‘ಭಾರತ ವಿಶ್ವಗುರುವಿನ ಸ್ಥಾನ ಅಲಂಕರಿಸಿದೆ’: ದಾರಿಗೆ ಬಂತು ಉಕ್ರೇನ್!
ನವದೆಹಲಿ: ಇಷ್ಟುದಿನ ಭಾರತದ ಬಗ್ಗೆ ಹಿಂದೊಂದು, ಮುಂದೊಂದು ಮಾತನಾಡುತ್ತಿದ್ದ ಉಕ್ರೇನ್ (Ukraine) ದಾರಿಗೆ ಬಂದಂತೆ ಕಾಣುತ್ತಿದೆ. 4 ದಿನಗಳ ವಿಶೇಷ ಭೇಟಿಗೆ ಆಗಮಿಸಿರುವ ಉಕ್ರೇನ್ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ, 'ಭಾರತ ವಿಶ್ವಗುರುವಿನ ಸ್ಥಾನ ಅಲಂಕರಿಸಿದೆ' (Vishwa Guru) ಎಂದಿದ್ದಾರೆ. ಈ ಮೂಲಕ ಭಾರತದ ಅಗತ್ಯತೆ ಉಕ್ರೇನ್‌ಗೆ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಉಕ್ರೇನ್‍ನ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದು ವಿಶೇಷ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ನಂತರ ಇದೇ ಮೊದಲು ಪೂರ್ವ ಯುರೋಪ್ ರಾಷ್ಟ್ರದ ಪ್ರತಿನಿಧಿಯೊಬ್ಬರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಎಮಿನಿ ಝಪರೋವಾ ಮೊದಲಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಂಜಯ್ ವರ್ಮಾ ಅವರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಭಾರತದ ಸಾಧನೆಯನ್ನು ಹಾಡಿ ಹೊಗಳಿದ್ದಾರೆ.

'ಭಾರತವೇ ವಿಶ್ವಗುರು' ಎಂದ ಎಮಿನಿ
ಭಾರತ ಹಾಗೂ ಉಕ್ರೇನ್ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ, ಭಾರತದ ಜೊತೆ ಪಯಣಿಸುವುದು ಉಕ್ರೇನ್‌ಗೆ ಬಹುಮುಖ್ಯವಾದ ಸಂಗತಿ. ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿದ್ದು, ವಿಶ್ವ ಗುರುವಿನ ಸ್ಥಾನವನ್ನು ಅಲಂಕರಿಸಿದೆ ಎನ್ನುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಬೆಳೆದು ನಿಂತಿರುವ ಪರಿಯನ್ನು ವಿವರಿಸಿದ್ದಾರೆ. ಇದೇ ವೇಳೆ ಹಲವು ದ್ವಿಪಕ್ಷೀಯ ವಿಚಾರಗಳು ಹಾಗೂ ವ್ಯಾಪಾರ ಸಂಬಂಧಿ ವಿಷಯಗಳು ಚರ್ಚೆಯಾದವು.
ಭಾರತಕ್ಕೆ ನಾವು ಒತ್ತಾಯ ಮಾಡಲ್ಲ!
ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ನಂತರ ಭಾರತ ಭಾರಿ ಪ್ರಮಾಣದಲ್ಲಿ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ರಷ್ಯಾದೊಂದಿಗೆ ಅನೇಕ ವ್ಯಾಪಾರ ಸಂಬಂಧಗಳು ಕಳೆದ ಒಂದು ವರ್ಷದಲ್ಲಿ ವೃದ್ಧಿಸಿವೆ. ಈ ಕುರಿತು ಕೂಡ ಎಮಿನಿ ಝಪರೋವಾ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ತನ್ನ ಆರ್ಥಿಕ ಸಂಬಂಧಗಳನ್ನು ಯಾವ ರಾಷ್ಟ್ರದ ಜೊತೆಗೆ ಬೇಕಾದರೂ ಹೊಂದಬಹುದು. ಈ ಬಗ್ಗೆ ಉಕ್ರೇನ್ ಯಾವುದೇ ರೀತಿ ಒತ್ತಾಯ ಮಾಡುವುದಿಲ್ಲ ಅಥವಾ ಒತ್ತಡವನ್ನೂ ಹೇರಲು ಆಗುವುದಿಲ್ಲ ಎನ್ನುವ ಮೂಲಕ ರಷ್ಯಾ ಜೊತೆಗಿನ ಭಾರತದ ವ್ಯಾಪಾರ ಸಂಬಂಧಕ್ಕೆ ಉಕ್ರೇನ್ ಅಡ್ಡಿಯಿಲ್ಲ ಎಂದಿದ್ದಾರೆ.
ಜಗತ್ತಿನ ಗಮನ ಸೆಳೆದ ಭೇಟಿ!
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಈಗಾಗಲೇ ಬರೋಬ್ಬರಿ 1 ವರ್ಷ ಕಳೆದಿದೆ. ಕೆಲವೇ ವಾರದಲ್ಲಿ ಯುದ್ಧ ಮುಗಿಯಲಿದೆ ಎಂಬ ವಿಶ್ವಾಸದಲ್ಲಿದ್ದ ಜಗತ್ತಿಗೆ ಇದು ಬೇಸರ ತರಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ತಿಕ್ಕಾಟ ಹೆಚ್ಚಾದಷ್ಟು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಾಗಿ ಯುದ್ಧಕ್ಕೆ ಅಂತ್ಯ ಹಾಡಲು ಭಾರತವೂ ಸೇರಿದಂತೆ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಬಳಿ ಉಕ್ರೇನ್ ಮನವಿ ಮಾಡುತ್ತಿದೆ. ಇದೇ ಹೊತ್ತಲ್ಲಿ ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ ಭಾರತಕ್ಕೆ ಬಂದಿರುವುದು ಜಗತ್ತಿನ ಗಮನ ಸೆಳೆದಿದೆ.

ಪ್ರಧಾನಿ ಮೋದಿಗೆ ಉಕ್ರೇನ್ ಆಹ್ವಾನ?
ಈಗಾಗಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಕೂಡ ರಷ್ಯಾ ಜೊತೆ ಮಾತನಾಡಿ ಯುದ್ಧ ಅಂತ್ಯಗೊಳಿಸಲು ಮನವಿ ಮಾಡಿದ್ದಾರೆ. ಹಾಗೇ ಯುರೋಪಿನ ಇತರ ರಾಷ್ಟ್ರಗಳಿಂದಲೂ ಈ ವಿಚಾರದಲ್ಲಿ ಭಾರತ ಮಧ್ಯಪ್ರವೇಶ ಮಾಡಬೇಕು ಎಂಬ ಬೇಡಿಕೆ ಇಟ್ಟಿವೆ. ಪರಿಸ್ಥಿತಿ ಹೀಗೆ ಜಟಿಲವಾಗಿರುವ ಸಂದರ್ಭದಲ್ಲಿ ಭಾರತ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ. ಹಾಗೇ ಉಕ್ರೇನ್‌ಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಮಿನಿ ಆಹ್ವಾನ ನೀಡುವ ಸಾಧ್ಯತೆ ಇದೆ.
ಒಟ್ಟಾರೆ ಉಕ್ರೇನ್ ಭಾರತದ ಜೊತೆ ತನ್ನ ಸಂಬಂಧ ವೃದ್ಧಿಗೆ ಯತ್ನಿಸುತ್ತಿದೆ. ಈ ಹಿಂದೆ ರಷ್ಯಾ ಜೊತೆಗೆ ಯುದ್ಧ ಆರಂಭವಾದಾಗ ಭಾರತದ ಬಗ್ಗೆ ಉಕ್ರೇನ್ ಒಂದಷ್ಟು ಮುನಿಸಿಕೊಂಡಿತ್ತು. ಆದರೆ ಈಗ ಉಕ್ರೇನ್ ದಾರಿಗೆ ಬಂದಂತೆ ಕಾಣುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರ ಎಂಬ ಮಾತನ್ನು ಉಕ್ರೇನ್ ಈಗ ಒಪ್ಪಿಕೊಂಡಿದೆ.












Click it and Unblock the Notifications