ಉಕ್ರೇನ್ ವಿರುದ್ಧ ರಷ್ಯಾ ಡೆಡ್ಲಿ ಅಟ್ಯಾಕ್, 58 ಮಿಸೈಲ್ ಭಸ್ಮ!
ಉಕ್ರೇನ್: ಯುದ್ಧದಲ್ಲಿ ಗೆಲುವಿನ ದಡ ಸೇರಲು ತೊಡೆತಟ್ಟಿ ನಿಂತಿದೆ ರಷ್ಯಾ ಸೇನೆ. ಇದೇ ಕಾರಣಕ್ಕೆ ಉಕ್ರೇನ್ ವಿರುದ್ಧ ಮನಸ್ಸಿಗೆ ಬಂದಂತೆ ದಾಳಿ ಮಾಡುತ್ತಿದೆ. 459 ದಿನಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಭಯಂಕರ ದಾಳಿ ನಡೆಸಿರುವ ರಷ್ಯಾ 59 ಮಿಸೈಲ್‌ಗಳನ್ನ ಉಕ್ರೇನ್ ಕಡೆಗೆ ಹಾರಿಸಿದೆ. 59ರಲ್ಲಿ 58 ಮಿಸೈಲ್ ಆಕಾಶದಲ್ಲೇ ಭಸ್ಮ ಆಗಿವೆ ಅಂತಾ ಉಕ್ರೇನ್ ಹೇಳಿಕೊಂಡಿದೆ.
ರಷ್ಯಾ & ಉಕ್ರೇನ್ ಯುದ್ಧದ ಪರಿಸ್ಥಿತಿ ನೋಡುತ್ತಿದ್ದರೆ ಇನ್ನೂ ಹತ್ತಾರು ವರ್ಷ ಈ ಯುದ್ಧ ಮುಂದುವರಿದು ಲಕ್ಷಾಂತರ ಜನರನ್ನ ಬಲಿ ಪಡೆಯುವ ಮುನ್ಸೂಚನೆ ಸಿಗುತ್ತಿದೆ. ಸಂಧಾನಕ್ಕೆ ರಷ್ಯಾ ಆಗಲಿ, ಉಕ್ರೇನ್ ಆಗಲಿ ಸಿದ್ಧವಿಲ್ಲ. ಹೀಗಾಗಿ ಎರಡೂ ದೇಶಗಳು ಜಿದ್ದಿಗೆ ಬಿದ್ದು ಬಡಿದಾಟ ಶುರುಮಾಡಿವೆ. ಇದೆಲ್ಲವನ್ನೂ ನೋಡ್ತಿದ್ರೆ ಭವಿಷ್ಯದಲ್ಲಿ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಪರಮಾಣು ಕ್ಷಿಪಣಿಗಳನ್ನ ಬಳಸಿದರೂ ಅಚ್ಚರಿ ಬೇಡ. ಇದೀಗ ದಿಢೀರ್ 59 ಕ್ಷಿಪಣಿಗಳನ್ನ ಹಾರಿಸಿ ರಷ್ಯಾ ಮಿಲಿಟರಿ ಉಕ್ರೇನ್‌ಗೆ ಶಾಕ್ ನೀಡಿದೆ (Russia Ukraine War).

59 ಕ್ಷಿಪಣಿಯಲ್ಲಿ 58 ಆಕಾಶದಲ್ಲೇ ಉಡೀಸ್!
ರಷ್ಯಾ ಬಳಿ ಸಾಕಷ್ಟು ರಹಸ್ಯ ಅಸ್ತ್ರ ಇವೆ, ಅದರಲ್ಲೂ ರಷ್ಯಾ ತನ್ನಲ್ಲಿ ಸಾವಿರಾರು ರಹಸ್ಯ ಕ್ಷಿಪಣಿಗಳನ್ನ (Russia Secret Weapons) ಇಟ್ಟುಕೊಂಡಿದೆ. ಇದೀಗ ಅವನ್ನೆಲ್ಲಾ ಹೊರತೆಗೆದು, ತನ್ನ ಶತ್ರು ದೇಶದ ಕಡೆ ನುಗ್ಗಿಸುತ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಕ್ಷಿಪಣಿ ಕಳೆದ 24 ಗಂಟೆಯಲ್ಲಿ ಉಕ್ರೇನ್ ಕಡೆ ನುಗ್ಗಿಬಂದಿವೆ. ಈ ಪೈಕಿ 58 ಕ್ಷಿಪಣಿಗಳನ್ನ ಆಕಾಶದಲ್ಲೇ ಭಸ್ಮ ಮಾಡಿದ್ದೀವಿ ಅಂತಿದೆ ಉಕ್ರೇನ್ ಸೇನೆ. ಹಾಗಾದ್ರೆ ಉಕ್ರೇನ್‌ಗೆ ಇಷ್ಟು ಕೆಪಾಸಿಟಿ ಬಂದಿದ್ದು ಹೇಗೆ? ತಿಳಿಯೋಣ ಬನ್ನಿ.
ಬೆನ್ನಿಗೆ ನಿಂತಿರುವ ಅಮೆರಿಕ ಸೇನೆ!
ರಷ್ಯಾ & ಉಕ್ರೇನ್ ವಾರ್ ಶುರುವಾಗಿ 459 ದಿನ ಉರುಳಿದೆ, ಆದರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಈ ಎರಡೂ ದೇಶಗಳ ನಡುವೆ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ (Russia Ukraine War) ಮತ್ತಷ್ಟು ವಿನಾಶಕಾರಿ ಆಗುತ್ತಿದೆ. ಇಷ್ಟುದಿನ ಉಕ್ರೇನ್ ಮೇಲೆ ಬಹುತೇಕ ಹಿಡಿತ ಸಾಧಿಸಿತ್ತು ರಷ್ಯಾ ಸೇನೆ, ಆದರೆ ಅಮೆರಿಕ ತನ್ನ ವಿನಾಶಕಾರಿ ಅಸ್ತ್ರವನ್ನು ಉಕ್ರೇನ್‌ಗೆ ಉಡುಗೊರೆ ರೂಪದಲ್ಲಿ ಕೊಟ್ಟಿತ್ತು. ಅದೇ ಉಡುಗೊರೆ ಈಗ ಉಕ್ರೇನ್ ಸಹಾಯಕ್ಕೆ ಬರುತ್ತಿದ್ದು, ರಷ್ಯಾ ಕೂಡ ಜಿದ್ದಿಗೆ ಬಿದ್ದು ಹೋರಾಡುತ್ತಿದೆ.
ಶಕ್ತಿಶಾಲಿ ಮಿಸೈಲ್ ನಾಶಕ ಗಿಫ್ಟ್!
ಅಮೆರಿಕ ಶತ್ರು ರಷ್ಯಾ ಬಗ್ಗುಬಡಿಯಲು ಎಲ್ಲ ಅಸ್ತ್ರ ಪ್ರಯೋಗಿಸುತ್ತಾ ಬಂದಿದೆ. ಅದ್ರಲ್ಲಿ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುವ ವಿಧಾನವೂ ಒಂದು. ಹೀಗೆ ಉಕ್ರೇನ್‌ಗೆ ಅಮೆರಿಕ ದಾನ ನೀಡಿದ ಗಿಫ್ಟ್ ಪೈಕಿ 'ಯುಎಸ್-ಮೇಡ್ ಪೇಟ್ರಿಯಾಟ್ ಮಿಸೈಲ್ ಡಿಫೆನ್ಸ್' (US-made Patriot missile defense) ಕೂಡ ಇದೆ. ಅಸ್ತ್ರದ ಮೂಲಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಬಹುದು & ಶತ್ರುಗಳ ಕ್ಷಿಪಣಿ ಹೊಡೆದು ಹಾಕುವುದು ಕೂಡ ಸುಲಭ. ಇದರ ಸಾಮರ್ಥ್ಯ ಇಡೀ ಜಗತ್ತಿಗೇ ಗೊತ್ತು, ಹೀಗಾಗಿ ಅಮೆರಿಕದ ಅಸ್ತ್ರ ಬಳಸಿ ರಷ್ಯಾಗೆ ಶಾಕ್ ಕೊಡ್ತಿದೆ ಉಕ್ರೇನ್.

ಯುದ್ಧದಿಂದ ಅಮೆರಿಕಗೆ ಲಾಭ ಏನು?
