ರಷ್ಯಾ ಟ್ಯಾಂಕರ್ ನುಗ್ಗುವುದನ್ನು ತಡೆಯಲು ತನ್ನನ್ನು ತಾನೇ ಸ್ಪೋಟಿಸಿಕೊಂಡ ಉಕ್ರೇನ್ ಯೋಧ
ಕೀವ್, ಫೆ 27: ಮೊದಲೆರಡು ದಿನದ ರಷ್ಯಾ ದಾಳಿಯಿಂದ ಕಂಗೆಟ್ಟು ಹೋಗಿದ್ದ ಉಕ್ರೇನ್ ಸಂಧಾನದ ಮಾತನ್ನು ಆಡಿತ್ತು. ಆದರೆ, ಶನಿವಾರ (ಫೆ 26) ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶಸ್ತ್ರತ್ಯಾಗ ಮಾಡುವುದಿಲ್ಲ, ಕೊನೆಯ ಕ್ಷಣದವರೆಗೆ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.
ದೇಶದ ನಾಗರೀಕರಿಗೆ ರೈಫಲ್ ಅನ್ನು ನೀಡಿರುವ ಉಕ್ರೇನ್ ಸರಕಾರ, ರಷ್ಯಾ ವಿರುದ್ದದ ದಾಳಿಯನ್ನು ತೀವ್ರಗೊಳಿಸಿದೆ. ಕೀವ್ ನಗರವನ್ನು ವಶಪಡಿಸಿಕೊಳ್ಳುವ ರಷ್ಯಾದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಈ ನಡುವೆ, ಉಕ್ರೇನ್ ದೇಶದ ಇತರ ದಿಕ್ಕುಗಳಿಗೂ ಆಕ್ರಮಣ ಮಾಡುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದಾರೆ.
ಉಕ್ರೇನ್ ಪರವಾಗಿ ವಿಶ್ವದ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿದ್ದರೂ, ಮಿಲಿಟರಿ ಸಹಾಯದ ಬಗ್ಗೆ ಯಾವುದೇ ಖಾತ್ರಿ ಆ ದೇಶಕ್ಕೆ ಸಿಗುತ್ತಿಲ್ಲ. ಯುದ್ದದಿಂದ ನಲುಗಿರುವ ಉಕ್ರೇನಿಗೆ ಅಮೆರಿಕಾ ವಿಶೇಷ ಸುರಕ್ಷಾ ನೆರವನ್ನು ಘೋಷಿಸಿದೆ.
ಮೂರನೇ ದಿನದ ಸಮರದ ಸಂದರ್ಭದಲ್ಲಿ ರಷ್ಯಾದ ಟ್ಯಾಂಕರ್ ತನ್ನ ಪ್ರದೇಶದತ್ತ ಬರುವುದನ್ನು ತಪ್ಪಿಸಲು ಉಕ್ರೇನ್ ಯೋಧನೊಬ್ಬ ಆತ್ಮಾಹುತಿ ಮಾಡಿಕೊಂಡ ಘಟನೆ ವರದಿಯಾಗಿದೆ. ಇದು ಉಕ್ರೇನಿನ ದಕ್ಷಿಣ ಭಾಗದಲ್ಲಿ ನಡೆದ ವಿದ್ಯಮಾನವಾಗಿದೆ.

ರಷ್ಯಾ ಸೇನೆ ಉಕ್ರೇನ್ ರಾಜಧಾನಿ ಕೀವ್ ನಗರವನ್ನು ಪ್ರವೇಶ
ರಷ್ಯಾ ಸೇನೆ ಉಕ್ರೇನ್ ರಾಜಧಾನಿ ಕೀವ್ ನಗರವನ್ನು ಪ್ರವೇಶಿಸಿದ್ದರೂ, ಪೂರ್ಣ ಪ್ರಮಾಣದಲ್ಲಿ ವಶ ಪಡಿಸಿಕೊಳ್ಲಲು ಸಾಧ್ಯವಾಗಿಲ್ಲ. ಹೀಗಾಗಿ, ದೇಶದ ಎಲ್ಲಾ ಭಾಗಗಳಿಂದಲೂ ಉಕ್ರೇನ್ ಆಕ್ರಮಿಸುವಂತೆ ಆದೇಶ ನೀಡಲಾಗಿದೆ. ನಮ್ಮ ಟಾರ್ಗೆಟ್ ಸೇನಾನೆಲೆ ಮಾತ್ರ ಸಾರ್ವಜನಿಕರಲ್ಲ ಎಂದು ರಷ್ಯಾ ಪುನರುಚ್ಚಿಸಿದೆ. ಆದರೂ, ವಸತಿ ಸಮುಚ್ಚಯಗಳ ಮೇಲೆ ಕ್ಷಿಪಣಿ ದಾಳಿಯಾಗಿರುವುದು ಕಂಡು ಬಂದಿದೆ.

ದಕ್ಷಿಣ ಭಾಗದ ಖೇರ್ಸನ್ ಪ್ರಾಂತ್ಯದ ಕಡೆಗೆ ಮುನ್ನುಗ್ಗುತ್ತಿದ್ದವು
ರಷ್ಯಾ ಸೇನೆಯ ಟ್ಯಾಂಕರುಗಳು ಮತ್ತು ಪಡೆಗಳು ದಕ್ಷಿಣ ಭಾಗದ ಖೇರ್ಸನ್ ಪ್ರಾಂತ್ಯದ ಕಡೆಗೆ ಮುನ್ನುಗ್ಗುತ್ತಿದ್ದವು. ವೈರಿ ಪಡೆಗಳು ಬರುವುದನ್ನು ವಿಳಂಬಗೊಳಿಸಲು ಉಕ್ರೇನ್ ಯೋಧನೊಬ್ಬ ಆತ್ಮಾಹುತಿ ಮಾಡಿಕೊಂಡಿದ್ದಾನೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ. ಮರೈನ್ ಬೆಟಾಲಿಯನ್‌ನಲ್ಲಿ ಇಂಜಿನಿಯರ್ ಆಗಿರುವ ವಿಟಲಿ ಹೆನಿಚೆಕ್ಸ್ ಅವರನ್ನು ಸೇತುವೆಯ ಸಮೀಪ ಪಹರೆಗೆ ನಿಯೋಜಿಸಲಾಗಿತ್ತು.

ಜೆನಿಚೆಸ್ಕಿ ಸೇತುವೆಯಲ್ಲಿ ಮೈನ್ಸ್ ನೊಂದಿಗೆ ಸ್ಪೋಟಿಸಿ ಆತ್ಮಾಹುತಿ
ರಷ್ಯಾದ ಟ್ಯಾಂಕರುಗಳು ಈ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ವಿಟಲಿ ಹರಸಾಹಸ ಪಟ್ಟಿದ್ದ. ಕೊನೆಗೆ, ಟ್ಯಾಂಕರುಗಳು ಪ್ರವೇಶ ಸಾಧ್ಯವಾಗದಂತೆ ತಡೆಯಲು ಆಯಕಟ್ಟಿನ ಜಾಗಕ್ಕೆ ಆಗಮಿಸಿ, ಜೆನಿಚೆಸ್ಕಿ ಸೇತುವೆಯಲ್ಲಿ ಮೈನ್ಸ್ ನೊಂದಿಗೆ ಸ್ಪೋಟಿಸಿ ಆತ್ಮಾಹುತಿ ಮಾಡಿಕೊಂಡಿದ್ದಾನೆ. ಬೇರೆ ಬೆಟಾಲಿಯನ್ ಜವಾಬ್ದಾರಿ ಈತನ ಮೇಲಿದ್ದರೂ, ಸ್ವಯಂ ಇಲ್ಲಿಗೆ ಬಂದು ಶತ್ರು ಸೇನೆಯನ್ನು ತಡೆಯಲು ವಿಟಲಿ ಹುತಾತ್ಮನಾಗಿದ್ದಾನೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್ ಸೇನೆಯ ಜನರಲ್ ಸ್ಟಾಫ್ ಆಫ್ ಆರ್ಮಡ್ ಫೋರ್ಸ್
"ಈ ಯೋಧನ ಚಾರಿತ್ರಾರ್ಹ ಆತ್ಮಾಹುತಿಯಿಂದಾಗಿ ಶತ್ರು ಸೇನೆಗಳು ನಮ್ಮ ಜಾಗದತ್ತ ಬರುವುದು ವಿಳಂಬವಾಯಿತು. ಇದರಿಂದ, ನಾವು ಮತ್ತೆ ಆ ಜಾಗಕ್ಕೆ ನಮ್ಮ ಸೇನೆಯನ್ನು ಕಳುಹಿಸಲು ಸಾಧ್ಯವಾಯಿತು. ರಷ್ಯಾ ಪಡೆಗಳು ನಮ್ಮತ್ತ ಬರುವುದನ್ನು ವಿಳಂಬ ಮಾಡಲು ಸೇತುವೆಯನ್ನು ಸ್ಫೋಟಿಸಿ, ತಾನೂ ಆತ್ಮಾಹುತಿ ಮಾಡಿಕೊಂಡ"ಎಂದು ಉಕ್ರೇನ್ ಸೇನೆಯ ಜನರಲ್ ಸ್ಟಾಫ್ ಆಫ್ ಆರ್ಮಡ್ ಫೋರ್ಸ್, ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications