Donald Trump: ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಎಮರ್ಜೆರ್ನಿ ಘೋಷಣೆ; ಡೊನಾಲ್ಡ್ ಟ್ರಂಪ್
ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್, ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ವಲಸಿಗರ ವಿಚಾರದಲ್ಲಿ ಮೊದಲಿನಿಂದಲೂ ಕಠಿಣವಾಗಿರುವ ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ವಲಸಿಗರ ನಿಯಂತ್ರಿಸುವ ಬಗ್ಗೆ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ.
ಅಮೆರಿಕದ ಸುವರ್ಣ ಯುಗ ಪ್ರಾರಂಭವಾಗಿದೆ ಎಂದು ಹೇಳಿದ ಅವರು ಅಮೆರಿಕದ ಅಭಿವೃದ್ಧಿಯು ಪ್ರತಿಯೊಂದು ರಾಷ್ಟ್ರಕ್ಕೂ ಅಸೂಯೆ ಹುಟ್ಟಿಸುತ್ತದೆ ಎಂದಿದ್ದಾರೆ. ಮೆಕ್ಸಿಕೋದ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಮತ್ತು ರಾಷ್ಟ್ರೀಯ ಇಂಧನ ತುರ್ತುಸ್ಥಿತಿಯನ್ನು ಘೋಷಿಸುವುದಾಗಿ ಹೇಳಿದರು. 'ಮೇಕ್ ಅಮೇರಿಕಾ ಗ್ರೇಟ್ ಎಗೇನ್' (MAGA) ಪ್ರಚಾರದಲ್ಲಿ ಇದು ಅವರ ಪ್ರಮುಖ ಘೋಷಣೆಗಳು ಕೂಡ ಆಗಿದ್ದವು.

ವಲಸಿಗರ ಮೇಲೆ ಕಠಿಣ ಕ್ರಮ
ದಾಖಲೆ ಇಲ್ಲದೆ ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ವಲಸಿಗರನ್ನು ಗಡೀಪಾರು ಮಾಡುವುದಾಗಿ ಅವರು ಹೇಳಿದ್ದಾರೆ. ಪನಾಮ ಕಾಲುವೆಯನ್ನು ಅಮೆರಿಕ ವಾಪಸ್ ಪಡೆಯುತ್ತದೆ ಮತ್ತು ಮೆಕ್ಸಿಕೊ ಕೊಲ್ಲಿಯನ್ನು ಮರುನಾಮಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ತಾನು ಶಾಂತಿ ಪ್ರಿಯ ಮತ್ತು ಏಕೀಕರಣದಲ್ಲಿ ನಂಬಿಕೆ ಇಟ್ಟವನು ಎಂದು ಹೇಳಿದರು. ಹಮಾಸ್ ಇಸ್ರೇಲ್ ನಡುವಿನ ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆಯನ್ನು ಉದಾಹರಣೆಯಾಗಿ ನೀಡಿದರು. ಮಂಗಳ ಗ್ರಹಕ್ಕೆ ಗಗನಯಾತ್ರಿಗಳನ್ನು ಕಳಿಸುವ ಮೂಲಕ ಅಮೆರಿಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇನೆ ಎಂದು ಭರವಸೆ ನೀಡಿದ್ದಾರೆ.
"ಅಮೆರಿಕದ ಸುವರ್ಣಯುಗ ಈಗ ಪ್ರಾರಂಭವಾಗುತ್ತದೆ. ಅಮೆರಿಕ ಮತ್ತೆ ಹಿಂದೆಂದಿಗಿಂತಲೂ ಶ್ರೇಷ್ಠ, ಬಲಶಾಲಿ ಮತ್ತು ಅಸಾಧಾರಣ ದೇಶವಾಗಲಿದೆ. ಬದಲಾವಣೆಯ ಅಲೆಯು ದೇಶವನ್ನು ವ್ಯಾಪಿಸಿದೆ. ಇಡೀ ಪ್ರಪಂಚದ ಮೇಲೆ ಸೂರ್ಯನ ಬೆಳಕು ಬೀಳುತ್ತಿದೆ. ಅಮೆರಿಕವು ಮತ್ತೆ ಅವಕಾಶವನ್ನು ಬಳಸಿಕೊಂಡು ಬಲಿಷ್ಠವಾಗುತ್ತದೆ" ಎಂದು ಹೇಳಿದ್ದಾರೆ.
