ರಷ್ಯಾ ವಿಚಾರದಲ್ಲಿ ಮತ್ತೆ ರೊಚ್ಚಿಗೆದ್ದ ಅಮೆರಿಕ, ಯಾಕೆ ಗೊತ್ತಾ?
ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ಆರಂಭವಾಗಿ ಇನ್ನೇನು ಇದೇ ಫೆಬ್ರವರಿಗೆ 2 ವರ್ಷ ತುಂಬಲಿದೆ. ಹೀಗಿದ್ದಾಗ ಯುದ್ಧ ನಿಲ್ಲಿಸಲು ಮಾಡುತ್ತಿರುವ ಪ್ರಯತ್ನಗಳು ಠುಸ್ ಪಟಾಕಿ ಆಗುತ್ತಿವೆ. ಮತ್ತೊಂದು ಕಡೆ, ಉಕ್ರೇನ್‌ಗೆ ಸಹಾಯ ಮಾಡಲು ಅಮೆರಿಕದ ಕೈಯಲ್ಲಿ ಕಾಸಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಗೊಂದಲದ ಮಧ್ಯೆ ಇದೀಗ ರಷ್ಯಾ ವಿರುದ್ಧ ಅಮೆರಿಕ ಮತ್ತೆ ರೊಚ್ಚಿಗೆದ್ದಿದೆ.
ಹೌದು ಉಕ್ರೇನ್ ವಿರುದ್ಧ ರಷ್ಯಾ ಸೇನೆ ನಡೆಸುತ್ತಿರುವ ದಾಳಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪ ಹಿನ್ನೆಲೆ ರಷ್ಯಾ, ಚೀನಾ, ಟರ್ಕಿ & ಯುಎಇಗೆ ಸೇರಿದ ನೂರಾರು ವ್ಯಕ್ತಿಗಳು ಮತ್ತು ಕಂಪನಿಗಳ ವಿರುದ್ಧ ಅಮೆರಿಕ ಗರಂ ಆಗಿದೆ. ಹೀಗಾಗಿ ಇವರ ಮೇಲೆ ಅಮೆರಿಕ ಹೊಸ ಆರ್ಥಿಕ ಹಾಗೂ ರಾಜತಾಂತ್ರಿಕ ನಿರ್ಬಂಧ ಹೇರಿದೆ. ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿಯು ಅಮೆರಿಕ ಭೇಟಿಯಲ್ಲಿ ಇದ್ದು, ವಾಷಿಂಗ್ಟನ್‌ಗೆ ಬಂದಿಳಿದ ಬೆನ್ನಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆಡಳಿತ ಈ ನಿರ್ಬಂಧ ಹೇರಿ ಆದೇಶ ಹೊರಡಿಸಿರುವುದು ಗಮನ ಸೆಳೆದಿದೆ.

ಏನ್ ನಡೀತಾ ಇದೆ ಗೊತ್ತಾ?
ಅಂದಹಾಗೆ 2022ರ ಫೆಬ್ರವರಿ ತಿಂಗಳಲ್ಲಿ ಆರಂಭವಾದ ರಷ್ಯಾ VS ಉಕ್ರೇನ್ ಯುದ್ಧ ಇಂದಿಗೂ ಧಗಧಗಿಸ್ತಿದೆ. ಲಕ್ಷಾಂತರ ಜನರ ಬಲಿ ತೆಗೆದುಕೊಂಡಿರುವ ಈ ಯುದ್ಧ ತಣ್ಣಗಾಗುತ್ತಿಲ್ಲ. ಇದೇ ಸಮಯದಲ್ಲಿ ರಷ್ಯಾ ಕೂಡ ತನ್ನ ಅಟ್ಯಾಕ್ ಮತ್ತಷ್ಟು ಭೀಕರಗೊಳಿಸಿ ಶತ್ರು ಮೇಲೆ ಎರಗುತ್ತಿದೆ. ಅಮೆರಿಕ ಈ ಸಿಟ್ಟಿಗೆ ರಷ್ಯಾ ಜೊತೆ ಕೈಜೋಡಿಸಿದ ದೇಶಗಳ ವಿರುದ್ಧ ಕ್ರಮಕ್ಕೂ ಮುಂದಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ರಷ್ಯಾ ಇನ್ನಷ್ಟ ಉಗ್ರವಾಗುತ್ತಿದೆ.
ನಿಲ್ಲುತ್ತಾ ಅಮೆರಿಕದ ನೆರವು?
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 658 ದಿನಗಳೇ ಕಳೆದಿದೆ. ಸುಮಾರು ಒಂದು ಮುಕ್ಕಾಲು ವರ್ಷದಲ್ಲಿ ಅಮೆರಿಕದಿಂದ, 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಹಾಯನ ಉಕ್ರೇನ್ ಸೇನೆ ಪಡೆದಿದೆ. ಅಮೆರಿಕದ ಒಳಗಡೆ ಭಾರಿ ವಿರೋಧ ವ್ಯಕ್ತವಾಗಿದ್ದು ಶೀಘ್ರದಲ್ಲಿ ಅಮೆರಿಕ ಸರ್ಕಾರ ಉಕ್ರೇನ್‌ಗೆ ನೀಡುತ್ತಿರುವ ನೆರವು ಸಂಪೂರ್ಣ ನಿಲ್ಲಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ಮತ್ತೊಮ್ಮೆ ದೊಡ್ಡಣ್ಣ ಅಮೆರಿಕದ ನಾಡಿಗೆ ಭೇಟಿ ನೀಡಿದ್ದು, ಸಂಧಾನ ನಡೆಯುವ ಸಾಧ್ಯತೆ ಇದೆ.

ದೀರ್ಘ ಕಾಲದ ಯುದ್ಧಕ್ಕೆ ಸಿದ್ಧತೆ?
ಒಟ್ನಲ್ಲಿ ಕೋಳಿ ಜಗಳದ ರೀತಿ ಶುರುವಾಗಿದ್ದ ರಷ್ಯಾ, ಉಕ್ರೇನ್ ಯುದ್ಧ ಎರಡು ವರ್ಷಗಳ ಕಡೆ ಪಯಣ ಬೆಳೆಸಿದೆ. ಮುಂದಿನ 10 ವರ್ಷದಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ, ಎನ್ನುವ ಮುನ್ಸೂಚನೆ ಸಿಕ್ಕಿದೆ. ಅಮೆರಿಕ ಕೂಡ ಶಾಂತಿ ಮಾತುಕತೆಗೆ ಬದಲಾಗಿ ಉಕ್ರೇನ್‌ಗೆ ಅಸ್ತ್ರಗಳನ್ನು ನೀಡುತ್ತಿದೆ. ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿವೆ. ಅಮೆರಿಕ ಈಗಾಗಲೇ ಭಾರಿ ಪ್ರಮಾಣದಲ್ಲಿ ಉಕ್ರೇನ್ ಸೇನೆಗೆ ಮಿಲಿಟರಿ ನೆರವು ನೀಡಿದ್ದು, ಇದೀಗ ಮತ್ತೊಮ್ಮೆ ದೊಡ್ಡ ಮೊತ್ತದ ಸಹಾಯಕ್ಕೆ ಪ್ರಯತ್ನಿಸುತ್ತಿದೆ.












Click it and Unblock the Notifications