ಉಕ್ರೇನ್ & ರಷ್ಯಾ ಯುದ್ಧಕ್ಕೆ 4 ವರ್ಷ ತುಂಬುವ ಮೊದಲೇ ಹಿಂಸಾಚಾರಕ್ಕೆ ಬ್ರೇಕ್?
ಉಕ್ರೇನ್ ಮತ್ತು ರಷ್ಯಾ ಯಾವ ರೇಂಜ್‌ಗೆ ಬಡಿದಾಡುತ್ತಿವೆ ಎಂದರೆ, ಒಬ್ಬರನ್ನು ಕಂಡರೆ ಮತ್ತೆ ಇನ್ನೊಬ್ಬರು ಕೊತ ಕೊತ ಕುದಿಯುತ್ತಿದ್ದಾರೆ. ಒಬ್ಬರು ದಾಳಿ ಮಾಡಿದರೆ ಮತ್ತೊಬ್ಬರು ಭೀಕರ ದಾಳಿಗೆ ಸಜ್ಜಾಗುತ್ತಿದ್ದಾರೆ. ಇಂತಹ ಯುದ್ಧವನ್ನು ಡೊನಾಲ್ಡ್ ಟ್ರಂಪ್ ಸುಲಭವಾಗಿ ನಿಲ್ಲಿಸುತ್ತೇನೆ ಅಂತಾ ಹೇಳಿದ್ದರು. ಆದರೆ ಅಮೆರಿಕ ಅಧ್ಯಕ್ಷರು ಕೊಟ್ಟಿದ್ದ ಮಾತು ಇನ್ನೂ ಈಡೇರಿಲ್ಲ, ಹೀಗೆ ಇದ್ದಾಗ ಮತ್ತೆ ಮತ್ತೆ ದಾಳಿ & ಪ್ರತಿದಾಳಿ ಮಾಡುತ್ತಾ ಯುದ್ಧದ ಭೀಕರತೆ ಹೆಚ್ಚಿಸುತ್ತಿವೆ ಎರಡೂ ದೇಶಗಳು. ಇಷ್ಟೆಲ್ಲದರ ನಡುವೆ ಉಕ್ರೇನ್ & ರಷ್ಯಾ ಯುದ್ಧಕ್ಕೆ 4 ವರ್ಷ ತುಂಬುವ ಮೊದಲೇ ಹಿಂಸಾಚಾರಕ್ಕೆ ಬ್ರೇಕ್ ಬೀಳುತ್ತಾ? ಎಂಬ ಚರ್ಚೆ ಶುರುವಾಗಿದೆ. ಅದಕ್ಕೆ ಬಲವಾದ ಕಾರಣವೂ ಇದೆ.
ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾದ ನಂತರ ಲಕ್ಷಾಂತರ ಅಮಾಯಕರು ಜೀವವನ್ನೇ ಕಳೆದುಕೊಂಡು, ಕೋಟ್ಯಂತರ ಜನರ ಜೀವನ ಬೀದಿಗೆ ಬಿದ್ದಿದೆ. ಹೀಗಾಗಿ ಆದಷ್ಟು ಬೇಗನೇ ಈ ಯುದ್ಧಕ್ಕೆ ಬ್ರೇಕ್ ಹಾಕಬೇಕು ಎಂಬ ಒಕ್ಕೊರಲ ಆಗ್ರಹ ಇಡೀ ಜಗತ್ತಿನಾದ್ಯಂತ ಕೇಳಿಬರುತ್ತಾ ಇದೆ. ಆದರೂ ಯುದ್ಧ ನಿಲ್ಲಿಸಲು ಎರಡೂ ದೇಶಗಳು ಸಜ್ಜಾಗಿಲ್ಲ. ಮತ್ತೊಂದು ಕಡೆ ಕೆಲವು ದಿನಗಳ ಹಿಂದಷ್ಟೇ ರಷ್ಯಾ ಅಧ್ಯಕ್ಷರ ನಿವಾಸದ ಮೇಲೆ ದಾಳಿ ಮಾಡಿದ್ದ ಆರೋಪ ಉಕ್ರೇನ್ ವಿರುದ್ಧ ಕೇಳಿ ಬಂದಿತ್ತು. ಎಲ್ಲಾ ಘಟನೆಗಳ ಬೆನ್ನಲ್ಲೇ ಮತ್ತೆ ಇಬ್ಬರೂ ಬಡಿದಾಡುತ್ತಿದ್ದಾರೆ, ಆದರೆ ಈಗ ಯುದ್ಧ ನಿಲ್ಲಿಸುವ ಬಗ್ಗೆ ಚರ್ಚೆ ಜೋರಾಗಿದೆ. ಅದಕ್ಕೆಲ್ಲಾ ಕಾರಣ ದಕ್ಷಿಣ ಅಮೆರಿಕದಲ್ಲಿ ನಡೆದ ಅದೊಂದು ಘಟನೆ.