ತಮ್ಮ ಮೇಲಿನ ಹತ್ಯೆಯ ಯತ್ನದ ಬಗ್ಗೆ ಮಾತನಾಡಿದ ಅವರು, ನಮ್ಮ ಉದ್ದೇಶವನ್ನು ತಡೆಯಲು ಬಯಸುವವರು ನನ್ನ ಜೀವವನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಪೆನ್ಸಿಲ್ವೇನಿಯಾ ಮೈದಾನದಲ್ಲಿ ಕೊಲೆಗಡುಕನ ಗುಂಡು ನನ್ನ ಕಿವಿಯನ್ನು ಸೀಳಿದೆ. ಅಮೆರಿಕವನ್ನು ಮತ್ತೆ ಶ್ರೇಷ್ಠ ರಾಷ್ಟ್ರವನ್ನಾಗಿಸಲು ದೇವರು ನನ್ನನ್ನು ರಕ್ಷಿಸಿದನು ಎಂದು ನಾನು ನಂಬಿದ್ದೇನೆ ಎಂದು ಹೇಳಿದರು.
ಮೆಕ್ಸಿಕೊದೊಂದಿಗಿನ ದೇಶದ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವುದಾಗಿ ಹೇಳಿದ ಅವರು, ಎಲ್ಲಾ ಅಕ್ರಮ ಪ್ರವೇಶವನ್ನು ತಕ್ಷಣವೇ ನಿಲ್ಲಿಸಲಾಗುವುದು. ಅನಧಿಕೃತವಾಗಿ ದೇಶದೊಳಗೆ ವಾಸಿಸುತ್ತಿರುವ ವಿದೇಶಿಯರನ್ನು ಅವರ ಸ್ಥಳಗಳಿಗೆ ವಾಪಸ್ ಕಳಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ. ಅಕ್ರಮ ವಲಸಿಗರನ್ನು ಹಿಡಿದು ಬಿಡುಗಡೆ ಮಾಡುವ ಅಭ್ಯಾಸವನ್ನು ಕೊನೆಗೊಳಿಸುತ್ತೇನೆ, ನಮ್ಮ ದೇಶದ ಮೇಲಿನ ವಿನಾಶಕಾರಿ ಆಕ್ರಮಣವನ್ನು ಹಿಮ್ಮೆಟ್ಟಿಸಲು ನಾನು ದಕ್ಷಿಣ ಗಡಿಗೆ ಸೈನ್ಯವನ್ನು ಕಳಿಸುತ್ತೇನೆ ಎಂದು ಹೇಳಿದರು.
1798ರ ಏಲಿಯನ್ ಎನಿಮೀಸ್ ಕಾಯ್ದೆ ಜಾರಿಗೊಳಿಸುವ ಮೂಲಕ, ಅಮೆರಿಕದಲ್ಲಿ ಅಪಾರಧ ಕೃತ್ಯಗಳನ್ನು ಎಸಗುವ ಎಲ್ಲಾ ವಿದೇಶಿ ಗ್ಯಾಂಗ್‌ಗಳು ಮತ್ತು ಕ್ರಿಮಿನಲ್ ನೆಟ್‌ವರ್ಕ್‌ಗಳನ್ನು ನಾಶ ಮಾಡಲು ಫೆಡರಲ್ ಮತ್ತು ರಾಜ್ಯ ಕಾನೂನು ಜಾರಿ ಸಂಸ್ಥೆಗಳನ್ನು ಬಳಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ ಎಂದರು.












Click it and Unblock the Notifications