2000 ಮಕ್ಕಳನ್ನು ರಷ್ಯಾ ಅಪಹರಿಸಿದೆ: ಉಕ್ರೇನ್ ಆರೋಪ
ಕೀವ್, ಮಾರ್ಚ್ 22: ಉಕ್ರೇನ್ ಹಾಗೂ ರಷ್ಯಾದ ನಡುವೆ ಯುದ್ಧವು ಭಾರೀ ಹಾನಿಯನ್ನು ಉಂಟು ಮಾಡುತ್ತಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭ ಮಾಡಿದ ಬಳಿಕ ಹಲವಾರು ಮಂದಿ ಉಕ್ರೇನ್‌ನಿಂದ ಪಲಾಯನ ಮಾಡಿಕೊಂಡಿದ್ದಾರೆ. ಈ ನಡುವೆ ಸುಮಾರು 2000ಕ್ಕೂ ಅಧಿಕ ಮಕ್ಕಳನ್ನು ರಷ್ಯಾವು ಅಪಹರಣ ಮಾಡಿದೆ ಎಂದು ಉಕ್ರೇನ್ ಆರೋಪ ಮಾಡಿದೆ.
ಉಕ್ರೇನ್ ನಿರಾಶ್ರಿತರು ಉಕ್ರೇನ್‌ನ ಬ್ರೋವರಿಯಲ್ಲಿ ತಮ್ಮ ಅಗತ್ಯ ದಾಖಲೆ ಪತ್ರ ಮತ್ತು ವಸ್ತುಗಳನ್ನು ಪರಿಶೀಲಿಸಲು ಉಕ್ರೇನ್ ಪೋಲಿಸರಿಗಾಗಿ ಕಾಯುತ್ತಿದ್ದರು. ಸುಮಾರು 843 ಮಕ್ಕಳು ಸೇರಿದಂತೆ 1,600 ಕ್ಕೂ ಹೆಚ್ಚು ಜನರನ್ನು ಭಾನುವಾರ ಬೋಬ್ರಿಕ್ ಗ್ರಾಮದಿಂದ ಸ್ಥಳಾಂತರ ಮಾಡಲಾಗಿದೆ. ಆದರೆ ಈ ಪ್ರದೇಶ ಈಗ ರಷ್ಯಾದ ಮಿಲಿಟರಿ ನಿಯಂತ್ರಣದಲ್ಲಿದೆ ಎಂದು ವರದಿಯಾಗಿದೆ.
ಮಂಗಳವಾರ, ಮಾರ್ಚ್ 22 ರಂದು, ರಷ್ಯಾವು ಡಾನ್‌ಬಾಸ್ ಪ್ರದೇಶದಿಂದ ಮಕ್ಕಳನ್ನು ಅಪಹರಿಸಿದೆ ಎಂದು ಉಕ್ರೇನ್ ಹೇಳಿದೆ. ಉಕ್ರೇನ್‌ನ ವಿದೇಶಾಂಗ ಸಚಿವಾಲಯದ ಪ್ರಕಾರ, ರಷ್ಯಾ-ನಿಯಂತ್ರಿತ ಡಾನ್‌ಬಾಸ್ ಪ್ರದೇಶದ 2,389 ಮಕ್ಕಳನ್ನು ರಷ್ಯಾಕ್ಕೆ ಕಾನೂನುಬಾಹಿರವಾಗಿ ಗಡೀಪಾರು ಮಾಡಲಾಗಿದೆ.

2014 ರ ರಷ್ಯಾ-ಉಕ್ರೇನಿಯನ್ ಯುದ್ಧದ ನಂತರ ಉಕ್ರೇನ್‌ನಲ್ಲಿರುವ ಡಾನ್‌ಬಾಸ್ ಪ್ರದೇಶದಲ್ಲಿ ಗಮನಾರ್ಹವಾದ ರಷ್ಯಾದ-ಪರ ಪ್ರತ್ಯೇಕತಾವಾದಿಗಳ ಗದ್ದಲ ಕಂಡು ಬಂದಿದೆ. ಪ್ರದೇಶದ ಎರಡು ಘಟಕಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಘಟಕಗಳಾಗಿ ಗುರುತಿಸಿದ ನಂತರ ಈ ಪ್ರದೇಶದಲ್ಲಿ ಪ್ರತ್ಯೇಕತಾವಾದಿಗಳ ದಾಳಿ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ರಷ್ಯಾ ಪ್ರಮುಖವಾಗಿ ಉಕ್ರೇನ್‌ನ ಮಕ್ಕಳನ್ನು ಗುರಿಯಾಗಿಸಿಕೊಂಡಿದೆ. ಹಲವಾರು ಉಕ್ರೇನ್ ಮಕ್ಕಳನ್ನು ಅಪಹರಣ ಮಾಡಿದೆ ಎಂದು ಸರಣಿ ಆರೋಪವನ್ನು ಉಕ್ರೇನ್ ಮಾಡಿದೆ. ಕಳೆದ ವಾರ, ಉಕ್ರೇನ್ ಮಾರಿಯುಪೋಲ್‌ನ ಥಿಯೇಟರ್‌ಗೆ ರಷ್ಯಾ ಬಾಂಬ್ ದಾಳಿ ನಡೆಸಿದೆ ಎಂದು ಹೇಳಿತ್ತು. ಅಲ್ಲಿ ಮಕ್ಕಳು ಸೇರಿದಂತೆ ಅನೇಕರು ಆಶ್ರಯ ಪಡೆದಿದ್ದರ ಎಂದು ತಿಳಿಸಿತ್ತು.
