ಇರಾನ್ ಡ್ರೋನ್ ಉಡಾಯಿಸಿದ ಅಮೆರಿಕ ಸೇನೆ, ಶಾಂತಿ ಮಾತುಕತೆಗೆ ಅಂತಿಮ ಹಂತದ ಸಿದ್ಧತೆ | USA Military
ಅಮೆರಿಕ ಮತ್ತು ಇರಾನ್ ನಡುವೆ ಏನೂ ಸರಿ ಇಲ್ಲ ಎಂಬುದು ಪದೇ ಪದೇ ಗೊತ್ತಾಗುತ್ತಿದ್ದು, ಈ ಎರಡೂ ದೇಶಗಳು ಯಾವ ಕ್ಷಣದಲ್ಲಿ ಬೇಕಾದರೂ ಒಬ್ಬರ ಮೇಲೆ ಮತ್ತೊಬ್ಬರು ಭೀಕರ ಯುದ್ಧ ಆರಂಭ ಮಾಡಬಹುದು. ಒಂದು ಕಡೆ ಅಮೆರಿಕ ತನ್ನ ದೊಡ್ಡ ಪ್ರಮಾಣದ ಸೇನೆಯನ್ನು ಇರಾನ್ ಜಲಗಡಿ ಸಮೀಪಕ್ಕೆ ನುಗ್ಗಿಸಿದೆ, ಇನ್ನೊಂದು ಕಡೆ ಇರಾನ್ ಕೂಡ ಈ ವಿಚಾರದಲ್ಲಿ ತುಂಬಾನೇ ಕೋಪಗೊಂಡು ಪ್ರತಿದಾಳಿಗೆ ಸಿದ್ಧವಾಗಿ ನಿಂತಿದೆ. ಹೀಗಿದ್ದಾಗ ಎರಡೂ ದೇಶಗಳು ಪರಸ್ಪರ ದಾಳಿ & ಪ್ರತಿದಾಳಿ ಆರಂಭ ಮಾಡಿದರೆ ಅದು ವಿನಾಶಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.
ಹೀಗೆಲ್ಲಾ ಇದ್ದಾಗ ಕೂಡ ಇರಾನ್ ಸೇನೆಯ ಒಂದು ಡ್ರೋನ್ ಹೊಡೆದು ಉರುಳಿಸಿದೆ ಅಮೆರಿಕ ಸೇನೆ. ಇದು ಇರಾನ್ ಸರ್ವಾಧಿಕಾರಿ ಖಮೇನಿ ಸೇರಿದಂತೆ ಇರಾನ್ ನಾಯಕರನ್ನು ರೊಚ್ಚಿಗೆಬ್ಬಿಸಿ ದಾಳಿ ಮಾಡಲು ಪ್ರಚೋದಿಸುವ ವಾತಾವರಣ ಸೃಷ್ಟಿ ಮಾಡುತ್ತಿದೆ. ಇದೆಲ್ಲವನ್ನೂ ಜಗತ್ತು ಭಯ ಹಾಗೂ ಕುತೂಹಲದ ಕಣ್ಣುಗಳಿಂದ ನೋಡುವ ಸಮಯದಲ್ಲೇ ದಿಢೀರ್ ಇರಾನ್ & ಅಮೆರಿಕದ ನಡುವೆ ಶಾಂತಿ ಒಪ್ಪಂದಕ್ಕೆ ಒಮನ್ ವೇದಿಕೆ ಒದಗಿಸುತ್ತಿದೆ. ಮಧ್ಯಪ್ರಾಚ್ಯ ದೇಶಗಳು ಪರಮಾಣು ಯುದ್ಧ ಭಯದಲ್ಲಿ ಇರುವಾಗ ಅದನ್ನು ತಣ್ಣಗಾಗಿಸಲು ಹೊಸ ಪ್ಲಾನ್ ಮಾಡಲಾಗಿದೆ.

ಪರಿಸ್ಥಿತಿ ಕೈಮೀರಿ ಹೋಗುವ ಆತಂಕ
ಇರಾನ್ ಜೊತೆಗೆ ಹೇಗಾದರೂ ಮಾಡಿ ಈ ಬಾರಿ ಪರಮಾಣು ಒಪ್ಪಂದ ಮಾಡಿಕೊಳ್ಳಬೇಕು & ಆ ಮೂಲಕ ಮಧ್ಯಪ್ರಾಚ್ಯ ಭಾಗದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ಅಮೆರಿಕ ಪ್ಲಾನ್. ಹೀಗಾಗಿ ಅಮೆರಿಕ ಈಗ ಇರಾನ್ ಕಡೆಗೆ ಕಳಿಸಿರುವ ಅಸ್ತ್ರಗಳು ದೊಡ್ಡ ಮಟ್ಟದಲ್ಲಿದ್ದು, ಮಧ್ಯಪ್ರಾಚ್ಯ ಭಾಗ ಯಾವುದೇ ಕ್ಷಣದಲ್ಲಿ ಘೋರ ಯುದ್ಧ ನೋಡಬಹುದಾ? ಎಂಬ ಅನುಮಾನವೂ ಮೂಡಿತ್ತು. ಹೀಗೆ ಆತಂಕ ಮೂಡಲು ಕಾರಣ ಅಮೆರಿಕ ಸೇನೆಗೆ ಸೇರಿದ F-15E ಸ್ಟ್ರೈಕ್ ಈಗಲ್ ಜೆಟ್ & ವಿಮಾನ ವಾಹಕ ನೌಕೆ USS ಅಬ್ರಹಾಂ ಲಿಂಕನ್. ಇದೀಗ ಇರಾನ್ ಸೇನೆಗೆ ಸೇರಿದ ಡ್ರೋನ್ ಇದೇ ಯುದ್ಧ ನೌಕೆ USS ಅಬ್ರಹಾಂ ಲಿಂಕನ್ ಬಳಿಗೆ ಬರುತ್ತಿತ್ತು ಎಂದು ಆರೋಪಿಸಲಾಗಿದೆ.
ಡ್ರೋನ್ ಹೊಡೆದು ಉರುಳಿಸಿದ ಅಮೆರಿಕ
ಹೀಗೆ USS ಅಬ್ರಹಾಂ ಲಿಂಕನ್ ಬಳಿಗೆ ಬರುತ್ತಿದ್ದ ಡ್ರೋನ್ ಮೇಲೆ ಅಮೆರಿಕ ಸೇನೆಯಿಂದ ದಾಳಿ ನಡೆದಿದೆ. ಹೀಗೆ ನಡೆದ ದಾಳಿಯಿಂದಾಗಿ ಎರಡೂ ದೇಶಗಳ ನಡುವಿನ ಪರಿಸ್ಥಿತಿ ಇದೀಗ ಇನ್ನಷ್ಟು ಕಠಿಣವಾಗಿದ್ದು, ಎರಡೂ ಕಡೆ ಪರಮಾಣು ಅಸ್ತ್ರಗಳು ಬಳಕೆ ಆಗುತ್ತವಾ? ಎಂಬ ಚರ್ಚೆ ಕೂಡ ಶುರುವಾಗಿದೆ. ಅದಕ್ಕೂ ಮೊದಲೇ ಶಾಂತಿ ಒಪ್ಪಂದ ಮಾಡಿಸಲು ಮಾಸ್ಟರ್ ಪ್ಲಾನ್ ಕೂಡ ಈಗ ಸಿದ್ಧವಾಗಿದೆ.
ಒಮನ್ ನೆಲದಲ್ಲಿ ಅಮೆರಿಕ & ಇರಾನ್ ನಡುವೆ ಮಹತ್ವದ ಪರಮಾಣು ಒಪ್ಪಂದಕ್ಕೆ ಶಾಂತಿ ಸಭೆ ನಡೆಸಲು ಇದೀಗ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ ಈ ಸಭೆಯನ್ನು ಯಶಸ್ವಿಗೊಳಿಸಲು ಕೂಡ ಹಲವು ಕಾರ್ಯತಂತ್ರ ಹೆಣೆಯಲಾಗಿ, ಪ್ರಮುಖವಾಗಿ ಮಧ್ಯಪ್ರಾಚ್ಯದ ಶ್ರೀಮಂತ ದೇಶಗಳು ಇಬ್ಬರ ನಡುವೆ ಶಾಂತಿ ಒಪ್ಪಂದಕ್ಕೆ ಹೆಣಗಾಡುತ್ತಿವೆ. ಇರಾನ್ ಈ ವಿಚಾರದಲ್ಲಿ ಪದೇ, ಪದೇ ಅಮೆರಿಕ ವಿರುದ್ಧ ನಿಲ್ಲುತ್ತಿತ್ತು, ಆದರೆ ಈಗ ಶಾಂತಿ ಒಪ್ಪಂದ ಚರ್ಚೆಗೆ ಸಿದ್ಧವಾದಂತೆ ಕಾಣುತ್ತಿದೆ.
ಇರಾನ್ ಬೆನ್ನಿಗೆ ರಷ್ಯಾ & ಚೀನಾ
ಅಮೆರಿಕ ಸೇನೆ ಇರಾನ್ ಬಳಿಗೆ ಬಂದು ನಿಂತ ನಂತರ ಚೀನಾ ಪದೇ ಪದೇ ಈ ನಿರ್ಧಾರವನ್ನು ಟೀಕಿಸಿದೆ. ಇದರ ಜೊತೆಗೆ ರಷ್ಯಾ ಕೂಡ ಈ ವಿಚಾರದಲ್ಲಿ ಉಕ್ರೇನ್ ಬೆನ್ನಿಗೆ ನಿಲ್ಲುವ ಮಾತನ್ನು ಆಡುತ್ತಿದೆ. ಹೀಗೆ ಜಗತ್ತಿನ 2 ಬಲಿಷ್ಠ ದೇಶಗಳು ಅಮೆರಿಕ ನಿರ್ಧಾರದ ವಿರುದ್ಧ ನಿಂತಿದ್ದ ವೇಳೆ ಅಮೆರಿಕ ಕೂಡ ನೇರವಾಗಿ ಯುದ್ಧ ಸಾರುವ ಹುಮ್ಮಸ್ಸಿನಲ್ಲಿ ಇಲ್ಲ. ಇದೇ ಕಾರಣಕ್ಕೆ ಮಾತುಕತೆ ಮೂಲಕ ತಿಕ್ಕಾಟ ಬಗೆಹರಿಸಲು ಎರಡೂ ದೇಶಗಳು ಈಗ ಮುಂದಾಗಿವೆ.












Click it and Unblock the Notifications