ಅಮೆರಿಕ ನಾಗರಿಕರ ಮೇಲೆ ದಾಳಿ ನಡೆಸಿದರೆ ನಾವು ನಿಮ್ಮನ್ನು ಹುಡುಕಿ ಕೊಲ್ಲುತ್ತೇವೆ: ಹಮಾಸ್ ಉಗ್ರರಿಗೆ ಯುಎಸ್ ಕಠಿಣ ಸಂದೇಶ
ವಾಷಿಂಗ್ಟನ್, ಅಕ್ಟೋಬರ್ 23: ಇಸ್ರೇಲ್ ಹಮಾಸ್ ಯುದ್ಧವು ಮತ್ತೊಂದು ಹಂತಕ್ಕೆ ತಲುಪಿದೆ. ಗಾಜಾದ ಮೇಲೆ ದಾಳಿ ಹೆಚ್ಚಿಸುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇದೇ ವೇಳೆ ಅಮೆರಿಕವು ಹಮಾಸ್ ಉಗ್ರರಿಗೆ ಕಠಿಣ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.
ಹಮಾಸ್ ಉಗ್ರರು ಅಮೆರಿಕದ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಎಚ್ಚರಿಕೆ ನೀಡಿದ್ದಾರೆ.

ಯುಎಸ್ ನಾಗರಿಕರು ಯಾವುದೇ ಹಗೆತನಕ್ಕೆ ಗುರಿಯಾದರೆ, ಬೈಡೆನ್ ಆಡಳಿತವು ಕಾರ್ಯನಿರ್ವಹಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, 'ಇಸ್ರೇಲ್-ಹಮಾಸ್ ಯುದ್ಧ ಉಲ್ಬಣವಾಗುವ ನಿರೀಕ್ಷೆಯಲ್ಲಿ ನಾವಿದ್ದೇವೆ. ಕಾರಣ, ಇರಾನ್ ಮೂಲದ ಉಗ್ರರು ಈ ಯುದ್ಧದಲ್ಲಿ ಭಾಗಿಯಾಗಬಹುದು ಎಂದು ಭಾನುವಾರ ಹೇಳಿದ್ದಾರೆ.
'ಇದು ನಮಗೆ ಬೇಕಿಲ್ಲ. ಇದನ್ನು ನಾವು ಸ್ವಾಗತಿಸುವುದಿಲ್ಲ. ಇದು ಉಲ್ಬಣಗೊಳ್ಳುವುದನ್ನು ಬಯಸುವುದಿಲ್ಲ' ಎಂದು ಬ್ಲಿಂಕೆನ್ ಹೇಳಿದ್ದಾರೆ.

ನಮ್ಮ ಸೈನಿಕರು ಅಥವಾ ಪಡೆಗಳು ಗುಂಡಿನ ದಾಳಿಗೆ ಒಳಗಾಗುವುದನ್ನು ನೋಡಲು ಬಯಸುವುದಿಲ್ಲ. ಆದರೆ ಅದು ಸಂಭವಿಸಿದಲ್ಲಿ, ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ಅಮೆರಿಕದ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದರೆ ಅಂತವರನ್ನು ನಾವು ಹುಡುಕಿ ಕೊಲ್ಲುತ್ತೇವೆ ಎಂದು ಬ್ಲಿಂಕೆನ್ ಎಚ್ಚರಿಕೆ ನೀಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ತಮ್ಮ ಪಡೆಗಳು ಮತ್ತು ನಾಗರಿಕರ ಮೇಲಿನ ದಾಳಿಯಲ್ಲಿ ಗಣನೀಯ ಏರಿಕೆಯಾಗಬಹುದು ಎಂದು ಮಾಹಿತಿ ನಮಗೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಯುಎಸ್ ಆತ್ಮರಕ್ಷಣೆಯ ಹಕ್ಕನ್ನು ಹೊಂದಿದೆ. ನಾವು ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಎರಡು ಬಾರಿ ಯೋಚಿಸುವುದಿಲ್ಲ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಹಮಾಸ್ ಉಗ್ರರು ಮಾರಣಾಂತಿಕ ದಾಳಿ ನಡೆಸಿದ್ದಾರೆ. ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಇದು ಮೂರನೇ ವಾರ ತಲುಪಿದೆ. ಯುದ್ಧವು ಮತ್ತಷ್ಟು ಉಲ್ಬಣಗೊಳ್ಳುವ ನಿರೀಕ್ಷೆ ಇದೆ.
ಇಸ್ರೇಲ್ ಹಮಾಸ್ ನಡುವಿನ ಯುದ್ಧವು ಬೇರೆಯದೇ ಸ್ವರೂಪವನ್ನು ಪಡೆಯುತ್ತಿದೆ. ಇದು ಮಧ್ಯಪ್ರಾಚ್ಯದಾದ್ಯಂತ ಹಬ್ಬುತ್ತಿದೆ.
ಇಸ್ರೇಲಿ ವಿಮಾನಗಳು ಶನಿವಾರ ರಾತ್ರಿ ಹಾಗೂ ಭಾನುವಾರದ ಬೆಳಗಿನ ಜಾವದಲ್ಲಿ ಗಾಜಾದಾದ್ಯಂತ ವೈಮಾನಿಕ ದಾಳಿ ನಡೆಸಿವೆ.
ಸಿರಿಯಾದ ಎರಡು ವಿಮಾನ ನಿಲ್ದಾಣಗಳು ಮತ್ತು ಉಗ್ರಗಾಮಿಗಳು ಬಳಸುತ್ತಿದ್ದ ಮಸೀದಿ ಮೇಲೆಯೂ ದಾಳಿ ಇಸ್ರೇಲ್ ದಾಳಿ ನಡೆಸಿದೆ. ಇರಾಕ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ಉದ್ಯೋಗಿಗಳಿಗೆ ದೇಶ ತೊರೆಯಬೇಕು ಎಂದು ಯುಎಸ್ ಭಾನುವಾರ ಸೂಚಿಸಿದೆ.












Click it and Unblock the Notifications