US Green Card: ಅಮೆರಿಕ ಗ್ರೀನ್ ಕಾರ್ಡ್ ನಿಯಮದಲ್ಲಿ ಭಾರಿ ಬದಲಾವಣೆ; ಭಾರತೀಯರ ಮೇಲಾಗುವ ಪರಿಣಾಮಗಳೇನು?
ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಆಡಳಿತವು ಗ್ರೀನ್ ಕಾರ್ಡ್ (ಶಾಶ್ವತ ನಿವಾಸಿ ಪತ್ರ) ಪಡೆಯುವ ಪ್ರಕ್ರಿಯೆಯಲ್ಲಿ ಕಳೆದ ಅರ್ಧ ಶತಮಾನದಿಂದ ಜಾರಿಯಲ್ಲಿದ್ದ ನಿಯಮವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಹೊಸ ನಿಯಮಗಳ ಪ್ರಕಾರ ಅಮೆರಿಕದಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿರುವ ವಿದೇಶಿಯರು ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾದರೆ, ಅವರು ತಮ್ಮ ಸ್ವದೇಶಕ್ಕೆ ಮರಳಿ ಅಲ್ಲಿಂದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.
ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳ (USCIS) ವಕ್ತಾರ ಜ್ಯಾಕ್ ಕಾಹ್ಲರ್ ಈ ಬಗ್ಗೆ ಮಾಹಿತಿ ನೀಡಿದ್ದು, "ಇನ್ನು ಮುಂದೆ ಅಮೆರಿಕದಲ್ಲಿ ತಾತ್ಕಾಲಿಕವಾಗಿ ಇರುವ ವಿದೇಶಿಗರು ಗ್ರೀನ್ ಕಾರ್ಡ್ ಬಯಸಿದರೆ, ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, ತಮ್ಮ ತಾಯ್ನಾಡಿಗೆ ಮರಳಿ ಅರ್ಜಿ ಸಲ್ಲಿಸುವುದು ಕಡ್ಡಾಯ. ಅರ್ಜಿದಾರರು ತಮ್ಮ ದೇಶದಿಂದಲೇ ಪ್ರಕ್ರಿಯೆ ನಡೆಸುವುದರಿಂದ ಗ್ರೀನ್ ಕಾರ್ಡ್ ತಿರಸ್ಕೃತಗೊಂಡ ನಂತರ ಅಮೆರಿಕದಲ್ಲೇ ಅಕ್ರಮವಾಗಿ ನೆಲೆಸುವವರ ಸಂಖ್ಯೆಯನ್ನು ನಿಯಂತ್ರಿಸಬಹುದು" ಎಂದು ತಿಳಿಸಿದ್ದಾರೆ.

ಭಾರತೀಯರ ಮೇಲಾಗುವ ಪರಿಣಾಮಗಳೇನು?
ಪ್ರಸ್ತುತ ಅಮೆರಿಕದಲ್ಲಿ ಸುಮಾರು 5.2 ದಶಲಕ್ಷಕ್ಕೂ (52 ಲಕ್ಷ) ಹೆಚ್ಚು ಭಾರತೀಯ ಮೂಲದ ಜನರು ವಾಸಿಸುತ್ತಿದ್ದಾರೆ. ಈ ಹೊಸ ಆದೇಶವು ಅಲ್ಲಿರುವ ಸಾವಿರಾರು ಭಾರತೀಯರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದುವರೆಗೆ ಅಮೆರಿಕದ ನಾಗರಿಕರನ್ನು ವಿವಾಹವಾದವರು, ವಿದ್ಯಾರ್ಥಿಗಳು, ಉದ್ಯೋಗ ವೀಸಾ (H-1B ನಂತಹ) ಹೊಂದಿರುವವರು ಅಮೆರಿಕವನ್ನು ತೊರೆಯದೆಯೇ 'ಅಡ್ಜಸ್ಟ್‌ಮೆಂಟ್ ಆಫ್ ಸ್ಟೇಟಸ್' ಮೂಲಕ ಗ್ರೀನ್ ಕಾರ್ಡ್ ಪಡೆಯಬಹುದಿತ್ತು.
