Breaking News: ಯುಕೆಯಲ್ಲಿ ಒಂದೇ ದಿನ 1,06,122 ಮಂದಿಗೆ ಕೊರೊನಾವೈರಸ್!
ಲಂಡನ್, ಡಿಸೆಂಬರ್ 22: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಯುನೈಟೆಡ್ ಕಿಂಗ್ ಡಮ್ ತತ್ತರಿಸಿದೆ. ಕಳೆದ 24 ಗಂಟೆಗಳಲ್ಲಿ ವರದಿ ಆಗಿರುವ ಕೊವಿಡ್-19 ಪ್ರಕರಣಗಳು ಹೊಸ ದಾಖಲೆ ಬರೆದಿವೆ.
ಯುನೈಟೆಡ್ ಕಿಂಗ್‌ಡಮ್ ನಲ್ಲಿ ಒಂದೇ ದಿನ 1,06,122 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ ಮಹಾಮಾರಿಗೆ 140 ಮಂದಿ ಪ್ರಾಣ ಬಿಟ್ಟಿದ್ದರೆ, 49,382 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುವಿಕೆ ಭೀತಿ ನಡುವೆ ಹೊಸ ಪ್ರಕರಣಗಳಲ್ಲಿನ ಏರಿಕೆ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,16,47,473ಕ್ಕೆ ಏರಿಕೆಯಾಗಿದ್ದು, ಈವರೆಗೂ 1,47,573 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

ಯುಕೆಯಲ್ಲಿ ಓಮಿಕ್ರಾನ್ ಸೋಂಕಿನ ಭೀತಿ:
ಯುನೈಟೆಡ್ ಕಿಂಗ್‌ಡಮ್ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಡಿಸೆಂಬರ್ 20ರ ವೇಳೆಗೆ 45,000ಕ್ಕೂ ಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 129 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರೆ, ಮಹಾಮಾರಿಗೆ 14 ಮಂದಿ ಪ್ರಾಣ ಬಿಟ್ಟಿದ್ದಾರೆ. ಯುಕೆಯಲ್ಲಿ ವಾರದಿಂದ ವಾರಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.61ರಷ್ಟು ಏರಿಕೆ ಕಂಡು ಬಂದಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಶೇ.6ರಷ್ಟು ಏರಿಕೆಯಾಗಿದೆ.
ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ವೆಲ್‌ಕಮ್ ಸೆಂಟರ್ ಫಾರ್ ಹ್ಯೂಮನ್ ನ್ಯೂರೋಇಮೇಜಿಂಗ್‌ನ ಪ್ರಕಾರ, ಯುಕೆಯಲ್ಲಿ ಕೋವಿಡ್-ಸಂಬಂಧಿತ ಸಾವುಗಳು ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯು ಜನವರಿ ಮೊದಲ ವಾರದಲ್ಲಿ ಗರಿಷ್ಠ ಮಟ್ಟಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ದಿನಕ್ಕೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 919ರಷ್ಟಿದ್ದು, ಜನವರಿ 7ರ ವೇಳೆಗೆ ಅದು 1,200ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಅದೇ ರೀತಿ ಸಾವಿನ ಸಂಖ್ಯೆಯು ಇಂದು 112ರ ಆಸುಪಾಸಿನಲ್ಲಿದ್ದು ಅದು, 137ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.












Click it and Unblock the Notifications