಕೊಡ್ತೀವಿ: ಪಾಕ್ ಪ್ರಧಾನಿ
ಭಾರತದ ದಾಳಿ ಬಗ್ಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಟ್ವೀಟ್ ಮಾಡಿ ಖಂಡಿಸಿದ್ದಾರೆ. ಕುತಂತ್ರಿ ಶತ್ರು ಪಾಕಿಸ್ತಾನದ ಐದು ಸ್ಥಳಗಳ ಮೇಲೆ ಹೇಡಿತನದ ದಾಳಿ ನಡೆಸಿದೆ. ಭಾರತ ಹೇರಿದ ಈ ಯುದ್ಧ ಕೃತ್ಯಕ್ಕೆ ಬಲವಾಗಿ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಎಲ್ಲ ಹಕ್ಕಿದೆ. ಬಲವಂತದ ಪ್ರತಿಕ್ರಿಯೆ ನೀಡಲಾಗುತ್ತಿದೆ. ಇಡೀ ರಾಷ್ಟ್ರವು ಪಾಕಿಸ್ತಾನಿ ಸಶಸ್ತ್ರ ಪಡೆಗಳೊಂದಿಗೆ ನಿಂತಿದೆ. ಇಡೀ ಪಾಕಿಸ್ತಾನಿ ರಾಷ್ಟ್ರದ ನೈತಿಕತೆ ಮತ್ತು ಉತ್ಸಾಹ ಹೆಚ್ಚಾಗಿದೆ. ಪಾಕಿಸ್ತಾನಿ ರಾಷ್ಟ್ರ ಮತ್ತು ಪಾಕಿಸ್ತಾನಿ ಸಶಸ್ತ್ರ ಪಡೆಗಳು ಶತ್ರುವನ್ನು ಹೇಗೆ ಎದುರಿಸಬೇಕೆಂದು ತಿಳಿದಿವೆ. ಶತ್ರುಗಳು ತಮ್ಮ ದುಷ್ಟ ಗುರಿಗಳಲ್ಲಿ ಯಶಸ್ವಿಯಾಗಲು ನಾವು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಈ ಹೇಡಿತನದ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ವಿಶ್ವಸಂಸ್ಥೆಯ ಚಾರ್ಟರ್, ಅಂತರರಾಷ್ಟ್ರೀಯ ಕಾನೂನು ಮತ್ತು ಅಂತರ-ರಾಜ್ಯ ಸಂಬಂಧಗಳ ಸ್ಥಾಪಿತ ಮಾನದಂಡಗಳ ಉಲ್ಲಂಘನೆ. ಪಹಲ್ಗಾಮ್ ದಾಳಿಯ ನಂತರ, ಭಾರತೀಯ ನಾಯಕತ್ವವು ಮತ್ತೊಮ್ಮೆ ಭಯೋತ್ಪಾದನೆಯ ನೆಪದಲ್ಲಿ ಬಲಿಪಶು ಮಾಡಿದೆ. ಇದು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಭಾರತದ ಅಜಾಗರೂಕ ಕ್ರಮವು ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳನ್ನು ಪ್ರಮುಖ ಸಂಘರ್ಷಕ್ಕೆ ಹತ್ತಿರ ತಂದಿದೆ ಎಂದು ಪಾಕಿಸ್ತಾನ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ್ದಾರೆ.

ಈ ಅಪ್ರಚೋದಿತ ಮತ್ತು ಸ್ಪಷ್ಟವಾದ ಯುದ್ಧ ಕೃತ್ಯದಲ್ಲಿ, ಭಾರತೀಯ ವಾಯುಪಡೆಯು ಭಾರತದ ವಾಯುಪ್ರದೇಶದಲ್ಲಿಯೇ ಉಳಿದುಕೊಂಡು ಮುರಿಡ್ಕೆ ಮತ್ತು ಬಹವಾಲ್ಪುರದ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಮತ್ತು ಕೋಟ್ಲಿ ಮತ್ತು ಮುಜಫರಾಬಾದ್, ಆಜಾದ್ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯುದ್ದಕ್ಕೂ ನಾಗರಿಕರನ್ನು ಗುರಿಯಾಗಿಸಿಕೊಂಡು, ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪಾಕಿಸ್ತಾನದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ. ಭಾರತದ ಆಕ್ರಮಣಕಾರಿ ಕೃತ್ಯವು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಸಾವಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.
ಪೆಹಲ್ಗಾಮ್ ದಾಳಿ ಹಿಂದೆ ಕೋಮು ಗಲಭೆ ಉದ್ದೇಶ
ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಾರತದಲ್ಲಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಗುರಿಯನ್ನು ಹೊಂದಿತ್ತು. ಆದರೆ ಜನರು ಹಾಗೆ ಆಗದಂತೆ ನೋಡಿಕೊಂಡರು ಎಂದು ಕೇಂದ್ರ ಸರ್ಕಾರ ಇಂದು ಹೇಳಿದೆ. ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಆಪರೇಷನ್ ಸಿಂಧೂರ್ ಕ್ಷಿಪಣಿ ದಾಳಿ ಬಗ್ಗೆ ಅಧಿಕಾರಿಗಳು ಮಹತ್ವದ ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ದೇಶದ ಉಳಿದ ಭಾಗಗಳಲ್ಲಿ ಕೋಮು ವೈಷಮ್ಯವನ್ನು ಪ್ರಚೋದಿಸುವ ಉದ್ದೇಶದಿಂದಲೇ ಪಹಲ್ಗಾಮ್ ದಾಳಿ ನಡೆಸಲಾಯಿತು. ಈ ಯೋಜನೆಗಳನ್ನು ವಿಫಲಗೊಳಿಸಿದ ಕೀರ್ತಿ ಸರ್ಕಾರ ಮತ್ತು ಭಾರತದ ಜನರಿಗೆ ಸಲ್ಲುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಆಪರೇಷನ್ ಸಿಂಧೂರ್‌ನ ವಿವರಗಳನ್ನು ಹಂಚಿಕೊಂಡರು.
ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಿವಿಧ ದೇಶಗಳಲ್ಲಿನ ತಮ್ಮ ಸಹವರ್ತಿಗಳಿಗೆ ವಿವರಿಸಿದ್ದಾರೆ. ಭಾರತವು ಉದ್ವಿಗ್ನತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿಲ್ಲ, ಆದರೆ ಪಾಕಿಸ್ತಾನವು ಉಲ್ಬಣಗೊಳ್ಳಲು ನಿರ್ಧರಿಸಿದರೆ "ದೃಢವಾಗಿ ಪ್ರತೀಕಾರ ತೀರಿಸಿಕೊಳ್ಳಲು ಸಿದ್ಧವಾಗಿದೆ" ಎಂದು ಅವರು ದೋವಲ್ ತಿಳಿಸಿದ್ದಾರೆ.












Click it and Unblock the Notifications