ಇಸ್ರೇಲ್ & ಹಮಾಸ್ ಉಗ್ರರ ಯುದ್ಧಕ್ಕೆ ಭಾರತದ ಈ ಯೋಜನೆ ಕಾರಣವಂತೆ!
ಯುದ್ಧ ಶುರುವಾಗೋದು ಎಲ್ಲರಿಗೂ ಗೊತ್ತಿರುತ್ತದೆ, ಆದರೆ ಅದೇ ಯುದ್ಧ ಮುಗಿಯೋದು ಎಷ್ಟು ಜನರ ಶವಗಳ ಮೇಲೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಹೀಗೆ, ಅಮಾಯಕರ ಜೀವ ಬಲಿಪಡೆಯುವಲ್ಲಿ ಯುದ್ಧ ಫೇಮಸ್. ಎಷ್ಟೋ ಯುದ್ಧಗಳನ್ನ ಮಾಡಿ, ಅದೆಷ್ಟೋ ಅಮಾಯಕರ ಜೀವ ಕಳೆದರೂ ಮನುಷ್ಯನ ಆತ್ಮ ತಣ್ಣಗಾಗಿಲ್ಲ. ಇದೇ ಕಾರಣಕ್ಕೆ ಜಗತ್ತಲ್ಲಿ ಮತ್ತೊಂದು ಮಹಾಯುದ್ಧಕ್ಕೆ ವೇದಿಕೆ ಸಿದ್ಧವಾಗಿದೆ. ಈ ಸಮಯದಲ್ಲೇ ಅಮೆರಿಕ ಅಧ್ಯಕ್ಷರ ಹೇಳಿಕೆ ತಲ್ಲಣ ಸೃಷ್ಟಿಸಿದೆ.
ಅಮೆರಿಕ ಮತ್ತು ರಷ್ಯಾ ನಡುವಿನ ಜಿದ್ದು ಜಗತ್ತನ್ನು ಬಲಿಪಡೆಯಲು ಸಜ್ಜಾಗಿದೆ. ಜಾಗತಿಕ ನಂಬರ್ 1 ಪಟ್ಟಕ್ಕೆ ಇಬ್ಬರೂ ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿ ಒಂದು ಕಡೆ ರಷ್ಯಾದ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ್ದರೆ, ಇನ್ನೊಂದು ಕಡೆ ಇಸ್ರೇಲ್ & ಹಮಾಸ್ ಉಗ್ರರ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಸೇನೆ ಪರವಾಗಿ ನಿಂತಿದೆ. ಹೀಗೆ ಜಗತ್ತು ಎರಡು ಭಾಗವಾಗಿ ಹೋಗುತ್ತಿದೆ. ಇಷ್ಟೆಲ್ಲಾ ಮಹತ್ವದ ಬೆಳವಣಿಗೆ ನಡೆಯುವಾಗ, ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ & ಹಮಾಸ್ ಉಗ್ರರ ನಡುವಿನ ಈ ಯುದ್ಧದಲ್ಲಿ ಭಾರತದ ಹೆಸರನ್ನು ಎಳೆದು ತಂದಿದ್ದಾರೆ.

ಯುದ್ಧದಲ್ಲಿ ಭಾರತದ ಹೆಸರು ಏಕೆ?
ಅಂದಹಾಗೆ 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' ಯೋಜನೆ ಘೋಷಣೆ ಕೂಡ ಈಗಿನ ಯುದ್ಧಕ್ಕೆ ಒಂದು ಕಾರಣ ಇರಬಹುದು ಅಂತಿದ್ದಾರೆ ಅಮೆರಿಕದ ಅಧ್ಯಕ್ಷರು. ಅಷ್ಟಕ್ಕೂ ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ನಡೆಸಿದ ಭಯೋತ್ಪಾದಕ ದಾಳಿಗೆ ಇದು ಕೂಡ ಒಂದು ಕಾರಣ ಎಂದು ನನಗೆ ಬಲವಾಗಿ ಅನಿಸಿದೆ ಅಂತಾ, ಅಮೆರಿಕದ ಅಧ್ಯಕ್ಷ ಬೈಡನ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಅಲ್ಲದೆ ಭಾರತದ ವಿಚಾರವನ್ನು ಜೋ ಬೈಡನ್ ಪ್ರಸ್ತಾಪ ಮಾಡಿದ್ದು ಏಕೆ ಗೊತ್ತಾ?
ಜಿ20 ಶೃಂಗಸಭೆಯಲ್ಲೇ ತೀರ್ಮಾನ
ಅಷ್ಟಕ್ಕೂ ಭಾರತದ ನೇತೃತ್ವದಲ್ಲಿ ಈ ಬಾರಿಯ ಜಿ20 ಶೃಂಗಸಭೆ ನಡೆದಿತ್ತು. ಹೀಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ನಡುವೆ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಯೋಜನೆ ಘೋಷಣೆ ಆಗಿತ್ತು. ಆದರೆ ಇದೇ ಯೋಜನೆಯ ಕಾರಣಕ್ಕೆ ಯುದ್ಧ ನಡೆದಿರಬಹುದು, ಅಥವಾ ಹಮಾಸ್ ಉಗ್ರರು ದಿಢೀರ್ ಇಸ್ರೇಲ್ ಮೇಲೆ ದಾಳಿ ಮಾಡಲು ಇದು ಒಂದು ಕಾರಣ ಇರಬಹುದು ಅಂತಿದ್ದಾರೆ ಅಮೆರಿಕ ಅಧ್ಯಕ್ಷ. ಹೀಗೆ ಬೈಡನ್ ನೀಡಿರುವ ಹೇಳಿಕೆ ಗೊಂದಲ ಹಾಗೂ ಕುತೂಹಲ ಎರಡನ್ನೂ ಸೃಷ್ಟಿಸಿದೆ.
ಬೈಡನ್ ಮಾತಿನ ಮರ್ಮ ಏನು?
ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧ 5000ಕ್ಕೂ ಹೆಚ್ಚು ರಾಕೆಟ್ ಒಂದೇ ಬಾರಿಗೆ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿದೆ. ಆದರೆ ಈಗ ಯುದ್ಧಕ್ಕೆ ಕಾರಣ ಏನು? ಎಂಬ ಬಗ್ಗೆ ಅಮೆರಿಕ ಅಧ್ಯಕ್ಷರು ನೀಡಿರುವ ಹೇಳಿಕೆ ತಲ್ಲಣ ಸೃಷ್ಟಿಸಿದೆ. ಅಮೆರಿಕ ಪ್ರವಾಸದಲ್ಲಿ ಇರುವ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ, ಬೈಡನ್ ಈ ರೀತಿ ಪ್ರತಿಪಾದನೆ ಮಾಡಿದ್ದಾರೆ. ಈ ಮಾತಿಗೆ ಪೂರಕವಾಗಿ ಆಧಾರಗಳು ಇಲ್ಲದಿದ್ದರೂ ನನಗೆ ಬಲವಾಗಿ ಅನಿಸಿದೆ ಅಂತಿದ್ದಾರೆ ಅಮೆರಿಕ ಅಧ್ಯಕ್ಷ ಬೈಡನ್.

ಒಟ್ನಲ್ಲಿ ಇಸ್ರೇಲ್ & ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಅಮೆರಿಕ ಮಹತ್ವದ ಪಾತ್ರ ವಹಿಸುತ್ತಿದೆ. ಮತ್ತೊಂದು ಕಡೆ ಇದೇ ಕಾರಣಕ್ಕೆ ಅಮೆರಿಕ ಮೇಲೆ ಯುದ್ಧ ನಿಲ್ಲಿಸಿ ಎಂಬ ಒತ್ತಡ ಹೆಚ್ಚಾಗುತ್ತಿದೆ. ಆದರೆ ಇದೆಲ್ಲವೂ ಯಾವಾಗ ಕೊನೆಯಾಗುತ್ತೆ? ಯುದ್ಧ ಯಾವಾಗ ನಿಲ್ಲುತ್ತೆ? ಅಂತಾ ಇಡೀ ಜಗತ್ತು ಕಾಯುತ್ತಿದೆ. ಹಾಗೇ ಜಾಗತಿಕವಾಗಿ ಕೂಡ ಇದೇ ಯುದ್ಧ ಭಾರಿ ಪರಿಣಾಮ ಬೀರುತ್ತಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಇನ್ನು ಹದಗೆಟ್ಟು ಹೋಗ್ತಿದೆ.












Click it and Unblock the Notifications