ಆದರೆ ಇನ್ನು ಮುಂದೆ ಅವರು ಭಾರತಕ್ಕೆ ಮರಳಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಗ್ರೀನ್ ಕಾರ್ಡ್ ಪ್ರಕ್ರಿಯೆಗೆ ತಿಂಗಳುಗಟ್ಟಲೆ ಸಮಯ ಹಿಡಿಯುವುದರಿಂದ, ಕುಟುಂಬಗಳು ದೀರ್ಘಕಾಲ ದೂರವಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಉನ್ನತ ಶಿಕ್ಷಣ ಮುಗಿಸಿ ಅಲ್ಲಿಯೇ ಉದ್ಯೋಗದ ಆಧಾರದ ಮೇಲೆ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಯೋಜನೆಗಳಿಗೆ ಇದು ದೊಡ್ಡ ಹಿನ್ನಡೆಯಾಗಿದೆ.
ವಿನಾಯಿತಿ ಯಾರಿಗೆ ಸಿಗಬಹುದು?
ಈ ದಿಢೀರ್ ಬದಲಾವಣೆಯು ವಲಸೆ ವಕೀಲರು ಮತ್ತು ವಿದೇಶಿ ನೌಕರರಲ್ಲಿ ತೀವ್ರ ಗೊಂದಲ ಮೂಡಿಸಿದೆ. ವಿಶೇಷವಾಗಿ ಭಾರತೀಯರು ಹೆಚ್ಚಾಗಿ ಅವಲಂಬಿತವಾಗಿರುವ H-1B ವೀಸಾ ಹೊಂದಿರುವ ಐಟಿ ಮತ್ತು ತಾಂತ್ರಿಕ ವೃತ್ತಿಪರರಿಗೆ ಈ ನಿಯಮದಿಂದ ವಿನಾಯಿತಿ ಸಿಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಅಮೆರಿಕದ ಆರ್ಥಿಕತೆಗೆ ಕೊಡುಗೆ ನೀಡುವ ಅಥವಾ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿರುವ ವಿದೇಶಿ ಉದ್ಯೋಗಿಗಳಿಗೆ ಪ್ರಸ್ತುತ ಇರುವ ನಿಯಮದಲ್ಲೇ ಮುಂದುವರಿಯಲು ವಿನಾಯಿತಿ ನೀಡುವ ಸಾಧ್ಯತೆಯಿದೆ ಎಂದು ಯುಎಸ್‌ಸಿಐಎಸ್ ಸುಳಿವು ನೀಡಿದೆ.
ಅಮೆರಿಕದ ಗೃಹ ಭದ್ರತಾ ಇಲಾಖೆಯ ದತ್ತಾಂಶಗಳ ಪ್ರಕಾರ, 2024ರಲ್ಲಿ ಒಟ್ಟು 14 ಲಕ್ಷ ಜನರಿಗೆ ಗ್ರೀನ್ ಕಾರ್ಡ್ ನೀಡಲಾಗಿತ್ತು. ಇದರಲ್ಲಿ 8.2 ಲಕ್ಷಕ್ಕೂ ಹೆಚ್ಚು ಜನರು ಅಮೆರಿಕದ ಒಳಗಡೆಯೇ ಇದ್ದುಕೊಂಡು ತಮ್ಮ ವೀಸಾ ಸ್ಟೇಟಸ್ ಬದಲಾಯಿಸಿಕೊಳ್ಳುವ ಮೂಲಕ ಗ್ರೀನ್ ಕಾರ್ಡ್ ಪಡೆದುಕೊಂಡಿದ್ದರು. ಆದರೆ ಸರ್ಕಾರದ ಪ್ರಕಾರ, ತಾತ್ಕಾಲಿಕ ವೀಸಾಗಳ ಮೇಲೆ ಅಮೆರಿಕಕ್ಕೆ ಬರುವವರು ನಿಗದಿತ ಅವಧಿ ಮತ್ತು ಉದ್ದೇಶ ಮುಗಿದ ನಂತರ ಸ್ವದೇಶಕ್ಕೆ ಮರಳಬೇಕು.
"ತಾತ್ಕಾಲಿಕ ಭೇಟಿಯನ್ನು ಗ್ರೀನ್ ಕಾರ್ಡ್ ಪಡೆಯುವ ಮೊದಲ ಹಂತವಾಗಿ ಬಳಸಿಕೊಳ್ಳಬಾರದು. ಕಾನೂನಿನ ಲೋಪದೋಷಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಈ ಕಠಿಣ ಕ್ರಮ ಅನಿವಾರ್ಯ" ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಇದು ಕಾನೂನುಬದ್ಧ ವಲಸೆಯ ಮೇಲಿನ ಟ್ರಂಪ್ ಸರ್ಕಾರದ ಮತ್ತೊಂದು ಪ್ರಮುಖ ನಿಯಂತ್ರಣ ಕ್ರಮವಾಗಿದೆ.













Click it and Unblock the Notifications