Get Updates
Get notified of breaking news, exclusive insights, and must-see stories!

ವಿದೇಶದಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಸಂಘರ್ಷಗಳ ಹೋರಾಟದ ಕಥೆ

ಕ್ಯಾಲಿಫೋರ್ನಿಯಾದಲ್ಲಿ 22 ವರ್ಷದ ಭಾರತೀಯ ವಿದ್ಯಾರ್ಥಿ ಸಾಂಕೇತ್ ಶ್ರೀನಿವಾಸಯ್ಯ ಅವರ ಇತ್ತೀಚಿನ ಸಾವು, ಕಟು ವಾಸ್ತವವೊಂದರತ್ತ ಮತ್ತೆ ಈಗ ನಮ್ಮ ಗಮನ ಸೆಳೆದಿದೆ. ವಿದೇಶದಲ್ಲಿನ ಜೀವನವು ಮೇಲ್ನೋಟಕ್ಕೆ ಅತ್ಯಂತ ರೋಮಾಂಚಕಾರಿಯಾಗಿ ಕಾಣಬಹುದು. ಆದರೆ, ಪರಿಚಯವೇ ಇಲ್ಲದ ಹೊಸ ಪ್ರಪಂಚದಲ್ಲಿ ತಮ್ಮದೇ ಆದ ದಾರಿ ಕಂಡುಕೊಳ್ಳಲು ಹೆಣಗಾಡುವ ವಿದ್ಯಾರ್ಥಿಗಳಿಗೆ ಅದು ಅನೇಕ ಬಾರಿ ಮೂಕ ರೋಧನವಾಗಿಯೂ ಕಾಡುತ್ತದೆ.

ಮೂಲತಃ ಕರ್ನಾಟಕದವರಾದ ಸಾಂಕೇತ್, ಮದ್ರಾಸ್ ಐಐಟಿಯಲ್ಲಿ (IIT Madras) ಪದವಿ ಮುಗಿಸಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಬರ್ಕ್ಲಿಯಲ್ಲಿ ಕೆಮಿಕಲ್ ಮತ್ತು ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಅವರ ಮೃತದೇಹ ಕೊನೆಗೆ ಲೇಕ್ ಅಂಜಾದಲ್ಲಿ ಪತ್ತೆಯಾಗಿತ್ತು. ಅವರ ಸಾವಿನ ಬಳಿಕ ಮಾತನಾಡಿದ್ದ ಅವರ ರೂಮ್‌ಮೇಟ್ ಬನೀತ್ ಸಿದ್ದ್, "ಸಾಂಕೇತ್ ನಡವಳಿಕೆಯಲ್ಲಿ ಇತ್ತೀಚೆಗೆ ಕೆಲವು ಸೂಕ್ಷ್ಮ ಬದಲಾವಣೆಗಳಾಗಿದ್ದವು. ಆತ ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ, ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ ಮತ್ತು ಭಾವನಾತ್ಮಕವಾಗಿ ಅಂತರ ಕಾಯ್ದುಕೊಳ್ಳುತ್ತಿದ್ದ" ಎಂದು ಹೇಳಿದ್ದರು. ಈ ಎಲ್ಲಾ ಲಕ್ಷಣಗಳು ವಿಪರೀತ ಮಾನಸಿಕ ಒತ್ತಡದ ಮುನ್ಸೂಚನೆಗಳೇ ಆಗಿದ್ದವು ಎಂಬುದು ಈಗ ಅರ್ಥವಾಗುತ್ತಿದೆ.

Dreams Turn Heavy

ಇದು ಕೇವಲ ಒಂದು ಘಟನೆಯಷ್ಟೇ ಅಲ್ಲ; ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಪ್ರತಿದಿನ ಎದುರಿಸುತ್ತಿರುವ ಸಂಕೀರ್ಣವಾದ ಮತ್ತು ಭಾವನಾತ್ಮಕ ಹೋರಾಟದ ನೈಜ ಪ್ರತಿಬಿಂಬವಾಗಿದೆ.

ಒಂಟಿತನದ ನಡುವಿನ ಹೋರಾಟ

ವಿದೇಶದಲ್ಲಿ ಕಲಿಯುವುದು ಎಂದರೆ ಅದೊಂದು ದೊಡ್ಡ ಕನಸು, ಜಾಗತಿಕ ಮಟ್ಟದ ಮಾನ್ಯತೆ, ಶೈಕ್ಷಣಿಕ ಶ್ರೇಷ್ಠತೆ, ಸ್ವಾತಂತ್ರ್ಯ ಮತ್ತು ಉಜ್ವಲ ಭವಿಷ್ಯದ ಅವಕಾಶ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ, ಆ ಆಕರ್ಷಣೆಯ ಹಿಂದಿರುವ ನಿಗೂಢ ವಾಸ್ತವವೇ ಬೇರೆ. 20 ಅಥವಾ 22ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗುವ ವಿದ್ಯಾರ್ಥಿಗಳು ಕೇವಲ ದೇಶವನ್ನು ಮಾತ್ರ ದಾಟುವುದಿಲ್ಲ; ಬದಲಾಗಿ ಅವರು ಭಾವನಾತ್ಮಕ ಅಡೆತಡೆಗಳನ್ನೂ ದಾಟಬೇಕಾಗುತ್ತದೆ. ಅಲ್ಲಿ ಅವರಿಗೆ ಎಲ್ಲವೂ ಹೊಸದು; ಭಾಷೆ, ಆಹಾರ, ಹವಾಮಾನ, ಸಾಮಾಜಿಕ ನಿಯಮಗಳು, ತರಗತಿ ಎಲ್ಲವೂ ಭಿನ್ನವಾಗಿರುತ್ತವೆ. ಚಿಕ್ಕ ಸಹಾಯ ಕೇಳಲು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಅಥವಾ ತಮ್ಮ ನೋವನ್ನು ಹೇಳಿಕೊಳ್ಳಲು ಕೂಡ ಅವರು ಅಲ್ಲಿ ಬಹಳಷ್ಟು ಯೋಚಿಸಬೇಕಾಗುತ್ತದೆ.

ಭಾರತದಲ್ಲಿ, ಯುವಕರು ಪೋಷಕರು, ಸಂಬಂಧಿಕರು, ನೆರೆಹೊರೆಯವರು ಮತ್ತು ಸಾಂಸ್ಕೃತಿಕ ವಾತಾವರಣದಂತಹ ಬಲವಾದ ಬೆಂಬಲ ವ್ಯವಸ್ಥೆಯೊಳಗೆ ಬೆಳೆಯುತ್ತಾರೆ. ಆದರೆ ವಿದೇಶಕ್ಕೆ ಹೋದ ರಾತ್ರೋರಾತ್ರಿ ಇವೆಲ್ಲವೂ ಕಣ್ಮರೆಯಾಗುತ್ತವೆ. ಅಲ್ಲಿ ಉಳಿಯುವುದು ಕೇವಲ ಒಂದು ಬಾಡಿಗೆ ಕೋಣೆ, ಅವರ ಪಠ್ಯಕ್ರಮ ಮತ್ತು ಸ್ವತಂತ್ರವಾಗಿ ಬದುಕಲೇಬೇಕಾದ ಅನಿವಾರ್ಯತೆ.