ಯುದ್ಧ ನಿಲ್ಲಿಸಲು ಸಕಲ ಸಿದ್ಧತೆ?
ಹೌದು, ವೆನಿಜುಯೆಲಾ ಮೇಲೆ ನೇರವಾಗಿ ಅಮೆರಿಕ ದಾಳಿ ಮಾಡಿ ಅಲ್ಲಿನ ಅಧ್ಯಕ್ಷನ ಸೆರೆಹಿಡಿದ ನಂತರ ಉಕ್ರೇನ್ & ರಷ್ಯಾ ಯುದ್ಧ ನಿಲ್ಲುವ ಬಗ್ಗೆ ಹೊಸ ಆಯಾಮ ಸಿಕ್ಕಂತಾಗಿದೆ. ಯಾಕಂದ್ರೆ ಖುದ್ದು ಡೊನಾಲ್ಡ್ ಟ್ರಂಪ್ ಅವರು ತಮ್ಮ ನೀತಿ ಹಾಗೂ ನಿಯಮಗಳ ಬಗ್ಗೆ ಈಗ ಕಠಿಣವಾಗೇ ವರ್ತಿಸುತ್ತಿದ್ದಾರೆ. ಅದೇ ರೀತಿಯಾಗಿ 2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸುವ ಬಗ್ಗೆ ಕೂಡ ಡೊನಾಲ್ಡ್ ಟ್ರಂಪ್ ಅವರು ಇದೇ ರೀತಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂಬ ಚರ್ಚೆ ನಡೆದಿದೆ. ಅದರಲ್ಲೂ ರಷ್ಯಾ ಈಗಾಗಲೇ ಈ ಯುದ್ಧ ನಿಲ್ಲಿಸಲು ಮುಂದೆ ಬಂದಿದೆ. ಆದರೆ ತಲೆನೋವು ಇರುವುದು ಉಕ್ರೇನ್ ಸರ್ಕಾರದ ಕಡೆಯಿಂದ ಮಾತ್ರ, ಇದೇ ಕಾರಣಕ್ಕೆ ಉಕ್ರೇನ್ ಸರ್ಕಾರದ ನಿರ್ಧಾರ ಸರಿ ಮಾಡಲು ಟ್ರಂಪ್ ಅವರು ಮುನ್ನುಗ್ಗುವ ಸಾಧ್ಯತೆ ದಟ್ಟವಾಗಿದೆ.
ಮತ್ತಷ್ಟು ಯುದ್ಧ ಶುರುವಾಗುವ ಆತಂಕ!
ಒಟ್ನಲ್ಲಿ ಈ ಮೂಲಕವಾದರೂ ಹೊಸ ವರ್ಷದಲ್ಲಿ ಯುದ್ಧಗಳು ನಿಂತು ಮನುಷ್ಯರು ಶಾಂತಿ & ನೆಮ್ಮದಿಯಾಗಿ ಜೀವನ ನಡೆಸಲಿ ಎಂಬುದೇ ಜನ ಸಾಮಾನ್ಯರ ಬಯಕೆಯಾಗಿದೆ. ಹೀಗಾಗಿ ಆದಷ್ಟು ಬೇಗ ಯುದ್ಧ ನಿಲ್ಲಬೇಕು ಎಂಬ ಒತ್ತಡ ಕೂಡ ಹೆಚ್ಚಾಗಿದೆ. ಅದರಲ್ಲೂ ಅಮೆರಿಕ ಈ ಯುದ್ಧಕ್ಕೆ ಬ್ರೇಕ್ ಹಾಕದೇ ಇದ್ದರೆ ಭವಿಷ್ಯದಲ್ಲಿ ಇನ್ನಷ್ಟು ಯುದ್ಧಗಳು ಶುರುವಾಗುವ ಆತಂಕ ಕೂಡ ಈಗ ಆವರಿಸಿದೆ.












Click it and Unblock the Notifications