ರಷ್ಯಾ-ಉಕ್ರೇನ್ ಯುದ್ಧ: 2 ಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ
ಕೀವ್, ಫೆಬ್ರವರಿ 27: ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ದೇಶದಲ್ಲಿ ನಡೆಯುವ ಈ ಯುದ್ಧದ ನಡುವೆ ಈವರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ದೇಶವನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯು ಮಾಹಿತಿಯನ್ನು ನೀಡಿದೆ.
ನೆರೆಯ ದೇಶಗಳಿಗೆ ಆಗಮಿಸುತ್ತಿರುವ ಉಕ್ರೇನಿಯನ್ನರ ಸಂಖ್ಯೆಯು ಈಗ 200,000 ಮೀರಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಹೇಳಿದೆ. ನಿರಾಶ್ರಿತರಿಗಾಗಿ ಯುಎನ್ ಹೈ ಕಮಿಷನರ್ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ರಷ್ಯಾವು ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ.
ಶನಿವಾರದ ಏಜೆನ್ಸಿಯ ಅಂದಾಜಿನ ಪ್ರಕಾರ ಕನಿಷ್ಠ 150,000 ಜನರು ಉಕ್ರೇನ್‌ನಿಂದ ಪೋಲೆಂಡ್ ಮತ್ತು ಹಂಗೇರಿ ಮತ್ತು ರೊಮೇನಿಯಾ ಸೇರಿದಂತೆ ಇತರ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಕಳೆದ 48 ಗಂಟೆಗಳಲ್ಲಿ 100,000 ಕ್ಕೂ ಹೆಚ್ಚು ಉಕ್ರೇನಿಯನ್ನರು ಪೋಲಿಷ್-ಉಕ್ರೇನಿಯನ್ ಗಡಿಯನ್ನು ದಾಟಿದ್ದಾರೆ ಎಂದು ಪೋಲೆಂಡ್ ಸರ್ಕಾರ ಶನಿವಾರ ಹೇಳಿದೆ.

ಈ ಬಗ್ಗೆ ಗುರುವಾರ ಶೆಫರ್ನೇಕರ್ ಪೂರ್ವ ಪೋಲೆಂಡ್‌ನ ಗಡಿ ಗ್ರಾಮವಾದ ಡೊರೊಹಸ್ಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ಉಕ್ರೇನ್‌ನಲ್ಲಿ ಯುದ್ಧ ಆರಂಭವಾದ ಬಳಿಕ 115,000 ಕ್ಕೂ ಹೆಚ್ಚು ಮಂದಿ ಗಡಿಯನ್ನು ದಾಟಿ ಬಂದಿದ್ದಾರೆ," ಎಂದು ತಿಳಿಸಿದ್ದರು. ಶುಕ್ರವಾರವೊಂದರಲ್ಲೇ ಉಕ್ರೇನ್‌ನಿಂದ ಸುಮಾರು 50,000 ಜನರು ಪೋಲೆಂಡ್‌ಗೆ ತೆರಳಿದ್ದಾರೆ ಎಂದು ಪೋಲಿಷ್ ಗಡಿ ಸಿಬ್ಬಂದಿ ಮುಖ್ಯಸ್ಥ ತೋಮಾಸ್ಜ್ ಪ್ರಗಾ ಹೇಳಿದ್ದಾರೆ.
