ರಷ್ಯಾ-ಉಕ್ರೇನ್ ಜಗಳದಲ್ಲಿ ಪ್ರಪಂಚವೇ ನಾಶವಾಗೋದು ಪಕ್ಕಾ!
ಮಾಸ್ಕೋ: ರಷ್ಯಾ-ಉಕ್ರೇನ್ ನಡುವೆ ಯುದ್ಧ ಶುರುವಾದ ಮರುದಿನದಿಂದ ಜಗತ್ತಿಗೆ ಒಂದಲ್ಲ ಒಂದು ಕಂಟಕ ಎದುರಾಗುತ್ತಿದೆ. ಅದರಲ್ಲೂ ಪರಮಾಣು ಯುದ್ಧದ ಕಾರ್ಮೋಡ ಆವರಿಸಿರುವಾಗಲೇ ಉಕ್ರೇನ್ ಮಹಾ ಎಡವಟ್ಟು ಮಾಡಿಕೊಂಡಿದ್ದು, ಜಪೋರಿಝಿಯಾ ಪರಮಾಣು ಸ್ಥಾವರದ ಬಳಿ ಉಕ್ರೇನ್‌ಗೆ ಸೇರಿದ ಸೂಸೈಡ್ ಡ್ರೋನ್ ಪತನವಾಗಿದೆ. ಇದರಿಂದ ಪರಮಾಣು ಸ್ಥಾವರಕ್ಕೆ ಹಾನಿಯಾಗಿ ವಿಕಿರಣ ಸೋರಿಕೆ ಆಗಿರುವ ಬಗ್ಗೆ ರಷ್ಯಾ ಆಕ್ರೋಶ ಹೊರಹಾಕಿದೆ.
ಕಳೆದ ವರ್ಷ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ್ದಾಗ ರಷ್ಯಾ ವಾಯು ಸೇನೆ ಜಪೋರಿಝಿಯಾ ಅಣುಸ್ಥಾವರದ ಮೇಲೆ ದಾಳಿ ನಡೆಸಿದೆ ಎಂದು ಖುದ್ದಾಗಿ ಉಕ್ರೇನ್ ಆರೋಪ ಮಾಡಿತ್ತು. ಆದರೆ ಈಗ ನೋಡಿದರೆ ತನ್ನದೇ ನೆಲದ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸಿದೆ ಉಕ್ರೇನ್. ಅಕಸ್ಮಾತ್ ಡ್ರೋನ್ ಪತನದಿಂದ ಜಪೋರಿಝಿಯಾ ಪರಮಾಣು ಸ್ಥಾವರ ಸ್ಫೋಟಗೊಂಡಿದ್ದರೆ ಇಡೀ ಜಗತ್ತಿಗೇ ಗಂಡಾಂತರ ಎದುರಾಗುತ್ತಿತ್ತು.

ಅತಿ ದೊಡ್ಡ ಅಣುಸ್ಥಾವರ: ಅಂದಹಾಗೆ ಯೂರೋಪಿನ ಅತಿ ದೊಡ್ಡ ಅಣುಸ್ಥಾವರ ಜಪೋರಿಝಿಯಾ ನ್ಯೂಕ್ಲಿಯರ್ ಪ್ಲಾಂಟ್. 2022ರ ಮಾರ್ಚ್ ತಿಂಗಳಲ್ಲಿ ಇದೇ ಉಕ್ರೇನ್ ತನ್ನ ಅಣುಸ್ಥಾವರದ ಮೇಲೆ ರಷ್ಯಾ ಸೇನೆಯಿಂದ ದಾಳಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿತ್ತು. ಬೇರೆಯವರ ಮೇಲೆ ಬೆರಳು ತೋರಿಸಿ ಆರೋಪ ಹೊರಿಸಿದ್ದ ದೇಶವೇ ಈಗ ತನ್ನದೇ ಅಣುಸ್ಥಾವರದ ಮೇಲೆ ಅಟ್ಯಾಕ್ ಮಾಡಿ ಲಾಕ್ ಆಗಿದೆ.
ಉಕ್ರೇನ್ ಮಾನ ಹರಾಜು?: ರಷ್ಯಾ ಇದೇ ಕ್ಷಣಕ್ಕಾಗಿ ಕಾದು ಕುಳಿತಂತೆ ಕಾಣುತ್ತಿದೆ. ಉಕ್ರೇನ್ ಮಾಡಿರುವ ತಪ್ಪನ್ನು ಇಡೀ ಜಗತ್ತಿಗೇ ತೋರಿಸಲು ರಷ್ಯಾ ಮುಂದಾಗಿದೆ. ರಷ್ಯಾ ಮಿಲಿಟರಿ ಅಧಿಕಾರಿಗಳು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಜಪೋರಿಝಿಯಾ ಅಣುಸ್ಥಾವರದ ಮೇಲೆ ಬಿದ್ದಿರುವ ಸೂಸೈಡ್ ಡ್ರೋನ್ ಪೋಲ್ಯಾಂಡ್‌ನಲ್ಲಿ ನಿರ್ಮಿಸಲಾಗಿದೆ. ಹಾಗೂ ಉದ್ದೇಶಪೂರ್ವಕವಾಗಿ ಈ ಘಟನೆ ನಡೆದಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಭಾರಿ ಕಟ್ಟೆಚ್ಚರ: ನ್ಯೂಕ್ಲಿಯರ್ ಪ್ಲಾಂಟ್ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ವಿಕಿರಣ ಸೋರಿಕೆ ಉಂಟಾಗಿರಬಹುದು ಎಂಬ ಅನುಮಾನ ಮೂಡಿದೆ. ಹೀಗಾಗಿ ರಷ್ಯಾ ವಶದಲ್ಲಿರುವ ಜಪೋರಿಝಿಯಾ ನ್ಯೂಕ್ಲಿಯರ್ ಪ್ಲಾಂಟ್ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ. ತಜ್ಞರು ವಿಕಿರಣ ಸೋರಿಕೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಸುತ್ತಮುತ್ತಲ ಜಾಗದಲ್ಲಿ ಜನರ ಓಡಾಟಕ್ಕೂ ನಿರ್ಬಂಧ ಹೇರಲಾಗಿದೆ.
ಚೆರ್ನೊಬಿಲ್‌ಗಿಂತ 10 ಪಟ್ಟು: ಉಕ್ರೇನ್ ಡ್ರೋನ್ ಪತನದಿಂದ ಅಕಸ್ಮಾತ್ ಜಪೋರಿಝಿಯಾ ಅಣುಸ್ಥಾವರ ಸ್ಫೋಟಗೊಂಡಿದ್ದರೆ ಚೆರ್ನೊಬಿಲ್ ದುರಂತಕ್ಕಿಂತ 10 ಪಟ್ಟು ಹೆಚ್ಚು ಸಂಕಷ್ಟ ಜಗತ್ತಿಗೆ ಎದುರಾಗುತ್ತಿತ್ತು. ಹೇಗೆಂದರೆ ಇಡೀ ಜಗತ್ತಿನಲ್ಲಿರುವ ಅತಿದೊಡ್ಡ ಪರಮಾಣು ಸ್ಥಾವರಗಳ ಪೈಕಿ ಜಪೋರಿಝಿಯಾ ಕೂಡ ಒಂದು. ಯುರೋಪಿನ ಅತಿದೊಡ್ಡ ಅಣುಸ್ಥಾವರ ಎಂಬ ಹೆಗ್ಗಳಿಕೆಗೂ ಈ ನ್ಯೂಕ್ಲಿಯರ್ ಪ್ಲಾಂಟ್ ಪಾತ್ರವಾಗಿದೆ. ಪರಿಸ್ಥಿತಿ ಹೀಗಿರುವಾಗ ದೊಡ್ಡ ಸ್ಫೋಟ ಸಂಭವಿಸಿದ್ದರೆ ಗಂಡಾಂತರ ಕಟ್ಟಿಟ್ಟ ಬುತ್ತಿಯಾಗುತ್ತಿತ್ತು.
ವಿಶ್ವಸಂಸ್ಥೆ ಎಂಟ್ರಿ: ವಿಷಯ ತಿಳಿಯುತ್ತಿದ್ದಂತೆ ವಿಶ್ವಸಂಸ್ಥೆ ಕೂಡ ಮಧ್ಯಪ್ರವೇಶ ಮಾಡಿದೆ. ಹಾಗೇ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥರ ಸಮ್ಮುಖದಲ್ಲಿ ರಷ್ಯಾ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಜಪೋರಿಝಿಯಾ ಅಣುಸ್ಥಾವರದ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಲು ಸಿದ್ಧತೆ ಸಾಗಿದ್ದು, ಉಕ್ರೇನ್ ಮಾಡಿದ ಕಿತಾಪತಿಗೆ ಈಗ ಜಗತ್ತೇ ಭಯದಲ್ಲಿ ನಲುಗುವಂತಾಗಿದೆ.
ಸುಮಾರು 1 ವರ್ಷದಿಂದ ಜಪೋರಿಝಿಯಾ ಅಣುಸ್ಥಾವರ ರಷ್ಯಾ ಕಂಟ್ರೋಲ್‌ಗೆ ಬಂದಿದ್ದು, ಉಕ್ರೇನ್ ದಾಳಿಯ ಉದ್ದೇಶವೇನು ಎಂದು ರಷ್ಯಾ ಸೇನೆ ಪ್ರಶ್ನಿಸುತ್ತಿದೆ. ಈಗಾಗಲೇ ಜಗತ್ತು ಪರಮಾಣು ಯುದ್ಧದ ಬಗ್ಗೆ ಆತಂಕಗೊಂಡಿರುವ ಬೆನ್ನಲ್ಲೇ ಜಪೋರಿಝಿಯಾ ಅಣುಸ್ಥಾವರದ ಸಮೀಪ ಸೂಸೈಡ್ ಡ್ರೋನ್ ಪತನವಾಗಿರುವ ಕಹಿಘಟನೆ ಮತ್ತಷ್ಟು ಭಯ ಹುಟ್ಟಿಸಿರುವುದು ಸುಳ್ಳಲ್ಲ.












Click it and Unblock the Notifications