ಅಮೆರಿಕ ಲಾಭ ಇಲ್ಲದೆ ಯಾವುದೇ ಕೆಲಸ ಮಾಡಲ್ಲ ಎನ್ನುವ ಮಾತಿದೆ. ಮಾತಿಗೆ ತಕ್ಕಂತೆ ಇದೀಗ ಉಕ್ರೇನ್‌ನ ಪರವಾಗಿ ನಿಂತಿದೆ ಅಮೆರಿಕ. ಉಕ್ರೇನ್ ಪರ ನಿಂತಿರುವ ಅಮೆರಿಕಗೆ ಇದರಿಂದ ಏನು ಲಾಭ ಎಂದರೆ, ರಷ್ಯಾ ವಿರುದ್ಧ ಪರೋಕ್ಷವಾಗಿ ಸೇಡು ತೀರಿಸಿಕೊಂಡು, ಯುರೋಪ್ ಮೇಲೆ ತಾನು ಹೊಂದಿರುವ ಹಿಡಿತವನ್ನ ಇಡೀ ಜಗತ್ತಿಗೆ ತೋರಿಸುವ ಪ್ರಯತ್ನ ಸಾಗಿದೆ ಎಂಬ ಆರೋಪವಿದೆ. ಆದರೆ ರಷ್ಯಾ ಅಷ್ಟು ಸುಲಭಕ್ಕೆ ತನ್ನ ಸೋಲು ಒಪ್ಪಿಕೊಳ್ಳದೆ ಹೋರಾಡುತ್ತಿರುವುದು ಅಮೆರಿಕದ ನಿದ್ದೆ ಕೆಡಿಸಿದೆ.
ರಷ್ಯಾ ಸೋಲಿಸಲು ಅಮೆರಿಕದ ಕುತಂತ್ರ?
ಉಕ್ರೇನ್‌ಗೆ ಈಗ ಅಮೆರಿಕ ಮಾತ್ರವಲ್ಲ ನ್ಯಾಟೋ ಅಂದ್ರೆ ಯುರೋಪ್‌ನ ಬಹುತೇಕ ರಾಷ್ಟ್ರಗಳು ನೆರವು ನೀಡುತ್ತಿವೆ. ಉಕ್ರೇನ್ ಯುದ್ಧದಲ್ಲಿ ಗೆದ್ರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಗೆಲುವು ಸಿಗುತ್ತೆ. ಪ್ರಮುಖವಾಗಿ ಯುರೋಪ್‌ನಲ್ಲಿ ಹೊಸ ಯುಗ ಸೃಷ್ಟಿಸಿ ಅಮೆರಿಕದ ಹಿಡಿತ ಬಿಗಿ ಮಾಡುವ ಸಂಭವ ಹೆಚ್ಚಾಗಿರುವ ಕಾರಣ ಉಕ್ರೇನ್ ಗೆಲುವಿಗೆ ಅಮೆರಿಕದ ಜೊತೆ ಬ್ರಿಟನ್ ಹಾಗೂ ಯುರೋಪ್ ಒಕ್ಕೂಟ ಕೂಡ ಬಲವಾಗಿ ನಿಂತಿದೆ. ಅದರಲ್ಲೂ ನ್ಯಾಟೋ ಪಡೆ ಉಕ್ರೇನ್ ಗಡಿಯಲ್ಲಿ ರಹಸ್ಯವಾಗಿ ವಿನಾಶಕಾರಿ ಅಸ್ತ್ರಗಳನ್ನ ನೀಡಿ ಹೋಗುತ್ತಿರುವ ಆರೋಪ ಕೂಡ ಇದೆ.
ಬೈಡನ್ ವಿರುದ್ಧ ರಷ್ಯಾ ಕೆಂಡ!
ಅಷ್ಟಕ್ಕೂ ಬೆಲಾರಸ್‌ನಲ್ಲಿ ರಷ್ಯಾ ಪರಮಾಣು ಶಸ್ತ್ರಾಸ್ತ್ರ ನಿಯೋಜಿಸಲಿರುವ ವರದಿಗಳನ್ನು ನೋಡಿ ಆತಂಕವಾಗಿದೆ ಎಂದು ಮೊನ್ನೆ ಅಮೆರಿಕ ಅಧ್ಯಕ್ಷ ಬೈಡನ್ ಹೇಳಿದ್ದರು. ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಅಮೆರಿಕದಲ್ಲಿರುವ ರಷ್ಯಾ ರಾಯಭಾರಿ ಕಚೇರಿ ಸರಿಯಾಗೇ ತಿರುಗೇಟು ನೀಡಿತ್ತು. ನಮ್ಮ ಮೇಲೆ ಅಮೆರಿಕ ಅತ್ಯಾಧುನಿಕ ಶಸ್ತ್ರಗಳನ್ನು ಬಳಸಿ ಯುದ್ಧ ಮಾಡಬಹುದು. ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸುವುದು ರಷ್ಯಾ & ಬೆಲಾರಸ್‌ನ ಹಕ್ಕು ಎನ್ನುವ ಮೂಲಕ ಅಮೆರಿಕ ತೆಪ್ಪಗೆ ಅವರ ಕೆಲಸ ನೋಡಿಕೊಳ್ಳಲಿ ಎಂದಿತ್ತು ರಷ್ಯಾ. ಹೀಗೆ ಅಮೆರಿಕ ವಾರ್ನ್ ಮಾಡಿದ 2 ದಿನದ ಬಳಿಕ 59 ಕ್ಷಿಪಣಿ ಹಾರಿಸಿದೆ ರಷ್ಯಾ.

ಚೀನಾ ಸಹಾಯ, ರಷ್ಯಾ ಪಂಚ್
ರಷ್ಯಾ ತನ್ನ ಅತ್ಯಾಪ್ತ ಸ್ನೇಹಿತ ಚೀನಾ ಸಹಾಯ ಪಡೆದು ಉಕ್ರೇನ್ ವಿರುದ್ಧ ದೊಡ್ಡ ಗೆಲುವಿಗೆ ಸಿದ್ಧವಾಗಿದೆ. ಇದೇ ಕಾರಣಕ್ಕೆ ಚೀನಾದ ಕೆಲವು ಶಸ್ತ್ರಾಸ್ತ್ರ ತಯಾರಕ ಕಂಪೆನಿಗಳನ್ನೂ ಬ್ಯಾನ್ ಮಾಡಲು ಅಮೆರಿಕ ಸಿದ್ಧತೆ ನಡೆಸಿತ್ತು. ಈ ಎಲ್ಲಾ ಕಿರಿಕಿರಿ ನಡುವೆಯೂ ಈಗ ರಷ್ಯಾ ಬೆನ್ನಿಗೆ ನಿಂತಿದೆ ಚೀನಾ. ಮದ್ದುಗುಂಡು ಸೇರಿದಂತೆ ಡ್ರೋನ್‌ಗಳನ್ನ ಕೂಡ ರಷ್ಯಾಗೆ ಕೊಡುತ್ತಿರುವ ಆರೋಪ ಚೀನಾ ಮೇಲಿದೆ. ಇಷ್ಟಾದರೂ ಅಮೆರಿಕದ ಮಾತಿಗೆ ಕೇರ್ ಮಾಡದೆ ಚೀನಾ ತನ್ನ ಕೆಲಸ ಮುಂದುವರಿಸಿದೆ.
ಹೀಗೆ ರಷ್ಯಾ & ಉಕ್ರೇನ್ ಯುದ್ಧ ಮೆಲ್ಲಗೆ 2ನೇ ವರ್ಷದ ಕಡೆಗೆ ಎಂಟ್ರಿ ಕೊಡ್ತಿದೆ. ಹಾಗೇ ಇನ್ನೊಂದು ಕಡೆ 10 ವರ್ಷವಾದರೂ ಯುದ್ಧ ಮುಗಿಯಲ್ಲ ಎನ್ನುವ ಮಾತನ್ನ ಪುಟಿನ್ ಅವರ ಆಪ್ತನೇ ಹೇಳಿದ್ದಾರೆ. ಇದೆಲ್ಲಾ ಮುಂದೆ ಭೂಮಿ ಮೇಲೆ ಅದೆಷ್ಟು ವಿನಾಶ ಸೃಷ್ಟಿಸಲಿದೆ? ರಷ್ಯಾ ಭವಿಷ್ಯದಲ್ಲಿ ಉಕ್ರೇನ್ ವಿರುದ್ಧ ಪರಮಾಣು ಅಸ್ತ್ರ ಬಳಸುತ್ತಾ? 2ನೇ ಮಹಾಯುದ್ಧದ ರೀತಿ ಅಮೆರಿಕ ನೇರವಾಗಿ ಯುದ್ಧದ ಅಖಾಡಕ್ಕೆ ಎಂಟ್ರಿ ಕೊಡುತ್ತಾ? ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications