Pakistan Election: ಪಾಕ್‌ಗೆ ದೊಡ್ಡಣ್ಣ ಅಮೆರಿಕದ ಎಲೆಕ್ಷನ್ ಟಿಪ್ಸ್
ಪಾಕಿಸ್ತಾನದ ಚಾಳಿ ಏನು ಅನ್ನೋದು ಇಡೀ ಜಗತ್ತಿಗೇ ಗೊತ್ತು. ಮಾಮೂಲಿ ದಿನಗಳಲ್ಲೇ ಈ ದೇಶದಲ್ಲಿ ನಡೆಯಬಾರದ್ದು ನಡೆಯುತ್ತೆ. ಇನ್ನು ಎಲೆಕ್ಷನ್‌ಗೆ ಬೇರೆ ಸಜ್ಜಾಗುತ್ತಿರುವಾಗ ಪಾಕಿಸ್ತಾನದಲ್ಲಿ ಅನ್ಯಾಯ & ಅಕ್ರಮ ಪಕ್ಕಾ ಅಂತಾ ಜಗತ್ತು ಮೊದಲೇ ಡಿಸೈಡ್ ಆಗಿದೆ. ಹೀಗಾಗಿಯೇ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕ ಕೂಡ ಪಾಕ್‌ಗೆ ಎಲೆಕ್ಷನ್ ಟಿಪ್ಸ್ ಕೊಟ್ಟಿದೆ. ಹಾಗಾದರೆ ಪಾಕಿಸ್ತಾನಕ್ಕೆ ಅಮೆರಿಕ ಹೇಳಿದ್ದೇನು?
ಆಗಸ್ಟ್ 9ಕ್ಕೆ ಪಾಕ್ ಸಂಸತ್ ವಿಸರ್ಜನೆ ಮಾಡಲಾಗಿದ್ದು, ಇನ್ನು 90 ದಿನಗಳ ಒಳಗಾಗಿ ಅಲ್ಲಿ ಚುನಾವಣೆ ನಡೆಸಬೇಕಿದೆ. ಮತ್ತೊಂದು ಕಡೆ ಪಾಕ್‌ನಲ್ಲಿ ಚುನಾವಣೆ ಮುಂದಕ್ಕೆ ಹೋಗಿ, ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಕೂಡ ದಟ್ಟವಾಗಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಅಧ್ಯಕ್ಷ ಕೂಡ ಮಧ್ಯಪ್ರವೇಶ ಮಾಡಿ, ನವೆಂಬರ್ 6ರಂದು ಚುನಾವಣೆ ನಡೆಸಿ ಎಂದಿದ್ದಾರೆ. ಆದರೆ ಇಷ್ಟೆಲ್ಲಾ ಬೆಳವಣಿಗೆ ನಡುವೆ ಅಮೆರಿಕ ಕೂಡ ಪಾಕಿಸ್ತಾನ ಚುನಾವಣೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದೆ.

ನ್ಯಾಯಯುತ ಚುನಾವಣೆ ನಡೆಸು ಪಾಕಿಸ್ತಾನ!
ಪಾಕಿಸ್ತಾನ ಮತ್ತು ಅಮೆರಿಕ ಮಧ್ಯೆ ಎಂಥ ಸಂಬಂಧ ಇದೆ ಅನ್ನೋದನ್ನ ಇಡೀ ಪ್ರಪಂಚ ತಿಳಿದುಕೊಂಡಿದೆ. ಆದರೆ ಒಸಾಮಾ ಬಿನ್ ಲಾಡೆನ್ ಹತ್ಯೆ ನಂತರ ಅಮೆರಿಕ ಮತ್ತು ಪಾಕ್ ಸಂಬಂಧ ಹಳಸಿ ಹೋಗಿತ್ತು. ಇದೀಗ ಸಂಬಂಧ ಮತ್ತೆ ಸುಧಾರಿಸುವ ಸೂಚನೆ ಸಿಗುತ್ತಿದ್ದು ಪಾಕಿಸ್ತಾನ ಚುನಾವಣೆ ಹಿನ್ನೆಲೆ ಅಮೆರಿಕ ಮಧ್ಯಪ್ರವೇಶ ಮಾಡಿ ಸಲಹೆ ಒಂದನ್ನ ನೀಡಿದೆ. ಅದೇನೆಂದರೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಸರಿಯಾದ ಸಮಯಕ್ಕೆ ಚುನಾವಣೆ ನಡೆಸಿ ಅಂತಾ ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ಸೂಚನೆ ನೀಡಿದೆ.
ಮಾನವ ಹಕ್ಕುಗಳ ರಕ್ಷಣೆಗೆ ಆಗ್ರಹ
ಪಾಕಿಸ್ತಾನ ಉಗ್ರರ ಕೂಪವಾಗಿ ಬದಲಾಗಿದ್ದು, ಅಲ್ಲಿ ಭಯೋತ್ಪಾದಕರ ಹಾವಳಿಯು ತೀವ್ರ ಎನ್ನಬಹುದು. ಇಂತಹ ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬ ಆರೋಪ ಪದೇ ಪದೆ ಕೇಳಿಬರುತ್ತಿದೆ. ಇದೀಗ ಅಮೆರಿಕ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಇದೇ ವಿಚಾರದಲ್ಲಿ ಎಚ್ಚರಿಕೆ ನೀಡಿದ್ದು, ಮಾನವ ಹಕ್ಕುಗಳು, ಮೂಲಭೂತ ಸ್ವಾತಂತ್ರ್ಯ ಹಾಗೂ ಕಾನೂನಿನ ನಿಯಮಾವಳಿ ಗೌರವಿಸಿ ಎಂದೂ ಖಡಕ್ ಸೂಚನೆ ಕೊಟ್ಟಿದೆ. ಹೀಗಾಗಿ ಪಾಕ್ ವಿಚಾರದಲ್ಲಿ ಅಮೆರಿಕ ಮತ್ತೊಮ್ಮೆ ಗಟ್ಟಿ ನಿಲುವು ತೆಗೆದುಕೊಂಡಂತೆ ಕಾಣುತ್ತಿದೆ.
ಇನ್ನು ನವೆಂಬರ್ 6ರಂದು ಚುನಾವಣೆ ನಡೆಸುವಂತೆ ಪಾಕಿಸ್ತಾನ ರಾಷ್ಟ್ರಪತಿ ಆರಿಫ್ ಅಲ್ವಿ, ಪಾಕ್ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಪಾಕಿಸ್ತಾನದಲ್ಲಿ ಸೂಕ್ತ ಹಾಗೂ ಪ್ರಜಾಪ್ರಭುತ್ವದ ತಳಹದಿಯಲ್ಲಿ ಚುನಾವಣೆ ನಡೆಯಲಿ ಎಂದಿದ್ದಾರೆ. ಆದರೆ ಈ ಸಲಹೆ ಬಗ್ಗೆ ಪಾಕಿಸ್ತಾನ ಹೇಗೆ ಪ್ರತಿಕ್ರಿಯೆ ನೀಡುತ್ತೆ ಎಂಬುದನ್ನು ಕಾದು ನೋಡಬೇಕು.

ಪತ್ರ ಬರೆದ ಪಾಕ್ ಅಧ್ಯಕ್ಷ
ಪಾಕಿಸ್ತಾನದಲ್ಲಿ ನವೆಂಬರ್ 6ರಂದು ಚುನಾವಣೆ ನಡೆಸಬೇಕು ಎಂದು ಪಾಕ್ ರಾಷ್ಟ್ರಪತಿ ಆರಿಫ್ ಅಲ್ವಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹಾಗೇ ಸಂಸತ್ ವಿಸರ್ಜನೆ ನಂತರ 90 ದಿನಗಳ ಒಳಗೆ ದಿನಾಂಕವನ್ನು ನಿಗದಿಪಡಿಸಲು ಅಧ್ಯಕ್ಷರಿಗೆ ಇರುವ ಅಧಿಕಾರದ ಕುರಿತು & ಸಂವಿಧಾನದ ವಿಧಿ 48(5) ಅನ್ನ ಕೂಡ ಅಲ್ವಿ ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಮೂಲಕ ಸಂಸತ್ ವಿಸರ್ಜನೆಯಾದ 89ನೇ ದಿನವಾದ ನ.6ಕ್ಕೆ ಚುನಾವಣೆ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹೀಗೆ ಪಾಕಿಸ್ತಾನ ಅಧ್ಯಕ್ಷರು ಪಾಕ್ ಚುನಾವಣಾ ಆಯುಕತ್ತರಿಗೆ ಪತ್ರವನ್ನ ಬರೆದ ಒಂದು ದಿನದ ಒಳಗೆ ಅಮೆರಿಕ ಕೂಡ ಪ್ರತಿಕ್ರಿಯೆ ನೀಡಿದೆ.
ಪಾಕಿಸ್ತಾನ ಲೋಕಸಭೆಯ ಒಟ್ಟು ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲಿ 5 ವರ್ಷ ಅಧಿಕಾರವಧಿ ಇರುತ್ತದೆ. ಅದರೆ ಈ ಅವಧಿಯು ಆಗಸ್ಟ್ 12ಕ್ಕೆ ಕೊನೆಯಾಗುತ್ತಿತ್ತು. ಅವಧಿಗೂ ಮೊದಲು ಅಂದ್ರೆ ಆಗಸ್ಟ್ 9ಕ್ಕೆ ಪಾಕ್ ಸಂಸತ್ ವಿಸರ್ಜನೆ ಶಿಫಾರಸು ಕಳುಹಿಸಿದ್ರು ಪಾಕ್ ಪಿಎಂ. ಹೀಗೆ ಪಾಕಿಸ್ತಾನ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ ವಿಸರ್ಜನೆ ಮಾಡಲಾಗಿತ್ತು. ಇದೀಗ ನವೆಂಬರ್ 6ರಂದು ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications