ಟರ್ಕಿ ಭೂಕಂಪ: ಸಾವಿನ ಸಂಖ್ಯೆ 5,000ಕ್ಕೆ ಏರಿಕೆ: ಹಲವು ದೇಶಗಳಿಂದ ಸಹಾಯ ಹಸ್ತ!
ಟರ್ಕಿ, ಸಿರಿಯಾ ಭೂಕಂಪನಕ್ಕೆ ಸಾವು ಸಂಖ್ಯೆ 5,000ಕ್ಕೆ ಏರಿಕೆಯಾಗಿದ್ದು ಅಂತರಾಷ್ಟ್ರಗಳು ಸಹಾಯಕ್ಕೆ ಮುಂದಾಗಿವೆ.
ಸಿರಿಯಾ ಫೆಬ್ರವರಿ 7: ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈವರೆಗೆ 5,000ಕ್ಕೂ ಹೆಚ್ಚು ಜನ ಭೂಕಂಪನಕ್ಕೆ ಬಲಿಯಾಗಿದ್ದಾರೆ. ಬೃಹತ್ ಕಟ್ಟಡಗಳು ಧರಗುರುಳಿದ್ದರಿಂದ ಅವಶೇಷಗಳ ಅಡಿ ಸಿಲುಕಿ ಹಲವಾರು ಜನ ಪ್ರಾಣಬಿಟ್ಟಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ರಕ್ಕಸ ಭೂಕಂಪಕ್ಕೆ ನೂರಾರು ಜನ ಇನ್ನೂ ಕಾಣೆಯಾಗಿದ್ದಾರೆ. ಪ್ರದೇಶದಲ್ಲಿ ನಿರಾಶ್ರಿತರ ಅಳಲು, ನೋವಿನ ದೃಶ್ಯಗಳು ವೈರಲ್ ಆಗಿವೆ. ಕಾಣೆಯಾದವರ ಹುಡುಕುವ ಕಾರ್ಯ ಮುಂದುವರೆದಿದೆ.
ಸೋಮವಾರ ಮೊದಲ ಭಾರಿ 7.8-ರಿಕ್ಟರ್ ಭೂಕಂಪ ಸಂಭವಿಸಿತು. ಬೆಳಗಿನ ಜಾವ ಜನ ನಿದ್ದೆಯಲ್ಲಿರುವಾಗಲೇ ಈ ಭೂಕಂಪ ಸಂಭವಿಸಿದೆ. ಪ್ರಬಲ ಭೂಕಂಪಕ್ಕೆ ಕಟ್ಟಡಗಳು ನೆಲಕ್ಕಚ್ಚಿ ಹಲವಾರು ಜನ ನಿದ್ದೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಉತ್ತರ ಸಿರಿಯಾದ ಭೂಕಂಪ-ಪೀಡಿತ ಪ್ರದೇಶದಲ್ಲಿ ಮನೆಗಳು, ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ನಾಶವಾಗಿವೆ. ಅನೇಕ ಕಂದಮ್ಮಗಳು ತಮ್ಮ ಪೋಷಕರನ್ನು ಕಳೆದುಕೊಂಡಿವೆ. ನಿವಾಸಿಗಳಿಂದ ತುಂಬಿರುವ 5,606 ಅಪಾರ್ಟ್ ಮೆಂಟ್ ಕಟ್ಟಡಗಳಲ್ಲಿ ಅನೇಕ ಧರೆಗುರುಳಿದ್ದರೆ ಇನ್ನು ಕೆಲವು ಶಿಥಿಲಗೊಂಡಿವೆ. ಸಿರಿಯಾದಲ್ಲಿ ಡಜನ್ಗಟ್ಟಲೆ ಕುಸಿತಗಳನ್ನು ಮತ್ತು ಅಲೆಪ್ಪೊದಲ್ಲಿನ ಪುರಾತತ್ತ್ವ ಶಾಸ್ತ್ರದ ಸ್ಥಳಗಳಿಗೆ ಹಾನಿಯನ್ನು ಉಂಟುಮಾಡಿವೆ.

ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ನೆರವಾಗಲು ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್ ಮತ್ತು ರಷ್ಯಾ ಮುಂದಾಗಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟರ್ಕಿಗೆ "ಅಗತ್ಯ ನೆರವು" ನೀಡಲು ಮುಂದಾಗಿದ್ದಾರೆ. ಬೀಜಿಂಗ್ ರಕ್ಷಕರು, ವೈದ್ಯಕೀಯ ತಂಡಗಳು ಮತ್ತು ಇತರ ಸರಬರಾಜುಗಳನ್ನು ಕಳುಹಿಸುತ್ತಿದೆ ಎಂದು ಚೀನಾದ ರಾಜ್ಯ ಮಾಧ್ಯಮ ಮಂಗಳವಾರ ತಿಳಿಸಿದೆ.
ಜೊತೆಗೆ ವಿನಾಶಕಾರಿ ಭೂಕಂಪದಿಂದ ಚೇತರಿಸಿಕೊಳ್ಳಲು ಸಹಾಯ ಮಾಡಲು ಅಗತ್ಯವಿರುವ "ಯಾವುದೇ ಮತ್ತು ಎಲ್ಲಾ" ನೆರವನ್ನು ಯುನೈಟೆಡ್ ಸ್ಟೇಟ್ಸ್ ಕಳುಹಿಸುತ್ತದೆ ಎಂದು ಅಧ್ಯಕ್ಷ ಜೋ ಬಿಡೆನ್ ತನ್ನ ಟರ್ಕಿಶ್ ಕೌಂಟರ್ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರಿಗೆ ಭರವಸೆ ನೀಡಿದರು.

ಟರ್ಕಿ ವಿಶ್ವದ ಅತ್ಯಂತ ಸಕ್ರಿಯ ಭೂಕಂಪ ವಲಯಗಳಲ್ಲಿ ಒಂದಾಗಿದೆ. ಅಧಿಕ ಪ್ರಬಲವಾದ ಭೂಕಂಪ ಈ ಹಿಂದೆ 1939 ರಲ್ಲಿ ಸಂಭವಿಸಿತ್ತು. ಇದು 7.8 ತೀವ್ರತೆಯ ಪೂರ್ವ ಎರ್ಜಿನ್ಕಾನ್ ಪ್ರಾಂತ್ಯದಲ್ಲಿ 33,000 ಜನರನ್ನು ಬಲಿತೆಗೆದುಕೊಂಡಿತು. ಬಳಿಕ 1999 ರಲ್ಲಿ ಟರ್ಕಿಯ ಡಝ್ಸ್ ಪ್ರದೇಶ 7.4 ತೀವ್ರತೆಯಲ್ಲಿ ಕಂಪಿಸಿತು. ಈ ವೇಳೆ 17,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.












Click it and Unblock the Notifications