ಒಂಟಿತನ ಎಂಬುದು ಒಮ್ಮೆಲೇ ಯಾರಿಗೂ ಅಪ್ಪಳಿಸುವುದಿಲ್ಲ. ಅದು ಕ್ರಮೇಣವಾಗಿ ಆವರಿಸಿಕೊಳ್ಳುತ್ತದೆ. ಮನೆಗೆ ಮಾಡುವ ಕರೆಗಳು ಕಡಿಮೆಯಾಗುವುದು, ಒಬ್ಬಂಟಿಯಾಗಿ ಊಟ ಮಾಡುವುದು, ಯಾರೊಂದಿಗೂ ಮಾತನಾಡದೆ ವಾರಾಂತ್ಯ ಕಳೆಯುವುದು ಮತ್ತು "ನಾನು ಸ್ಟ್ರಾಂಗ್ ಆಗಿದ್ದೇನೆ, ಯಶಸ್ವಿಯಾಗಿದ್ದೇನೆ" ಎಂದು ತೋರಿಸಿಕೊಳ್ಳುವ ಒತ್ತಡಕ್ಕೆ ಸಿಲುಕುವುದು, ಇವೆಲ್ಲವೂ ಒಂಟಿತನದ ಲಕ್ಷಣಗಳೇ.

ವಿದ್ಯಾರ್ಥಿಗಳ ಮೇಲಿನ ಒತ್ತಡಗಳು

ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಏಕಕಾಲದಲ್ಲಿ ಅನೇಕ ಹೊರೆಗಳನ್ನು ಹೊರುತ್ತಾರೆ:

1. ಶೈಕ್ಷಣಿಕ ಒತ್ತಡ: ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳು ಸ್ವಯಂ-ಕಲಿಕೆ, ಸಂಶೋಧನೆ ಮತ್ತು ನಿರಂತರ ಮೌಲ್ಯಮಾಪನಕ್ಕೆ ಒತ್ತು ನೀಡುತ್ತವೆ. ಅನೇಕ ವಿದ್ಯಾರ್ಥಿಗಳು ಇದರೊಂದಿಗೆ ಹೆಜ್ಜೆ ಹಾಕಲು ಮೌನವಾಗಿಯೇ ಒದ್ದಾಡುತ್ತಾರೆ.

2. ಆರ್ಥಿಕ ಆತಂಕ: ಹೆಚ್ಚಿನ ಬೋಧನಾ ಶುಲ್ಕ, ಬಾಡಿಗೆ, ವಿಮೆ ಮತ್ತು ದೈನಂದಿನ ಖರ್ಚುಗಳು ವಿದ್ಯಾರ್ಥಿಗಳನ್ನು ಹೈರಾಣಾಗಿಸುತ್ತವೆ. ಅದರಲ್ಲೂ ಪೋಷಕರು ಸಾಲ ಮಾಡಿ ಕಳುಹಿಸಿದ್ದರೆ ಆ ಒತ್ತಡ ದುಪ್ಪಟ್ಟಾಗುತ್ತದೆ.

3. ಉದ್ಯೋಗದ ಅನಿಶ್ಚಿತತೆ: ವೀಸಾ ನಿಯಮಗಳು, ಇಂಟರ್ನ್‌ಶಿಪ್‌ಗಳು ಮತ್ತು ಉದ್ಯೋಗದಲ್ಲಿನ ತೋಳಲಾಟ (Placements) ಸದಾ ಉತ್ತಮ ಸಾಧನೆ ಮಾಡುವಂತೆ ಒತ್ತಡ ಹೇರುತ್ತಲೇ ಇರುತ್ತವೆ.

4. ಗುರುತಿನ ಬಿಕ್ಕಟ್ಟು: ವಿದ್ಯಾರ್ಥಿಗಳು ಆಗಾಗ ಎರಡು ಪ್ರಪಂಚಗಳ ನಡುವೆ ಸಿಲುಕಿಕೊಂಡಂತೆ ಭಾವಿಸುತ್ತಾರೆ. ವಿದೇಶದಲ್ಲಿ ಸಂಪೂರ್ಣವಾಗಿ ಹೊಂದಿಕೊಳ್ಳಲಾಗದೆ, ತಾಯ್ನಾಡಿನಿಂದಲೂ ದೂರವಾಗುತ್ತಿರುತ್ತಾರೆ.