ಉಕ್ರೇನ್‌ನಿಂದ ಪಲಾಯನ ಮಾಡುವವರ ಸಂಖ್ಯೆ ಐದು ಮಿಲಿಯನ್ ಏರಿಕೆ ಸಾಧ್ಯತೆ
ರಷ್ಯಾದ ಆಕ್ರಮಣಕ್ಕೆ ಮುಂಚೆಯೇ ಅಂದಾಜು 1.5 ಮಿಲಿಯನ್ ಉಕ್ರೇನಿಯನ್ನರಿಗೆ ನೆಲೆಯಾಗಿದ್ದ ಪೋಲೆಂಡ್, ತನ್ನ ನೆರೆ ರಾಷ್ಟ್ರ ಉಕ್ರೇನ್‌ಗೆ ಬೆಂಬಲವನ್ನು ವ್ಯಕ್ತಪಡಿಸಿದೆ, ಇದುವರೆಗೆ ಉಕ್ರೇನ್‌ನಿಂದ ಅಧಿಕ ಮಂದಿ ಪೋಲೆಂಡ್‌ಗೆ ತೆರಳಿದ್ದಾರೆ. ಕೆಲವರು ಅಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಇದ್ದರೆ, ಇನ್ನು ಕೆಲವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಪೋಲೆಂಡ್‌ಗೆ ಪ್ರವೇಶಿಸುವ 90 ಪ್ರತಿಶತ ನಿರಾಶ್ರಿತರು ಸ್ನೇಹಿತರು ಅಥವಾ ಕುಟುಂಬದವರ ಮನೆಗಳಂತಹ ಸ್ಥಳಗಳನ್ನು ಹೊಂದಿದ್ದಾರೆ. ಆದರೆ ಉಳಿದವರು ಗಡಿಯಲ್ಲಿ ಸ್ಥಾಪಿಸಲಾದ ಒಂಬತ್ತು ಸ್ವಾಗತ ಕೇಂದ್ರಗಳಲ್ಲಿ ಸಹಾಯವನ್ನು ಪಡೆಯುತ್ತಿದ್ದಾರೆ ಎಂದು ಶೆಫರ್ನೇಕರ್ ಶನಿವಾರ ಹೇಳಿದರು. ಇನ್ನು ಉಕ್ರೇನ್‌ನಿಂದ ಇತರ ದೇಶಗಳಿಗೆ ತೆರಳಿ ಆಶ್ರಯ ಪಡೆಯುವ ಜನರ ಸಂಖ್ಯೆ ಐದು ಮಿಲಿಯನ್‌ಗೆ ಏರಬಹುದು ಎಂದು ಯುಎನ್ ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಆತಂಕಕ್ಕೆ ಒಳಗಾದ ಉಕ್ರೇನ್ನಿಯನ್ನರು ಪಲಾಯನ ಮಾಡಲು ಆರಂಭ ಮಾಡಿದ್ದಾರೆ. ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದ ಆರಂಭದಲ್ಲೇ ಅಂದರೆ 48 ಗಂಟೆಗಳಲ್ಲಿ 50,000 ಕ್ಕೂ ಹೆಚ್ಚು ಉಕ್ರೇನಿಯನ್ನರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್ ಮಾಹಿತಿ ನೀಡಿತ್ತು. ಪೋಲೆಂಡ್, ಸ್ಲೋವಾಕಿಯಾ, ಹಂಗೇರಿ, ರೊಮೇನಿಯಾ ಮತ್ತು ಮೊಲ್ಡೊವಾ ಅಧಿಕಾರಿಗಳು ಈಗಾಗಲೇ ಉಕ್ರೇನಿಯನ್ನರು ಪಲಾಯನ ಮಾಡುವ ಸಾಧ್ಯತೆ ಹಿನ್ನೆಲೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹಲವಾರು ಕಿಲೋಮೀಟರ್‌ಗಳವರೆಗೆ ಆಶ್ರಯ, ಆಹಾರ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಕಾನೂನು ಸಹಾಯವನ್ನು ಕೂಡಾ ಮಾಡಿದೆ.
ಉಕ್ರೇನಿಯನ್ನರು ಕಾಲ್ನಡಿಗೆಯಲ್ಲಿ ಮತ್ತು ಕಾರು ಮತ್ತು ರೈಲಿನ ಮೂಲಕ ಆಗಮಿಸಿದ್ದಾರೆ. ಪೋಲಿಷ್ ಅಧಿಕಾರಿಗಳು ಮತ್ತು ಸ್ವಯಂಸೇವಕರು ಅವರಿಗೆ ಆಹಾರ ಮತ್ತು ಬಿಸಿ ಪಾನೀಯಗಳನ್ನು ನೀಡುತ್ತಿದ್ದಾರೆ. ಉಕ್ರೇನ್ 18 ರಿಂದ 60 ವರ್ಷ ವಯಸ್ಸಿನ ಪುರುಷರನ್ನು ದೇಶವನ್ನು ತೊರೆಯುವುದನ್ನು ನಿಷೇಧಿಸಿದ ನಂತರ ಅದರ ಗಡಿಗೆ ಆಗಮಿಸುವ ಹೆಚ್ಚಿನ ಜನರು ಮಕ್ಕಳು ಹಾಗೂ ಮಹಿಳೆಯರು ಆಗಿದ್ದಾರೆ ಎಂದು ಸ್ಲೋವಾಕ್ ಪೊಲೀಸರು ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications