Greenland: ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಯು-ಟರ್ನ್, ಕಾರಣ ಗೊತ್ತಾ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಗ್ರೀನ್‌ಲ್ಯಾಂಡ್ ನಡುವೆ ನಡೆಯುತ್ತಿದ್ದ ಕದನ ಇದೀಗ ಸುಖಾಂತ್ಯ ಕಂಡಿದೆ. ಟ್ರಂಪ್ ಹೇಗಾದರೂ ಮಾಡಿ ಸಂಪೂರ್ಣ ಗ್ರೀನ್‌ಲ್ಯಾಂಡ್ ನೆಲವನ್ನು ಹಿಡಿತಕ್ಕೆ ಪಡೆಯಲು ಬಯಸಿದ್ದರು. ಡೆನ್ಮಾರ್ಕ್ ಸಾಮ್ರಾಜ್ಯದ ಭಾಗವಾದ ಗ್ರೀನ್‌ಲ್ಯಾಂಡ್ ದ್ವೀಪವನ್ನು ವಶಕ್ಕೆ ಪಡೆದು ಅಮೆರಿಕಗೆ ಸೇರಿಸಲು ಟ್ರಂಪ್ ಮುಂದಾಗಿರುವ ವಿಚಾರ ಯುರೋಪ್ ಒಕ್ಕೂಟದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅಲ್ಲದೆ ಜಗತ್ತಿನ ಅತ್ಯಂತ ದೊಡ್ಡ ಮಿಲಿಟರಿ ಒಕ್ಕೂಟವಾದ ನ್ಯಾಟೋ ಒಡೆದು ಹೋಗುವ ಆತಂಕ ಪಾಶ್ಚಿಮಾತ್ಯ ದೇಶಗಳಲ್ಲಿ ಆವರಿಸಿತ್ತು. ಹೀಗೆ ಗ್ರೀನ್‌ಲ್ಯಾಂಡ್ ವಿಚಾರ ಕಿಚ್ಚು ಹೊತ್ತಿಸುವಾಗಲೇ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ಕೊನೆಗೂ ಗ್ರೀನ್‌ಲ್ಯಾಂಡ್ ಮೇಲೆ ಸೇನಾ ಕ್ರಮ ಕೈಗೊಳ್ಳುವುದಿಲ್ಲ ಎಂದಿದ್ದಾರೆ. ಗ್ರೀನ್‌ಲ್ಯಾಂಡ್ ಸ್ವಾಧೀನಕ್ಕೆ ಬಲಪ್ರಯೋಗ ಮಾಡುವ ಎಚ್ಚರಿಕೆ ಮಾತುಗಳು ಕೂಡ ಕೇಳಿ ಬಂದಿದ್ದವು. ಹೀಗೆಲ್ಲಾ ಟ್ರಂಪ್ ಅವರು ತಮ್ಮ ಹಠ ಮುಂದುವರಿಸಿ, ಇನ್ನೇನು ಗ್ರೀನ್‌ಲ್ಯಾಂಡ್ ನೆಲದಲ್ಲಿ ಅಮೆರಿಕ ಸೇನೆ ನುಗ್ಗುತ್ತದೆ ಎನ್ನುವಾಗಲೇ ಮಹತ್ವದ ಬೆಳವಣಿಗೆ ಸಂಭವಿಸಿದೆ. ಗ್ರೀನ್‌ಲ್ಯಾಂಡ್ ಮೇಲೆ ಸೇನಾ ಕ್ರಮ ಕೈಗೊಳ್ಳುವ ನಿರ್ಧಾರದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿರುವುದು ಭಾರಿ ಖುಷಿ ನೀಡಿದೆ ಯುರೋಪ್ ಒಕ್ಕೂಟಕ್ಕೆ. ಹಾಗಾದರೆ ಟ್ರಂಪ್ ಅವರು ಇದ್ದಕ್ಕಿದ್ದಂತೆ ಗ್ರೀನ್‌ಲ್ಯಾಂಡ್‌ನ ಬಿಟ್ಟುಕೊಟ್ಟಿದ್ದು ಏಕೆ? ಮುಂದೆ ಓದಿ.

ಯುರೋಪ್ ಒಕ್ಕೂಟಕ್ಕೆ ಒಂದಷ್ಟು ನೆಮ್ಮದಿ
ನ್ಯಾಟೋ ನಾಯಕರ ಜೊತೆಗೆ ದಾವೋಸ್ ಆರ್ಥಿಕ ಸಮ್ಮೇಳನ ಸಮಯದಲ್ಲಿ ಸಭೆ ನಡೆಸಿರುವ ಟ್ರಂಪ್ ಅವರು ಈ ವಿಚಾರದಲ್ಲಿ ಹಿಂದೆ ಸರಿದಿದ್ದಾರೆ. ನ್ಯಾಟೋ ನಾಯಕರು ಈ ಬಗ್ಗೆ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಿ ಹೇಳಿದ್ದಾರೆ ಎನ್ನಲಾಗಿದ್ದು, ಭವಿಷ್ಯದಲ್ಲಿ ಇದರಿಂದ ಏನೆಲ್ಲಾ ಸಮಸ್ಯೆ ಸೃಷ್ಟಿಯಾಗಿ ಒಕ್ಕೂಟ ಹೊಡೆದು ಹೋಗುತ್ತದೆ? ಎಂಬುದನ್ನ ವಿವರಿಸಿದ್ದಾರೆ.
ಇದೆಲ್ಲವನ್ನೂ ಲೆಕ್ಕಾಚಾರ ಹಾಕಿಯೇ ಇದೀಗ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಮೇಲಿನ ತಮ್ಮ ಸೇನಾ ಕ್ರಮದ ನಿರ್ಧಾರವನ್ನು ಹಿಂಪಡೆದಿದ್ದಾರೆ ಎನ್ನಲಾಗಿದೆ. ಹಾಗೇ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ತಮ್ಮನ್ನು ಬೆಂಬಲಿಸದ ಕಾರಣಕ್ಕೆ, ಯುರೋಪ್ ಒಕ್ಕೂಟದ 8 ದೇಶಗಳ ಮೇಲೆ ಹೇರಿಕೆ ಮಾಡಿರುವ ಹೆಚ್ಚುವರಿ ಸುಂಕ ನಿರ್ಧಾರವನ್ನೂ ಟ್ರಂಪ್ ಅವರು ಹಿಂಪಡೆದಿದ್ದು ಗಮನ ಸೆಳೆದಿದೆ.
ಡೆನ್ಮಾರ್ಕ್ ಸಾಮ್ರಾಜ್ಯದ ಭಾಗ ಗ್ರೀನ್‌ಲ್ಯಾಂಡ್
57,000 ಜನಸಂಖ್ಯೆ ಹೊಂದಿರುವ ಗ್ರೀನ್‌ಲ್ಯಾಂಡ್ ದ್ವೀಪ ಡೆನ್ಮಾರ್ಕ್ ಸಾಮ್ರಾಜ್ಯದ ಭಾಗವಾಗಿದೆ, ಆದರೆ ರಕ್ಷಣೆ ಮತ್ತು ವಿದೇಶಾಂಗ ನೀತಿ ನೋಡಿಕೊಳ್ಳಲು ತನ್ನದೇ ಸರ್ಕಾರ ಹೊಂದಿದೆ. ಇತ್ತೀಚೆಗೆ ಡೆನ್ಮಾರ್ಕ್ ಸರ್ಕಾರ ಗ್ರೀನ್‌ಲ್ಯಾಂಡ್ ಭಾಗದಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಿದ್ದು, ಆರ್ಕ್ಟಿಕ್ ರಕ್ಷಣೆಗೆ ಕ್ರಮವನ್ನ ಕೈಗೊಂಡಿತ್ತು. ಇಷ್ಟೆಲ್ಲದರ ನಡುವೆ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಅಮೆರಿಕಗೆ ಸೇರಬೇಕು ಎಂದು ಹಠ ಹಿಡಿದಿದ್ದರು. ಹೀಗಾಗಿ ಗ್ರೀನ್‌ಲ್ಯಾಂಡ್ ಪ್ರಧಾನಿ ಕೂಡ ಸೇನಾ ಸಮರದ ಪರಿಸ್ಥಿತಿ ಎದುರಿಸಲು ಸಜ್ಜಾಗಿ ಎಂದು ಗ್ರೀನ್‌ಲ್ಯಾಂಡ್ ಪ್ರಜೆಗಳಿಗೆ ಸೂಚನೆ ನೀಡಿದ್ದರು. ಆದರೆ ಇದ್ದಕ್ಕಿದ್ದಂತೆ ಟ್ರಂಪ್ ಅವರು ಯು-ಟರ್ನ್ ತೆಗೆದುಕೊಂಡಿದ್ದಾರೆ.












Click it and Unblock the Notifications