5. ಸಾಮಾಜಿಕ ಹೋಲಿಕೆ: ಸಾಮಾಜಿಕ ಜಾಲತಾಣಗಳಲ್ಲಿ ಇತರರೆಲ್ಲರೂ ಖುಷಿಯಾಗಿದ್ದಾರೆ, ಪ್ರವಾಸ ಮಾಡುತ್ತಿದ್ದಾರೆ, ಯಶಸ್ವಿಯಾಗುತ್ತಿದ್ದಾರೆ ಎಂಬ ಭ್ರಮೆ ಸೃಷ್ಟಿಯಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ.

ಇಂತಹ ವಯಸ್ಸಿನಲ್ಲಿ, ಹದಿಹರೆಯ ಮತ್ತು ಪ್ರೌಢಾವಸ್ಥೆಯ ನಡುವಿನ ಭಾವನಾತ್ಮಕ ಸೇತುವೆ ಇನ್ನೂ ನಿರ್ಮಾಣವಾಗುತ್ತಿರುತ್ತದೆ. ಕಷ್ಟಗಳು ಮಿತಿಮೀರಿದಾಗ, ಅದನ್ನು ಎದುರಿಸುವುದಕ್ಕಿಂತ ಅಲ್ಲಿಂದ ತಪ್ಪಿಸಿಕೊಳ್ಳುವುದೇ ಸುಲಭ ಎಂದು ಅವರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಪೋಷಕರು ಏನು ಮಾಡಬಹುದು?

ದೂರವಿದ್ದ ಮಾತ್ರಕ್ಕೆ ಪೋಷಕರು ಅಸಹಾಯಕರಲ್ಲ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಕುಟುಂಬವೇ ಅತ್ಯಂತ ಬಲವಾದ ಭಾವನಾತ್ಮಕ ಆಸರೆ.

1. ಕೇವಲ ಅಂಕಗಳು, ಉದ್ಯೋಗ ಅಥವಾ ಖರ್ಚಿನ ಬಗ್ಗೆ ಕೇಳುವ ಬದಲು, "ನಿದ್ದೆ ಸರಿಯಾಗಿ ಮಾಡುತ್ತಿದ್ದೀಯಾ? ನಿನಗಾಗಿ ಸಮಯ ಮೀಸಲಿಟ್ಟಿದ್ದೀಯಾ?" ಎಂದು ಪ್ರೀತಿಯಿಂದ ಕೇಳಿ.

2. ಕ್ಯಾಂಪಸ್ ಈವೆಂಟ್‌ಗಳಲ್ಲಿ ಭಾಗವಹಿಸಲು ಮತ್ತು ಸಹಪಾಠಿಗಳೊಂದಿಗೆ ಬೆರೆಯಲು ಅವರನ್ನು ಪ್ರೋತ್ಸಾಹಿಸಿ.

3. ಯೂನಿವರ್ಸಿಟಿ ಕೌನ್ಸೆಲಿಂಗ್ ಸೇವೆಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿ.

4. "ಅಂಕಗಳೇ ಜೀವನವಲ್ಲ, ವಾಪಸ್ ಬರುವುದು ಸೋಲಲ್ಲ" ಎಂಬ ಭರವಸೆ ನೀಡಿ ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡಿ.

ಸಹಾಯವಾಣಿ

ಸಂಪೂರ್ಣ ಗೌಪ್ಯತೆ ಕಾಯ್ದುಕೊಳ್ಳುವ ವೃತ್ತಿಪರ ಆಪ್ತಸಮಾಲೋಚನೆಗಾಗಿ iCALL ಮಾನಸಿಕ ಸಹಾಯವಾಣಿಗೆ ಕರೆ ಮಾಡಬಹುದು: 9152987821 (ಸೋಮವಾರ - ಶನಿವಾರ: ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ).

(ಬರಹ: ಕೀರ್ತಿ ಪಾಂಡೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+