Iran: ಯುದ್ಧಕ್ಕೆ ಸಿದ್ಧವಾಗುತ್ತಿದೆಯಾ ದೊಡ್ಡಣ್ಣ ಅಮೆರಿಕ? ಮಧ್ಯಪ್ರಾಚ್ಯದ ಕಡೆಗೆ ಬೃಹತ್ ಯುದ್ಧ ಹಡಗು ರವಾನೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ವಾರ್ನಿಂಗ್ ಕೊಟ್ಟು ಸೇನಾ ಕಾರ್ಯಾಚರಣೆಯ ಸಾಧ್ಯತೆ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ಎಚ್ಚರಿಸಿದ್ದರು. ಆದರೆ ನಿನ್ನೆಯಷ್ಟೇ ಮತ್ತೊಂದು ಸ್ಪಷ್ಟನೆ ನೀಡಿ ಈಗ ಅಂತಹ ಕ್ರಮದ ಬಗ್ಗೆ ಚಿಂತಿಸಿಲ್ಲ ಎಂದಿದ್ದು ಇರಾನ್ ಜನರನ್ನು ಒಂದಷ್ಟು ನಿರಾಳರಾಗುವ ರೀತಿ ಮಾಡಿತ್ತು. ಆದರೆ ಹೀಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸೇನಾ ಕಾರ್ಯಾಚರಣೆ ಇಲ್ಲ ಎಂಬ ಬಗ್ಗೆ ಹೇಳಿಕೆ ಕೊಟ್ಟ ಕೆಲವೇ ಗಂಟೆಗಳಲ್ಲಿ ಮಹತ್ವದ ಘಟನೆ ಸಂಭವಿಸಿದೆ. ಮಧ್ಯಪ್ರಾಚ್ಯದ ಕಡೆಗೆ ಬೃಹತ್ ಯುದ್ಧ ಹಡಗು ರವಾನೆ ಮಾಡಿರುವ ಅಮೆರಿಕ ಏನೋ ದೊಡ್ಡದಾಗಿ ಪ್ಲಾನ್ ಮಾಡಿದಂತೆ ಕಾಣ್ತಿದೆ.
ಮಧ್ಯಪ್ರಾಚ್ಯ ಭಾಗದಲ್ಲಿ ಈಗ ಒಂದಾದ ನಂತರ ಒಂದೊಂದು ಯುದ್ಧಗಳು ಆರಂಭ ಆಗುತ್ತಲೇ ಇವೆ. ಅಮೆರಿಕ ಮತ್ತು ಇರಾನ್ ನಡುವೆ ಎಲ್ಲವೂ ಸರಿಯಾಗಿಲ್ಲ, ಇಬ್ಬರೂ ಯಾವುದೇ ಸಮಯದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಭೀಕರ ದಾಳಿ ಮಾಡಿ ಯುದ್ಧಕ್ಕೆ ನಾಂದಿ ಹಾಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗ ಅಮೆರಿಕ ಬಳಿ ಇರುವ ಬೃಹತ್ ಹಾಗೂ ವಿನಾಶಕಾರಿ ಯುದ್ಧ ಹಡಗು ಮಧ್ಯಪ್ರಾಚ್ಯದತ್ತ ಪ್ರಯಾಣ ಬೆಳೆಸಿದೆ. ಈ ಮೂಲಕ ಗುಟ್ಟಾಗಿ ಅಮೆರಿಕ ಏನೋ ದೊಡ್ಡದಾಗಿ ಪ್ಲಾನ್ ಮಾಡಿದೆಯಾ?ಎಂಬ ಅನುಮಾನ ಸಹಜವಾಗಿಯೇ ಇಡೀ ಜಗತ್ತನ್ನು ಕಾಡುತ್ತಿದೆ.

ಯುದ್ಧ ವಿಮಾನ ಹೊತ್ತೊಯ್ಯುವ ಹಡಗು
ಇರಾನ್ ದೇಶದಲ್ಲಿ ಅತಿದೊಡ್ಡ ಪ್ರತಿಭಟನೆಗಳು ನಡೆಯುತ್ತಿದ್ದು, ಸರ್ಕಾರದ ವಿರುದ್ಧ ಜನರು ಭಾರಿ ದೊಡ್ಡ ಪ್ರಮಾಣದಲ್ಲಿ ರೊಚ್ಚಿಗೆದ್ದು ಹೋರಾಟ ಶುರು ಮಾಡಿದ್ದಾರೆ. ಇಂತಹ ಸಮಯದಲ್ಲೇ ಅತ್ತ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಮಿಲಿಟರಿ ದಾಳಿ ಮೂಲಕ ತನ್ನ ಆಜನ್ಮ ವೈರಿಯಂತೆ ಇರುವ ಇರಾನ್ ಕಥೆ ಮುಗಿಸಲು ಸಿದ್ಧವಾಗಿದೆಯಾ? ಎಂಬ ಚರ್ಚೆ ಶುರುವಾಗಿತ್ತು. ಹೀಗಿದ್ದಾಗಲೇ ಅಮೆರಿಕ ಸೇನೆಯ ಬೃಹತ್ ಶಕ್ತಿ ಎಂದು ಕರೆಯಲಾಗುವ ಸೇನಾ ಹಡಗು ಮಧ್ಯಪ್ರಾಚ್ಯ ಕಡೆಗೆ ಎಂಟ್ರಿ ಕೊಡುತ್ತಿದೆ. ಯುಎಸ್ಎಸ್ ಅಬ್ರಹಾಂ ಲಿಂಕನ್ ದಕ್ಷಿಣ ಚೀನಾ ಸಮುದ್ರ ತೊರೆದು ಪಶ್ಚಿಮ ಏಷ್ಯಾಗೆ ತೆರಳುತ್ತಿದೆ. ಇದು ಯುದ್ಧ ವಿಮಾನ ಹೊತ್ತೊಯ್ಯುವ ಸಾಮರ್ಥ್ಯ ಸೇರಿ ಹಲವು ವೈಶಿಷ್ಟ್ಯತೆ ಹೊಂದಿದೆ.
ಇರಾನ್ ವಿರುದ್ಧ ದಾಳಿಗೆ ಅಮೆರಿಕ ಸಿದ್ಧತೆ?
ಯುದ್ಧ ವಿಮಾನ ಹೊತ್ತೊಯ್ಯುವ ಸಾಮರ್ಥ್ಯದ ಜೊತೆಗೆ ಯುದ್ಧ ಕಾಲದಲ್ಲಿ ಬೇಕಾಗಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಯುಎಸ್ಎಸ್ ಅಬ್ರಹಾಂ ಲಿಂಕನ್ ಒದಗಿಸುತ್ತದೆ. ಈ ಕಾರಣಕ್ಕೆ ಅಮೆರಿಕ ಸೇನೆಯ ನಡೆ ಮತ್ತೊಮ್ಮೆ ಭಾರಿ ಕುತೂಹಲ ಕೆರಳಿಸಿದೆ, ಈಗಾಗಲೇ ಟ್ರಂಪ್ ಅವರು ಇರಾನ್ ಮೇಲೆ ಸೇನಾ ಕಾರ್ಯಾಚರಣೆ ಇಲ್ಲ ಎಂದು ಹೇಳಿದ್ದರೂ ಪರಿಸ್ಥಿತಿ ಮಾತ್ರ ಸೂಕ್ಷ್ಮವಾಗಿದೆ. ಹೀಗಾಗಿ ಯಾವ ಕ್ಷಣದಲ್ಲಿ ಬೇಕಾದರೂ ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧ ಶುರುವಾದರೆ ಅಚ್ಚರಿ ಏನಿಲ್ಲ. ಮತ್ತೊಂದು ಕಡೆ ಮಧ್ಯಪ್ರಾಚ್ಯ ಭಾಗದ ಇತರ ದೇಶಗಳು ಕೂಡ ಈ ವಿಚಾರದಲ್ಲಿ ಅಲರ್ಟ್ ಆಗಿದ್ದು, ಅಕಸ್ಮಾತ್ ಇರಾನ್ ಪ್ರತಿದಾಳಿ ನಡೆಸಿದರೆ ಅದನ್ನು ಎದುರಿಸಲು ಪೂರ್ವಸಿದ್ಧತೆ ನಡೆಸಿವೆ.












Click it and Unblock the Notifications