Greenland: ಗ್ರೀನ್‌ಲ್ಯಾಂಡ್ ಜೊತೆಗೆ ಕೆನಡಾ ಮೇಲೂ ಕಣ್ಣಿಟ್ಟರು ಡೊನಾಲ್ಡ್ ಟ್ರಂಪ್!
ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ವಿಚಾರವಾಗಿ ಹಠ ಬಿಡುತ್ತಿಲ್ಲ, ಈ ವಿಚಾರದಲ್ಲಿ ತಮ್ಮದೇ ಸ್ನೇಹಿತ ದೇಶಗಳನ್ನೂ ಎದುರು ಹಾಕಿಕೊಳ್ಳಲು ಈಗ ಟ್ರಂಪ್ ಸಿದ್ಧವಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಈ ವರ್ತನೆ ಸ್ವತಃ ಅಮೆರಿಕದ ನಾಯಕರಿಗೂ ತಲೆನೋವು ತರಿಸಿದೆ, ಏಕೆಂದರೆ ಭವಿಷ್ಯದಲ್ಲಿ ಅಮೆರಿಕದ ಸ್ನೇಹಿತ ರಾಷ್ಟ್ರಗಳು ದೂರವಾಗುವ ಆತಂಕ ಆವರಿಸಿದೆ. ಇದೆಲ್ಲ ಮೀರಿ ಡೊನಾಲ್ಡ್ ಟ್ರಂಪ್ ಮಾತ್ರ ತಮ್ಮ ಹಠ ಸಾಧಿಸಲು ಮುಂದಾಗಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಟ್ರಂಪ್ ಇದೀಗ ಗ್ರೀನ್‌ಲ್ಯಾಂಡ್ ಜೊತೆಗೆ ಕೆನಡಾ ಕೂಡ ಅಮೆರಿಕದ ಭಾಗ ಎಂದು ಸಾರುವ ನಕ್ಷೆಯನ್ನು ತೋರಿಸುವ ಮೂಲಕ ಚರ್ಚೆಗೆ ಮತ್ತೆ ಕಿಚ್ಚು ಹೊತ್ತಿಸಿದ್ದಾರೆ.
ಡೆನ್ಮಾರ್ಕ್ ಹಿಡಿತದಲ್ಲಿ ಇರುವ ಗ್ರೀನ್‌ಲ್ಯಾಂಡ್ ಮೇಲೆ ಯುರೋಪ್ ಒಕ್ಕೂಟ ಸೇರಿದಂತೆ ಅಮೆರಿಕಗೆ ಕೂಡ ಹಕ್ಕು ಇದೆ. ಪಾಶ್ಚಿಮಾತ್ಯ ದೇಶಗಳು ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಇಷ್ಟುದಿನಗಳ ಕಾಲ ಭಾರಿ ಒಗ್ಗಟ್ಟು ಕಾಯ್ದುಕೊಂಡು ಬಂದಿದ್ದವು. ಆದರೆ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ನಂತರ ಹೊಸ ಸಂಚಲನ ಶುರುವಾಗಿದ್ದು, ನಮಗೆ ಗ್ರೀನ್‌ಲ್ಯಾಂಡ್ ಬೇಕು ಎಂದು ಹಠ ಹಿಡಿದಿದ್ದಾರೆ ಟ್ರಂಪ್. ಅಲ್ಲದೆ ಗ್ರೀನ್‌ಲ್ಯಾಂಡ್ ಅಮೆರಿಕಗೆ ಸೇರಿಸಲು ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದ್ದಾರೆ.

ಇದೇ ವಿಚಾರವಾಗಿ ಟ್ರಂಪ್ ಅವರನ್ನ ತಣ್ಣಗಾಗಿಸುವ ಪ್ರಯತ್ನ ನಡೆದರೂ ಅದು ಫಲ ನೀಡುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಇಟಲಿ ಪ್ರಧಾನಿ ಜಾರ್ಜಿಯ ಮೆಲೋನಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ಅವರ ಜೊತೆಗೆ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ನ್ಯಾಟೋ ನಾಯಕರು, ಯುರೋಪ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಇದ್ದ ಸಭೆಯಲ್ಲಿ ಅಮೆರಿಕದ ಹೊಸ ಮ್ಯಾಪ್ ಪ್ರದರ್ಶನ ಮಾಡಲಾಗಿದೆ. ಕೆನಡಾ ಕೂಡ ಈ ಸಭೆಯ ನಂತರ ಆಕ್ರೋಶ ಹೊರಹಾಕುವ ವಾತಾವರಣ ನಿರ್ಮಾಣ ಆಗಿದೆ. ಯುರೋಪ್ ಖಂಡದ ಘಟಾನುಘಟಿ ನಾಯಕರು ಇದ್ದ ಸಭೆಯಲ್ಲೇ ಈ ರೀತಿಯಾಗಿ ಆಘಾತ ನೀಡಿದ್ದಾರೆ ಅಮೆರಿಕ ಅಧ್ಯಕ್ಷರು.
ವೆನಿಜುವೆಲಾ ಕೂಡ ಅಮೆರಿಕ ಭಾಗ?
ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಮತ್ತು ಕೆನಡಾ ಅಮೆರಿಕದ ಭಾಗ ಎಂದು ಸಾರುವ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೆ ಇತ್ತೀಚೆಗೆ ಅಮೆರಿಕ ಸೇನೆ ದಾಳಿ ಮಾಡಿದ್ದ ವೆನಿಜುವೆಲಾ ಭೂಭಾಗ ಕೂಡ ಅಮೆರಿಕಗೆ ಸೇರಿದ್ದು ಎನ್ನುವ ರೀತಿ ಡಿಸೈನ್ ಮಾಡಿರುವ ಮ್ಯಾಪ್ ಜೊತೆಗೆ ಕೂತು, ಯುರೋಪ್ ಒಕ್ಕೂಟದ ಘಟಾನುಘಟಿ ದೇಶಗಳ ನಾಯಕರ ಜೊತೆಯಲ್ಲಿ ಟ್ರಂಪ್ ಸಭೆ ನಡೆಸಿದ್ದಾರೆ. ಅಲ್ಲದೆ ಈ ಫೋಟೋ ಈಗ ಟ್ರೂತ್ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ವೈರಲ್ ಆಗುತ್ತಿದೆ.
ಕೆನಡಾ ಜೊತೆಗೆ ಕಿರಿಕ್ ಶುರುವಾಗುತ್ತಾ?
ಗ್ರೀನ್‌ಲ್ಯಾಂಡ್ ಅಮೆರಿಕಗೆ ಸೇರಬೇಕು, ಇಲ್ಲವಾದರೆ ಭವಿಷ್ಯದಲ್ಲಿ ಗ್ರೀನ್‌ಲ್ಯಾಂಡ್ ಮೇಲೆ ಚೀನಾ ಮತ್ತು ರಷ್ಯಾ ಕಣ್ಣು ಬೀಳಲಿದೆ ಎಂಬುದು ಅಮೆರಿಕ ಅಧ್ಯಕ್ಷ ಟ್ರಂಪ್ ನೀಡುತ್ತಿರುವ ಸಮರ್ಥನೆ. ಯುರೋಪ್ ಒಕ್ಕೂಟ ಹಾಗೂ ಅಮೆರಿಕದ ಸ್ನೇಹಿತ ರಾಷ್ಟ್ರಗಳು ತಮ್ಮ ಈ ಕ್ರಮವನ್ನು ಬೆಂಬಲಿಸಬೇಕು ಎಂದು ಕೂಡ ಟ್ರಂಪ್ ಹೇಳುತ್ತಿದ್ದಾರೆ. ಅಕಸ್ಮಾತ್ ತಮ್ಮನ್ನು ಬೆಂಬಲಿಸದೇ ಇದ್ದರೆ ಭಾರಿ ದೊಡ್ಡ ತೆರಿಗೆಯ ಬರೆ ಹಾಕುವ ಎಚ್ಚರಿಕೆ ನೀಡುತ್ತಿದ್ದಾರೆ.
ಇಷ್ಟೆಲ್ಲಾ ಒತ್ತಡಗಳ ನಡುವೆ ಟ್ರಂಪ್ ಅವರು ನಡೆಸಿದ ಸಭೆಯಲ್ಲಿ ಕೆನಡಾ & ಗ್ರೀನ್‌ಲ್ಯಾಂಡ್ ಜೊತೆಗೆ ವೆನಿಜುವೆಲಾ ಕೂಡ ಸೇರಿರುವ ಹೊಸ ನಕ್ಷೆಯ ಫೋಟೋ ಹಾಕಿಕೊಂಡು ಅದನ್ನ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಹಲವು ದೇಶಗಳು ಟ್ರಂಪ್ ವಿರುದ್ಧ ನಿಂತಿರುವಾಗ ಕೆನಡಾ ಕೂಡ ಇದೇ ಹಾದಿಯಲ್ಲಿ ಸಾಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಮತ್ತೊಂದು ಕಡೆ ಶೀಘ್ರದಲ್ಲೇ ಅಮೆರಿಕ ಅಧ್ಯ್ಷರು ಗ್ರೀನ್‌ಲ್ಯಾಂಡ್ ವಿಚಾರವಾಗಿ ಮಹತ್ವದ ಸಭೆ ನಡೆಸುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications