ಟ್ರಂಪ್ ಜೊತೆಗೆ ಕಿರಿಕ್: ನಾವು ಈಗಲೂ ಅಮೆರಿಕ ಪರವಾಗಿದ್ದೇವೆ ಎಂದ ಉಕ್ರೇನ್ ಅಧ್ಯಕ್ಷ!
ರಷ್ಯಾ & ಉಕ್ರೇನ್ ಬಡಿದಾಟ ನೋಡಿ ಕೆಲವರು ನಿಲ್ಲಿಸಬೇಕು ಅಂತಾ ಪರದಾಡಿದರೆ, ಇನ್ನೂ ಕೆಲವರು ಈ ಯುದ್ಧದಲ್ಲಿ ಚಳಿ ಕಾಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಇದೆ. ಒಂದು ಕಡೆ ಸೋತು ಸುಣ್ಣವಾಗಿರುವ ಉಕ್ರೇನ್ ದೇಶಕ್ಕೆ ಭವಿಷ್ಯ ಮಂಕಾಗಿದೆ, ಹಾಗೇ ಬಹುತೇಕ ತನ್ನ ಭೂಪ್ರದೇಶ ಕಳೆದುಕೊಂಡು ರಷ್ಯಾಗೆ ಒಪ್ಪಿಸಿದೆ. ಈ ಸಮಸ್ಯೆಯ ಸುಳಿ ನಡುವೆ ಅಮೆರಿಕ ಕೂಡ ಉಕ್ರೇನ್ ವಿರುದ್ಧ ತಿರುಗಿಬಿದ್ದಿದೆ.
ಮೊನ್ನೆ ಮೊನ್ನೆ ಅಮೆರಿಕಗೆ ಹೋಗಿದ್ದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೀಗೆ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಕಿರಿಕ್ ಮಾಡಿಕೊಂಡಿದ್ದರು. ಅಲ್ಲದೆ ಅಧ್ಯಕ್ಷರ ಕಚೇರಿ ಬಿಟ್ಟು ದಿಢೀರ್ ಹೊರಬಂದು, ನೇರವಾಗಿ ಉಕ್ರೇನ್‌ಗೆ ವಾಪಸ್ ಆಗಿದ್ದರು ವೊಲೊಡಿಮಿರ್ ಝೆಲೆನ್ಸ್ಕಿ. ಈ ಘಟನೆ ನಂತರ ಅಮೆರಿಕ & ಉಕ್ರೇನ್ ನಡುವಿನ ಸಂಬಂಧ ಹಾಳಾಗಿ ಹೋಯ್ತು ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದರೆ ದಿಢೀರ್ ತನ್ನ ವರಸೆ ಬದಲಾಯಿಸಿ ಅಮೆರಿಕ ಪರವಾಗಿ ಮಾತನಾಡಿದ್ದಾರೆ ಝೆಲೆನ್ಸ್ಕಿ!

ಅಮೆರಿಕಗೆ 'ಜೈ' ಎಂದ ಝೆಲೆನ್ಸ್ಕಿ!
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ 3 ವರ್ಷ ಕಳೆದ ಬೆನ್ನಲ್ಲೇ ಅಮೆರಿಕದ ಜೊತೆಯಲ್ಲಿ ಮಹತ್ವದ ಮಾತುಕತೆಗೆ ಅಂತಾ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶ್ವೇತಭವನಕ್ಕೆ ತೆರಳಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನೆರವು ಸಿಗುವ ನಿರೀಕ್ಷೆಯಲ್ಲಿ ಇದ್ದ ವೊಲೊಡಿಮಿರ್ ಝೆಲೆನ್ಸ್ಕಿಗೆ ಆಘಾತ ಎದುರಾಗಿತ್ತು. ದಿಢೀರ್ ಟ್ರಂಪ್ ಎಚ್ಚರಿಕೆ ನೀಡಿ, ವೊಲೊಡಿಮಿರ್ ಝೆಲೆನ್ಸ್ಕಿಯನ್ನ ಹೊರಗೆ ಕಳುಹಿಸಿದ್ದರು. ಈ ಘಟನೆ ನಂತರ ಯುರೋಪ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ವೊಲೊಡಿಮಿರ್ ಝೆಲೆನ್ಸ್ಕಿ, ಆ ನಂತರ ಮಹತ್ವದ ಹೇಳಿಕೆ ನೀಡಿದ್ದಾರೆ.
ಅಮೆರಿಕ ನೀಡಿರುವ ಸಹಾಯದ ಬಗ್ಗೆ ಮಾತನಾಡಿರುವ ವೊಲೊಡಿಮಿರ್ ಝೆಲೆನ್ಸ್ಕಿ, ನಾವು ಪ್ರತಿದಿನ ಕೂಡ ಅಮೆರಿಕ ಮಾಡಿರುವ ಸಹಾಯವನ್ನು ನೆನಪು ಮಾಡಿಕೊಳ್ಳುತ್ತೇವೆ. ಅಲ್ಲದೆ ಎಂದೆಂದಿಗೂ ನಾವು ಅಮೆರಿಕದ ಸಹಾಯಕ್ಕೆ ಋಣಿಯಾಗಿದ್ದೇವೆ ಎಂದಿದ್ದಾರೆ. ಈ ಮೂಲಕ ಉಕ್ರೇನ್ ಅಧ್ಯಕ್ಷ ಮತ್ತೆ ಅಮೆರಿಕದ ಜೊತೆಗೆ ಹರಿದು ಹೋಗಿರುವ ಸಂಬಂಧಕ್ಕೆ ತೇಪೆ ಹಾಕುವ ಕೆಲಸ ಮಾಡಿದ್ದಾರೆ.












Click it and Unblock the Notifications