ಪ್ರಧಾನಿ ನರೇಂದ್ರ ಮೋದಿ ಹೆಸರಿನ ಅಂಚೆ ಚೀಟಿ ಬಿಡುಗಡೆ
ಅಂಟಾಲಿಯಾ(ಟರ್ಕಿ), ನವೆಂಬರ್, 19: ಎರಡು ದಿನಗಳ ಹಿಂದೆ ಪೂರ್ಣಗೊಂಡ ಜಿ-20 ಶೃಂಗಸಭೆ ದ್ಯೋತಕವಾಗಿ ಟರ್ಕಿ ದೇಶವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ವಿಶ್ವ ನಾಯಕರ ಭಾವಚಿತ್ರವಿರುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.
ಟರ್ಕಿ ದೇಶವು ನವೆಂಬರ್ 18ರ ಬುಧವಾರದಂದು ಬಿಡುಗಡೆ ಮಾಡಿರುವ 33 ಅಂಚೆ ಚೀಟಿಗಳಲ್ಲಿ ಜಗತ್ತಿನ ಆರ್ಥಿಕತೆಗೆ ಅವಿರತವಾಗಿ ಶ್ರಮಿಸುತ್ತಿರುವ ಒಟ್ಟು 19 ಪ್ರಮುಖ ವಿಶ್ವನಾಯಕರ ಹೆಸರನ್ನು ಒಳಗೊಂಡಿದೆ. ಮೋದಿ ನವೆಂಬರ್ 15 ಮತ್ತು 16 ಟರ್ಕಿಯ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.[ರಾಮಾಯಣ, ಮಹಾಭಾರತದ ಕತೆ ಹೇಳಲಿವೆ ಅಂಚೆ ಚೀಟಿಗಳು]

ಮೋದಿ ಹೆಸರಲ್ಲಿ ಬಿಡುಗಡೆಯಾದ ಅಂಚೆ ಚೀಟಿಯಲ್ಲಿ ಏನಿದೆ?
ಟರ್ಕಿ ಬಿಡುಗಡೆ ಮಾಡಿರುವ ಅಂಚೆ ಚೀಟಿಯಲ್ಲಿ ಮೋದಿ ಅವರ ಭಾವಚಿತ್ರವಿದ್ದು, ಅದರ ಕೆಳಭಾಗದಲ್ಲಿ ರಾಷ್ಟ್ರಧ್ವಜ ಹಾಗೂ ಮೋದಿ ಅವರ ಹೆಸರಿದೆ. ಆ ಸ್ಟ್ಯಾಂಪ್ ಬೆಲೆ ಟರ್ಕಿ ರೂಗಳಲ್ಲಿ 2.80 ರೂ ಆಗಿದೆ. ಅಲ್ಲದೇ ನರೇಂದ್ರ ಮೋದಿ-ಭಾರತದ ಪ್ರಧಾನ ಮಂತ್ರಿ ಎಂಬ ಅಡಿ ಬರಹವಿದೆ. ಬಿಡುಗಡೆಯಾದ ಅಂಚೆ ಚೀಟಿಗಳು ರಾಷ್ಟ್ರಕ್ಕೆ ಅನುಗುಣವಾಗಿ ಮಾರ್ಪಾಟು ಹೊಂದಿದೆ.[ಅಂಚೆ ಇಲಾಖೆಯ ವಿಶೇಷ ಲಕೋಟೆ ಕೊಂಡುಕೊಳ್ಳಿ]
ಯಾವ ನಾಯಕರುಗಳ ಹೆಸರಲ್ಲಿ ಅಂಚೆ ಚೀಟಿ ಬಿಡುಗಡೆ?
* ಪ್ರಧಾನ ಮಂತ್ರಿ ನರೇಂದ್ರಮೋದಿ
* ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ
* ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
* ಚೀನಾದ ಅಧ್ಯಕ್ಷ ಜಿನ್ ಪಿಂಗ್
* ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್
* ಬ್ರೆಜಿಲ್ ಅಧ್ಯಕ್ಷೆ ಡಿಲ್ಮಾ ರೌಸೆಫ್
* ಜರ್ಮನಿ ಆಂಜೆಲಾ ಮಾರ್ಕೆಲ್
* ಜಪಾನ್ ಪ್ರಧಾನ ಮಂತ್ರಿ ಸಿಂಜೊ ಅಬೆ
* ಫ್ರೆಂಚ್ ಅಧ್ಯಕ್ಷ ಫ್ರಾಕೋಯಿಸ್ ಹೊಲಾಂದೆ
* ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡುಯೊ
* ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಮ್ಯಾಲ್ ಕಮ್ ಟರ್ನ್ ಬುಲ್












Click it and Unblock the Notifications