Ukraine: ದೊಡ್ಡಣ್ಣ ಅಮೆರಿಕ ಇಟ್ಟ ಬೇಡಿಕೆಗೆ ಬೆಚ್ಚಿಬಿದ್ದ ಉಕ್ರೇನ್ ಅಧ್ಯಕ್ಷ!
ಸಣ್ಣ ಸಮಸ್ಯೆಯೇ ದೊಡ್ಡದಾಗಿದೆ, ರಷ್ಯಾ & ಉಕ್ರೇನ್ ಯುದ್ಧ ಕೆಲವೇ ದಿನಗಳಲ್ಲಿ ಮುಗಿದು ಹೋಗಲಿದೆ ಅಂತಾ ಅಂದುಕೊಂಡ ಜಗತ್ತಿಗೇ ಶಾಕ್ ಎದುರಾಗಿದೆ. ಯಾಕಂದ್ರೆ ಈ ಯುದ್ಧ ನೋಡ ನೋಡುತ್ತಲೇ 3 ವರ್ಷ ಮುಗಿಸಿ, 4ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ. ಹೀಗಿದ್ದಾಗಲೇ ಉಕ್ರೇನ್ ತನ್ನ ಬಳಿ ಅಸ್ತ್ರಗಳೇ ಇಲ್ಲ, ನಮಗೆ ಸಹಾಯ ಮಾಡಿ ಅಂತಾ ಅಮೆರಿಕದ ಎದುರು ಬೇಡಿಕೊಳ್ಳುತ್ತಿದೆ. ಆದರೆ ಇದಕ್ಕೆ ಅಮೆರಿಕ ಹೇಳಿದ್ದು ಏನು ಗೊತ್ತೆ?
ಜೋ ಬೈಡನ್ ಸರ್ಕಾರ ಉಕ್ರೇನ್‌ಗೆ ಎಲ್ಲಾ ರೀತಿಯ ಸಹಕಾರ ನೀಡಿತ್ತು, ಅಲ್ಲದೆ ಲಕ್ಷ ಲಕ್ಷ ಕೋಟಿ ರೂಪಾಯಿ ಮೌಲ್ಯದ ಮಿಲಿಟರಿ ಸಹಾಯ ಮಾಡಿದ್ದರು ಬೈಡನ್. ಆದರೆ ಯಾವಾಗ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದರೋ ಅಲ್ಲಿಂದ ಉಕ್ರೇನ್‌ಗೆ ನಡುಕ ಶುರುವಾಗಿತ್ತು. ಇದರ ಮುಂದುವರಿದ ಭಾಗವಾಗಿ ಅಮೆರಿಕ ನೀಡುತ್ತಿದ್ದ ಯುದ್ಧ ಅನುದಾನ ನಿಂತು ಹೋಗಿದೆ. ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ ಎದುರು ಮಹತ್ವದ ಬೇಡಿಕೆ ಇಟ್ಟಿದ್ದಾರೆ!

ಡೊನಾಲ್ಡ್ ಟ್ರಂಪ್ ಡಿಮ್ಯಾಂಡ್ ಏನು?
ನಮ್ಮ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ, ಅಮೆರಿಕದ ಪಾಲು ತುಂಬಾನೇ ದೊಡ್ಡದಾಗಿ ಇದೆ. ಅಮೆರಿಕ ಇಡೀ ಜಗತ್ತಿನ ಶ್ರೀಮಂತ ದೇಶ ಎಂಬ ಬಿರುದು ಪಡೆದಿದ್ದು, ಜಾಗತಿಕವಾಗಿ ನಂಬರ್ 1 ಸ್ಥಾನ ಕೂಡ ಪಡೆದುಕೊಂಡಿದೆ. ಹೀಗಿದ್ದರೂ ಮೈತುಂಬಾ ಸಾಲ ಮಾಡಿಕೊಂಡು ವಿಲವಿಲ ಒದ್ದಾಡುತ್ತಿರುವ ಜಗತ್ತಿನ ದೊಡ್ಡಣ್ಣನಿಗೆ ಆರ್ಥಿಕವಾಗಿ ದಿವಾಳಿಯಾಗುವ ಭಯ ಕಾಡುತ್ತಿದೆ.
ಹೀಗಿದ್ದಾಗ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ಕಠಿಣ ನಿಯಮ ಜಾರಿಗೆ ತಂದಿದ್ದು, ಬೇರೆ ದೇಶಗಳಿಗೆ ನೀಡುತ್ತಿದ್ದ ಅನುದಾನ ನಿಲ್ಲಿಸಿದ್ದಾರೆ. ಅದೇ ರೀತಿ ಉಕ್ರೇನ್‌ಗೆ ನೀಡುತ್ತಿದ್ದ ಅನುದಾನವೂ ಬಂದ್ ಆಗಿದೆ. ಆದರೆ ಈಗ ಅನುದಾನ ನೀಡಬೇಕು ಅಂದರೆ, ನೀವು ನಾವು ಹೇಳಿದ್ದು ಮಾಡಬೇಕು ಅಂತಿದೆ ಅಮೆರಿಕ. ಅದು ಏನೆಂದರೆ ಉಕ್ರೇನ್ ತಾನು ಪಡೆಯುವ ಅನುದಾನದ ಬದಲಿಗೆ ತನ್ನ ದೇಶದಲ್ಲಿ ಇರುವ ಪ್ರಮುಖ ಅದಿರುಗಳು ಸೇರಿ ಹಲವು ಸಂಪನ್ಮೂಲವನ್ನು ಅಮೆರಿಕಗೆ ನೀಡಬೇಕಂತೆ!
ಉಕ್ರೇನ್ ಮುಂದಿನ ಹೆಜ್ಜೆ ಏನು?
ಹೀಗೆ ಅಮೆರಿಕ ಇಟ್ಟ ಬೇಡಿಕೆಯನ್ನು ನೋಡಿ ಉಕ್ರೇನ್ ಸುಸ್ತಾಗಿ ಹೋಗಿದೆ. ಅಲ್ಲದೆ ಇದೆಲ್ಲಾ ನಡೆಯಲ್ಲ ಎಂಬ ನಿರ್ಧಾರಕ್ಕೂ ಉಕ್ರೇನ್ ನಾಯಕರು ಬಂದಿದ್ದಾರೆ. ಹೀಗಾಗಿ ರಷ್ಯಾ ದಾಳಿ ಎದುರಿಸುವ ಬಗ್ಗೆ ಉಕ್ರೇನ್‌ಗೆ ಈಗ ಹೊಸ ಚಿಂತೆ ಶುರುವಾಗಿದೆ. ಯಾಕಂದ್ರೆ ಈಗಾಗಲೇ ತನ್ನ ಬಳಿ ಇರುವ ಅಸ್ತ್ರಗಳನ್ನು ಖಾಲಿ ಮಾಡಿಕೊಂಡು ನರಳುತ್ತಿದೆ ಉಕ್ರೇನ್. ಹೀಗಾಗಿ, ಇದೀಗ ಅಮೆರಿಕ ನೀಡುವ ಅನುದಾನ ಉಕ್ರೇನ್‌ಗೆ ಬಹುಮುಖ್ಯವಾಗಿದೆ.












Click it and Unblock the Notifications