ಉಕ್ರೇನ್‌ನಿಂದ ಪಲಾಯನ ಮಾಡಿದ ಮಕ್ಕಳು ಮಾನವ ಕಳ್ಳಸಾಗಣೆಗೆ ಬಲಿ
ಕಳೆದ ತಿಂಗಳು ರಷ್ಯಾ ಆಕ್ರಮಣ ಮಾಡಿದ ನಂತರ ಸಂಘರ್ಷ ಪೀಡಿತ ಉಕ್ರೇನ್‌ನಿಂದ ಪಲಾಯನ ಮಾಡಿದ 1.5 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಮಾನವ ಕಳ್ಳಸಾಗಣೆಗೆ ಬಲಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಗುಂಪು ಯುನಿಸೆಫ್ ಎಚ್ಚರಿಸಿದೆ.
"ಉಕ್ರೇನ್‌ನಲ್ಲಿನ ಯುದ್ಧವು ಬೃಹತ್ ವಲಸೆ ಮತ್ತು ನಿರಾಶ್ರಿತರ ಸಂಚಾರಕ್ಕೆ ಕಾರಣವಾಗಿದೆ. ಮಾನವ ಕಳ್ಳಸಾಗಣೆಯಲ್ಲಿ ಗಮನಾರ್ಹ ಏರಿಕೆ ಮತ್ತು ಮಕ್ಕಳ ರಕ್ಷಣೆ ಬಿಕ್ಕಟ್ಟಿಗೆ ಕಾರಣವಾಗುವ ಪರಿಸ್ಥಿತಿಗಳು ಉಂಟಾಗಿದೆ ಎಂದು ಯುನಿಸೆಫ್‌ನ ಯುರೋಪ್ ಮತ್ತು ಮಧ್ಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಅಫ್ಶಾನ್ ಖಾನ್ ಹೇಳಿದ್ದಾರೆ. "ಸ್ಥಳಾಂತರಗೊಂಡ ಮಕ್ಕಳು ತಮ್ಮ ಕುಟುಂಬಗಳಿಂದ ಬೇರ್ಪಟ್ಟು, ಶೋಷಣೆ ಮತ್ತು ಕಳ್ಳಸಾಗಣೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಅವರಿಗೆ ಈ ಪ್ರದೇಶದಲ್ಲಿ ಸರ್ಕಾರಗಳು ಸಹಾಯ ಮಾಡುವ ಅಗತ್ಯವಿದೆ ಮತ್ತು ಅವರನ್ನು ಸುರಕ್ಷಿತವಾಗಿಡಲು ಕ್ರಮಗಳನ್ನು ಕೈಗೊಳ್ಳಬೇಕು," ಎಂದು ಕೂಡಾ ಅಫ್ಶಾನ್ ಖಾನ್ ಹೇಳಿದರು.
ಮಹಿಳೆಯರು ಮತ್ತು ಮಕ್ಕಳು ಇತರ ದೇಶಗಳಿಗೆ ಹೆಚ್ಚಾಗಿ ಪಲಾಯನ ಮಾಡುತ್ತಿದ್ದಾರೆ. ಅನೇಕ ಮಂದಿ ಪುರುಷರು ಉಕ್ರೇನ್‌ನಲ್ಲಿ ಯುದ್ಧದಲ್ಲಿ ತೊಡಗಿರುವ ಕಾರಣದಿಂದಾಗಿ ಹೆಚ್ಚಾಗಿ ಮಕ್ಕಳು ಹಾಗೂ ಮಹಿಳೆಯರು ದೇಶದಲ್ಲಿ ಪಲಾಯನ ಮಾಡುತ್ತಿದ್ದಾರೆ. ಇನ್ನು ಈ ನಡುವೆ ಹಲವಾರು ಮಕ್ಕಳು ಒಬ್ಬಂಟಿಯಾಗಿ ದೇಶದ ಗಡಿಯತ್ತ ಸಾಗಿರುವ ಬಗ್ಗೆ ವರದಿಗಳು ಆಗಿದೆ. ಫೆ.24 ರಿಂದ ಮಾರ್ಚ್ 17 ರವರೆಗೆ 500 ಕ್ಕೂ ಹೆಚ್ಚು ಮಕ್ಕಳು ಉಕ್ರೇನ್‌ನಿಂದ ರೊಮೇನಿಯಾಗೆ ಸಂಚಾರ ಮಾಡಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ. ಈ ಸಂದರ್ಭದಲ್ಲಿ ಮಕ್ಕಳ ಕಳ್ಳಸಾಗಣೆಯ ಭೀತಿ ತೀವ್ರ ಅಧಿಕವಾಗಿದೆ ಎಂದು ವರದಿ ಹೇಳಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications